ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಲಮಂಡಳಿಯಿಂದ ‘ಅಂತರ್ಜಲ ಕಾರ್ಯಪಡೆ’

Published 22 ಏಪ್ರಿಲ್ 2024, 15:31 IST
Last Updated 22 ಏಪ್ರಿಲ್ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅಂತರ್ಜಲದ ಮೇಲೆ ನಿಗಾವಹಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಹಾಗೂ ಕೇಂದ್ರ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯುಬಿ), ಕರ್ನಾಟಕ ರಾಜ್ಯ ಅಂತರ್ಜಲ ಪ್ರಾಧಿಕಾರದ ಪ್ರತಿನಿಧಿಗಳೊಂದಿಗೆ ‘ಅಂತರ್ಜಲ ಕಾರ್ಯಪಡೆ’ ರಚಿಸಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಸೋಮವಾರ ಐಐಎಸ್‌ಸಿ, ಸಿಜಿಡಬ್ಲ್ಯುಬಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಈ ಕಾರ್ಯಪಡೆ ಮೂಲಕ ನಗರದ ಅಂತರ್ಜಲ ಮಟ್ಟದ ಮೇಲೆ ನಿಗಾವಹಿಸಲಾಗುವುದು. ನಿರಂತರವಾಗಿ ದತ್ತಾಂಶಗಳ ಕ್ರೋಡೀಕರಣ, ವಿಶ್ಲೇಷಣೆ ಮೂಲಕ ಉತ್ತಮ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ನೀರಿನ ಕೊರತೆ ಎದುರಾಗಲು ಅಂತರ್ಜಲ ಮಟ್ಟ ಕಡಿಮೆಯಾಗಿರುವುದೇ ಪ್ರಮುಖ ಕಾರಣ. ಅಂತರ್ಜಲ ಮಟ್ಟ ಯಾವ ಹಂತದಲ್ಲಿದೆ, ಯಾವ ಯಾವ ಪ್ರದೇಶಗಳಲ್ಲಿ ನೀರಿನ ಲಭ್ಯತೆ ಹೆಚ್ಚಾಗಿದೆ ಎಂಬ ಮಾಹಿತಿ ಸಾಂಪ್ರದಾಯಿಕ ವ್ಯವಸ್ಥೆಯಿಂದ ದೊರೆಯುತ್ತಿಲ್ಲ. ಹೀಗಾಗಿ, ಐಐಎಸ್‌ಸಿ ವಿಜ್ಞಾನಿಗಳು, ಸಿಜಿಡಬ್ಲ್ಯುಬಿ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಜೊತೆಗೂಡಿ ‘ಎಐ ಬೇಸ್ಡ್‌ ಅಡ್ವಾನ್ಸ್ಡ್‌ ಗ್ರೌಂಡ್‌ ವಾಟರ್‌ ಮಾನಿಟರಿಂಗ್‌ ಸಿಸ್ಟಮ್‌’ ಅನ್ನು ಜಲಮಂಡಳಿ ಅಳವಡಿಸಿಕೊಳ್ಳಲಿದೆ ಎಂದು ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

ಐಐಎಸ್‌ಸಿ ವಿಜ್ಞಾನಿಗಳು ತಂತ್ರಜ್ಞಾನದ ನಿರ್ಮಾಣ ಮತ್ತು ಅಳವಡಿಕೆಯ ಮುಂದಾಳತ್ವ ವಹಿಸಲಿದ್ದಾರೆ. ಮಾಹಿತಿ ಸಂಗ್ರಹ, ದತ್ತಾಂಶದ ವಿಶ್ಲೇಷಣೆ ಸೇರಿದಂತೆ ಅಗತ್ಯ ಮಾಹಿತಿಯ ಕ್ರೋಢೀಕರಣ ಹಾಗೂ ವರದಿ ನೀಡಲಿದೆ ಎಂದರು.

ಈಗ ಜಲ ಮರುಪೂರಣ ವ್ಯವಸ್ಥೆಯನ್ನು ಅಳವಡಿಸುವಾಗ ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ಒಳಗೊಂಡ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿಲ್ಲ. ಇದಕ್ಕೆ ಮಾಹಿತಿಯ ಕೊರತೆಯೇ ಕಾರಣ. ಹೊಸ ವ್ಯವಸ್ಥೆಯ ಅಳವಡಿಕೆಯಿಂದ ಯಾವ ಪ್ರದೇಶದಲ್ಲಿ‌ ಮರುಪೂರಣ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ಮಾಹಿತಿ ದೊರೆಯಲಿದೆ. ಇದೇ ರೀತಿ ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಪರಿಣಾಮಕಾರಿ ಕ್ರಮಗಳ ಬಗ್ಗೆಯೂ ಮಾಹಿತಿ ದೊರೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಶೇಖರ್‌ ಎಂ, ಸಹ ಪ್ರಾಧ್ಯಾಪಕ ಎಲ್.ಎನ್‌ ರಾವ್‌, ಸಿಜಿಡಬ್ಲ್ಯುಬಿ ಪ್ರಾದೇಶಿಕ ನಿರ್ದೇಶಕ ಜ್ಯೋತಿ ಕುಮಾರ್‌, ವಿಜ್ಞಾನಿಗಳಾದ ಎಚ್‌.ಪಿ ಜಯಪ್ರಕಾಶ್‌ ಮತ್ತು ರಾಹುಲ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT