ಸೋಮವಾರ, ಮಾರ್ಚ್ 1, 2021
30 °C

ರಾಜ್ಯದ ಜೈಲುಗಳ ಸ್ಥಿತಿ ಉತ್ತಮ: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಂಬೈನ ಜೈಲುಗಳ ಸ್ಥಿತಿ ಗಮನಿಸಿದರೆ ಕರ್ನಾಟಕದ ಜೈಲುಗಳ ಸ್ಥಿತಿ ಉತ್ತಮವಾಗಿದೆ’ ಎಂದು ರಾಜ್ಯ ಹೈಕೋರ್ಟ್‌ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

 ಜೈಲುಗಳಲ್ಲಿನ ಅಸಹಜ ಸಾವು ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ಹಾಗೂ ಎಚ್.ಟಿ.ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯದ ಜೈಲುಗಳ ಸ್ಥಿತಿಗತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಓಕಾ ಅವರು, ‘ರಾಜ್ಯದಾದ್ಯಂತ, ಜೈಲುಗಳಲ್ಲಿ 2017ರ ನವೆಂಬರ್ 1ರಿಂದ 2019ರ ಮಾರ್ಚ್ 31ರವರೆಗೆ ಎಷ್ಟು ಅಸಹಜ ಸಾವಿನ ಪ್ರಕರಣ ನಡೆದಿವೆ ಮತ್ತು ಅವರ
ಸಂಬಂಧಿಕರಿಗೆ ತಾತ್ಕಾಲಿಕವಾಗಿ ಎಷ್ಟು ಪರಿಹಾರ ನೀಡಿದ್ದೀರಿ‌ ಎಂಬ ಬಗ್ಗೆ ಒಂದು ತಿಂಗಳಲ್ಲಿ ಮಾಹಿತಿ ನೀಡಿ’ ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದರು.

ಮತ್ತೊಂದು ಪ್ರಕರಣ: ‘ಮಾನಸಿಕ ಕಾಯಿಲೆ ಕಾಯ್ದೆ-2017ರ ಪ್ರಕಾರ ಕೈದಿಗಳಿಗೆ ಒದಗಿಸಲಾಗುತ್ತಿರುವ ವೈದ್ಯಕೀಯ ಸೌಲಭ್ಯಗಳ ಕುರಿತು ಸಲ್ಲಿಸಲಾಗಿರುವ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ನ್ಯಾಯಪೀಠ ಇದೇ ವೇಳೆ ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು, ‘ರಾಜ್ಯದ 9 ಕೇಂದ್ರ ಕಾರಾಗೃಹ ಹಾಗೂ 22 ಜಿಲ್ಲಾ ಕಾರಾಗೃಹಗಳಲ್ಲಿ 562 ಕೈದಿಗಳ ಮಾನಸಿಕ ಕಾಯಿಲೆಗೆ ಚಿಕಿತ್ಸೆ ಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಇದಕ್ಕೆ ನ್ಯಾಯಪೀಠ, ‘ಪ್ರತಿಯೊಂದು ಜೈಲಿನಲ್ಲಿಯೂ ಮನೋರೋಗಿಗಳಿಗೆ ಪ್ರತ್ಯೇಕ ವಾರ್ಡ್ ಸ್ಥಾಪನೆ ಮತ್ತು ಮಾನಸಿಕ ಕಾಯಿಲೆ ನಿರ್ವಹಣಾ ಮಂಡಳಿ ರಚನೆ ಮಾಡುವ ದಿಸೆಯಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಒಂದು ತಿಂಗಳಲ್ಲಿ ಮಾಹಿತಿ ನೀಡಿ’ ಎಂದು ಸೂಚಿಸಿತು. ವಿಚಾರಣೆಯನ್ನು ಆಗಸ್ಟ್‌ 2ಕ್ಕೆ ಮುಂದೂಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು