ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಬೊಮ್ಮನಹಳ್ಳಿಯಲ್ಲಿ ಅಂತರ್ಜಲ ಕುಸಿತ

ಜಲಕ್ಷಾಮದ ಭೀತಿ: ಕುಡಿಯುವ ನೀರಿನ ಬರ
Published 14 ಫೆಬ್ರುವರಿ 2024, 23:55 IST
Last Updated 14 ಫೆಬ್ರುವರಿ 2024, 23:55 IST
ಅಕ್ಷರ ಗಾತ್ರ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿಯಲ್ಲಿ ಕುಡಿಯುವ ನೀರಿನ ಬರ ಎದುರಾಗಿದೆ. ಮಳೆಯ ತೀವ್ರ ಅಭಾವದಿಂದಾಗಿ ಅಂತರ್ಜಲ ಕುಸಿತ ಕಂಡಿದ್ದು, 1200 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಬಹುತೇಕ ಕೊಳವೆಬಾವಿಗಳಲ್ಲಿ ಜೀವಜಲ ಪಾತಾಳಕ್ಕೆ ಇಳಿದಿದೆ.

ಅಗತ್ಯವಿರುವಷ್ಟು ಕಾವೇರಿ ನೀರು ಲಭ್ಯವಾಗದ ಕಾರಣ, ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆ ಏರುತ್ತಿದ್ದಂತೆ, ಟ್ಯಾಂಕರ್ ನೀರು ಪೂರೈಕೆದಾರರು ದರಗಳನ್ನು ₹900 ರಿಂದ ₹1000ಕ್ಕೆ ಹೆಚ್ಚಿಸಿದ್ದಾರೆ. ಇದು ₹1500ದವರೆಗೂ ವಸೂಲಿ ಮಾಡುತ್ತಿದ್ದಾರೆ. ಕೊಳವೆಬಾವಿಗಳು ಬತ್ತಿದ ಕಾರಣ, ಕೆಲವೆಡೆ ನೀರು ಶುದ್ಧೀಕರಣ ಘಟಕಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ.

ಬಂಡೇಪಾಳ್ಯ, ಚಿಕ್ಕಬೇಗೂರುಗೇಟ್, ಮೈಕೋ ಬಡಾವಣೆ, ಹೊಂಗಸಂದ್ರ, ಬಿಳೇಕಹಳ್ಳಿ, ಕೋಡಿಚಿಕ್ಕನಹಳ್ಳಿ ಸೇರಿದಂತೆ ಬಹುತೇಕ ಪ್ರದೇಶಗಳು ನೀರಿನ ಅಭಾವ ಎದುರಿಸುತ್ತಿವೆ. ಎಚ್ಎಸ್ಆರ್ ಬಡಾವಣೆಯಲ್ಲಿ ಕಂಪನಿಗಳು ಹಾಗೂ ಪ್ರತಿಷ್ಠಿತ ಅಪಾರ್ಟ್ ಮೆಂಟ್ ಸಮುಚ್ಛಯಗಳು ಹಾಗೂ ಪ್ರಭಾವಿಗಳು ವಾಸಿಸುವ ರಸ್ತೆಗಳಿಗೆ ಕಾವೇರಿ ನೀರು ಸರಾಗವಾಗಿ ಹರಿಯುತ್ತದೆ. ಆದರೆ, ಸಾಮಾನ್ಯರು ವಾಸಿಸುವ ಪ್ರದೇಶಗಳಿಗೆ ನೀರು ಸಿಗುತ್ತಿಲ್ಲ ಎಂಬ ಗಂಭೀರ ದೂರುಗಳು ಕೇಳಿ ಬಂದಿವೆ.

ಕೊಳವೆಬಾವಿ ಕೊರೆತಕ್ಕೆ ಇಲ್ಲ ಕಡಿವಾಣ:

ಅಂತರ್ಜಲ ಅಭಿವೃದ್ಧಿ ಮತ್ತು ಅತಿ ಬಳಕೆ ಕುರಿತಾಗಿ ಜಾರಿಯಲ್ಲಿರುವ ‘ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ರ ಪ್ರಕಾರ ಕೊಳವೆಬಾವಿ ಕೊರೆಯಲು ಜಲಮಂಡಳಿಯಿಂದ ಪರವಾನಗಿ ಪಡೆಯುವುದು ಕಡ್ಡಾಯ. ಆದರೆ ಪರವಾನಗಿ ಇಲ್ಲದೆಯೇ ಭೂಮಿಯ ಒಡಲನ್ನು ಮನಸೋಇಚ್ಛೆ ಬಗೆಯಲಾಗುತ್ತಿದೆ.

‘ಎಲ್ಲೆಲ್ಲೂ ಕೊಳವೆಬಾವಿಗಳ ಕೊರೆತದ ಮೊರೆತ ಹೆಚ್ಚಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ’ ಎಂದು ಸ್ಥಳೀಯರು ದೂರಿದ್ದಾರೆ. 

‘ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ 80 ಕುಟುಂಬಗಳಿವೆ, ಮೂರು ಕೊಳವೆಬಾವಿಗಳಿದ್ದವು, ಎಲ್ಲವೂ ಬತ್ತಿಹೋಗಿವೆ. ಇದೀಗ ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದೇವೆ. ತಿಂಗಳಿಗೆ ನೀರಿಗಾಗಿ ಪ್ರತಿ ಮನೆಗೆ ಸುಮಾರು ₹2000ದಿಂದ ₹2500 ಭರಿಸುತ್ತಿದ್ದೇವೆ. ಬೇಡಿಕೆ ಹೆಚ್ಚಿದಂತೆ ದರವೂ ಏರುತ್ತಿದ್ದು, ಬೇಸಿಗೆಯಲ್ಲಿ ಪರಿಸ್ಥಿತಿ ಎದುರಿಸುವುದು ಹೇಗೆಂಬ ಚಿಂತೆ ಶುರುವಾಗಿದೆ’ ಎಂದು ಮೈಕೋ ಬಡಾವಣೆಯ ಕ್ರೆಡೆನ್ಸ್ ಫ್ಲೋರಾ ಅಪಾರ್ಟ್ ಮೆಂಟ್ ನ ನಿವಾಸಿ ಸಂದೀಪ್ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

‘ಬಂಡೇಪಾಳ್ಯದಲ್ಲಿ ಕೂಲಿಕಾರ್ಮಿಕರೇ ಹೆಚ್ಚಾಗಿದ್ದೇವೆ. ಇಲ್ಲಿ ಹತ್ತು ದಿನಗಳಿಗೊಮ್ಮೆ ಒಂದು ಬಾರಿ ಮುಕ್ಕಾಲು ಗಂಟೆ ಕಾವೇರಿ ನೀರು ಬಿಡುತ್ತಾರೆ. 4 ಸಾವಿರ ಲೀಟರ್ ಟ್ಯಾಂಕರ್ ನೀರಿಗೆ ಈಗ ₹600 ರಿಂದ ₹700 ಇದೆ. ಬಡವರು ಬದುಕುವುದಾದರೂ ಹೇಗೆ’ ಎಂದು ಸ್ಥಳೀಯ ನಿವಾಸಿ ನೀಲಮ್ಮ ಅಳಲು ತೋಡಿಕೊಂಡರು.

‘ಜಲಮೂಲಗಳನ್ನು ಸಂರಕ್ಷಿಸುವುದು, ತ್ಯಾಜ್ಯ ನೀರಿನ ಮರು ಬಳಕೆ, ಮಳೆ ನೀರು ಸಂಗ್ರಹ, ನೀರಿನ ಮಿತ ಬಳಕೆಯಂತಹ ಕಾರ್ಯಕ್ರಮಗಳು ಕೇವಲ ಕಾಗದದಲ್ಲೇ ಉಳಿದಿವೆ, ಇದರಲ್ಲಿ ಅಧಿಕಾರಶಾಹಿಯ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ’ ಎನ್ನುತ್ತಾರೆ ಎಚ್ಎಸ್ಆರ್ ನಿವಾಸಿ ಡಾ.ನಾರಾಯಣರೆಡ್ಡಿ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಸತೀಶ್ ರೆಡ್ಡಿ, ‘ನೀರಿನ ಸಮಸ್ಯೆ ಉಲ್ಬಣಗೊಂಡಿರುವುದು ಹೌದು. ಕಾವೇರಿ ನೀರಿನ ಪೂರೈಕೆ ಕಡಿಮೆಯಾಗಿದೆ. ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಭಾವ ಹೆಚ್ಚಿರುವ ಪ್ರದೇಶಗಳಿಗೆ ಜಲಮಂಡಳಿಯಿಂದಲೇ ಟ್ಯಾಂಕರ್ ನೀರು ಪೂರೈಕೆ ಮಾಡಬೇಕು ಮತ್ತು ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗದಂತೆ ನಿಗಾವಹಿಸುವಂತೆ ಸೂಚಿಸಿದ್ದೇನೆ’ ಎಂದರು.

‘ಇಚ್ಛಾಶಕ್ತಿ ಅಗತ್ಯ’

‘ಅಂತರ್ಜಲ ಕುರಿತಾಗಿ ನಮ್ಮಲ್ಲಿ ಅಜ್ಞಾನ ಆವರಿಸಿದೆ. ಅಂತರ್ಜಲದ ಮಟ್ಟ ಅರಿಯಲು ದತ್ತಾಂಶ ಮುಖ್ಯ. ಆದರೆ ದತ್ತಾಂಶ ಸಂಗ್ರಹಿಸುವ ವ್ಯವಸ್ಥೆಯಾಗಲಿ ಕಾಳಜಿಯಾಗಲಿ ಕಾಣುತ್ತಿಲ್ಲ. ದಿನೇ ದಿನೇ ಮಣ್ಣಿನ ತೇವಾಂಶ ಸಾಮರ್ಥ್ಯ ಕ್ಷೀಣಿಸುತ್ತಿದೆ ನೀರಿನ ಬಳಕೆಯ ವಿಧಾನವೇ ಅವೈಜ್ಞಾನಿಕವಾಗಿದೆ. ಆದ್ದರಿಂದ ಸರ್ಕಾರಿ ಸಂಸ್ಥೆಗಳು ಭೂ ಜಲದ ಕುರಿತು ಜಾಗೃತಿ ಮೂಡಿಸುವ ಜರೂರಿದೆ. ಕೆರೆಗಳ ನಿರ್ವಹಣೆ ಮೋಡ ಬಿತ್ತನೆ ಮಳೆ ನೀರು ಸಂಗ್ರಹವನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದು ಹಾಗೂ ನೀರಿನ ಬಳಕೆಯ ವಿಧಾನದಲ್ಲಿ ಬದಲಾವಣೆ ತರುವುದು ಇತ್ಯಾದಿ ಮಾರ್ಗಗಳಿಂದ ಜಲಕ್ಷಾಮವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದಾಗಿದೆ. ಇದಕ್ಕೆ ಆಡಳಿತದ ಇಚ್ಛಾಶಕ್ತಿ ಮತ್ತು ಸಮುದಾಯದ ಸಹಭಾಗಿತ್ವ ಬೇಕು. ಡಾ.ಪ್ರಕಾಶ್ ಭೂ ಜಲತಜ್ಞ ಹಾಗೂ ಕರ್ನಾಟಕ ಕೆರೆ ನಿರ್ವಹಣಾ ಪ್ರಾಧಿಕಾರದ ಸದಸ್ಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT