ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ವೆಬ್‌ ಹೋಸ್ಟ್‌ ಮಾಡಿ: ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

Published 25 ಅಕ್ಟೋಬರ್ 2023, 15:41 IST
Last Updated 25 ಅಕ್ಟೋಬರ್ 2023, 15:41 IST
ಅಕ್ಷರ ಗಾತ್ರ

ಬೆಂಗಳೂರು: ‘ಇನ್ನು ಮುಂದೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅರೆನ್ಯಾಯಿಕ ಪ್ರಾಧಿಕಾರಗಳ ಅಂದಂದಿನ ವಿಷಯಗಳ ಪಟ್ಟಿ ಮತ್ತು ಪ್ರತಿ ದಿನದ ಆದೇಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು‘ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಎಂ.ಉಮಾದೇವಿ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು, ಪಾಲಿಕೆ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ. ‘ಪಾಲಿಕೆ ನಾಲ್ಕು ವಾರಗಳಲ್ಲಿ ಈ ಕುರಿತು ಯಾವ ಕ್ರಮ ಕೈಗೊಂಡಿದೆ ಎಂಬ ಬಗ್ಗೆ ಸಮಗ್ರ ಅನುಪಾಲನಾ ವರದಿ‘ ಸಲ್ಲಿಸಬೇಕು‘’ ಎಂದು ತಾಕೀತು ಮಾಡಿದೆ.

‘ಬಿಬಿಎಂಪಿ ಮುಖ್ಯ ಆಯುಕ್ತರು, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಹಯೋಗದೊಂದಿಗೆ ಹೈಕೋರ್ಟ್‌, ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿರುವ ವ್ಯವಸ್ಥೆಯಂತೆ ಪ್ರತಿದಿನದ ಕಾಸ್‌ ಲಿಸ್ಟ್‌ (ವಿಷಯಗಳ ಪಟ್ಟಿ) ಮತ್ತು ಆದೇಶಗಳನ್ನು ವೆಬ್‌ ಹೋಸ್ಟ್‌ ಮಾಡಲು ಕ್ರಮ ಕೈಗೊಳ್ಳಬೇಕು. ಇತ್ತೀಚೆಗೆ ಕಂದಾಯ ಇಲಾಖೆಯೂ ತನ್ನ ಪ್ರತಿದಿನದ ಆದೇಶಗಳನ್ನು ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ‘ ಎಂದು ನ್ಯಾಯಪೀಠ ಬಿಬಿಎಂಪಿ ಗಮನ ಸೆಳೆದಿದೆ. 

ಅರ್ಜಿದಾರರಿಗೆ ಸಂಬಂಧಿಸಿದ ಸ್ಥಿರಾಸ್ತಿ ವ್ಯಾಜ್ಯವೊಂದು ಪಾಲಿಕೆಯ ಅರೆ ನ್ಯಾಯಿಕ ಪ್ರಾಧಿಕಾರದ ಮುಂದೆ ವಿಚಾರಣೆಗೆ ಬಾಕಿ ಇತ್ತು. ಅರೆನ್ಯಾಯಿಕ ಪ್ರಾಧಿಕಾರದ ಅಧಿಕಾರಿ ಚುನಾವಣಾ ಕರ್ತವ್ಯದಲ್ಲಿದ್ದ ಕಾರಣ ವಿಚಾರಣೆ ಮುಂದೂಡಲಾಗಿತ್ತು. ಮುಂದಿನ ವಿಚಾರಣಾ ದಿನಾಂಕವನ್ನು ನಿಗದಿ ಮಾಡಿರಲಿಲ್ಲ. ಆದರೆ, ಅರ್ಜಿದಾರರಿಗೆ ನೋಟಿಸ್‌ ನೀಡದೆ 2023ರ ಮೇ 26ರಂದು ಏಕಾಏಕಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡು ಆದೇಶ ಹೊರಡಿಸಲಾಗಿತ್ತು. ಆ ಅದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT