ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಜರಂಗ ದಳ ಮುಖಂಡ ಭರತ್ ಕುಮಾರ್ ಗಡಿಪಾರು ಆದೇಶ ರದ್ದುಗೊಳಿಸಿದ ಹೈಕೋರ್ಟ್

Published 6 ಏಪ್ರಿಲ್ 2024, 15:37 IST
Last Updated 6 ಏಪ್ರಿಲ್ 2024, 15:37 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಭಜರಂಗ ದಳ ಮುಖಂಡ ಭರತ್ ಕುಮಾರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಮೈಸೂರಿಗೆ ಗಡಿಪಾರು ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಕುರಿತಂತೆ ಭರತ್ ಕುಮಾರ್ (35) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, "ಭರತ್ ಕುಮಾರ್ ತಮ್ಮ ವಿರುದ್ಧ ಇದ್ದ ಎಂಟು ಕ್ರಿಮಿನಲ್ ಪ್ರಕರಣಗಳಲ್ಲಿ ಈಗಾಗಲೇ ಆರು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾರೆ. ಒಂದು ಪ್ರಕರಣದಲ್ಲಿ ನ್ಯಾಯಾಲಯದ ತಡೆ ಆದೇಶ ಇದ್ದು ಇನ್ನೊಂದು ವಿಚಾರಣೆ ಹಂತದಲ್ಲಿದೆ. ಹೀಗಿರುವಾಗ ಮಂಗಳೂರು ಉಪ ವಿಭಾಗಾಧಿಕಾರಿ ಹೊರಡಿಸಿರುವ ಗಡಿಪಾರು ಆದೇಶ ಊಹೆಗಳಿಂದ ಕೂಡಿದೆ. ಭರತ್ ಕುಮಾರ್ ಅಪರಾಧಿಕ ಪ್ರಕರಣಗಳಲ್ಲಿ ಭಾಗಿಯಾಗಬಹುದು ಎಂಬ ಶಂಕೆ ಕಾನೂನು ಬಾಹಿರ. ಆದ್ದರಿಂದ, ಗಡಿಪಾರು ಆದೇಶ ರದ್ದುಪಡಿಸಬೇಕು" ಎಂದು ಪ್ರತಿಪಾದಿಸಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಮಂಗಳೂರು ಉಪ ವಿಭಾಗಾಧಿಕಾರಿ ಎಸ್.ಜೆ.ಹರ್ಷವರ್ಧನ್; ಕರ್ನಾಟಕ ಪೊಲೀಸ್ ಕಾಯ್ದೆ-1963ರ ಕಲಂ 55 ಮತ್ತು 56ರ ಅಡಿಯಲ್ಲಿ ತಮ್ಮ ಅರೆನ್ಯಾಯಿಕ ಪ್ರಕ್ರಿಯೆಯಲ್ಲಿನ ಅಧಿಕಾರ ಚಲಾಯಿಸಿ ಇದೇ 2ರಂದು ಹೊರಡಿಸಿದ್ದ ಗಡಿಪಾರು ಆದೇಶವನ್ನು ರದ್ದುಗೊಳಿಸಿದ್ದಾರೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲರಾದ ಸುಯೋಗ್ ಹೇರಳೆ ಮತ್ತು ನಿಶಾಂತ್ ಕುಶಾಲಪ್ಪ ವಕಾಲತ್ತು ವಹಿಸಿದ್ದರು.

ಆದೇಶ ಏನಿತ್ತು?: "ಭರತ್ ಕುಮಾರ್ ಬಂಟ್ವಾಳ ತಾಲ್ಲೂಕು ಪುದು ಗ್ರಾಮದ ಕುಮ್ಡೇಲು ಮನೆ ನಿವಾಸಿಯಾಗಿದ್ದು ಈತ ರೌಡಿ ಸ್ವಭಾವ ಹೊಂದಿರುತ್ತಾನೆ. ತನ್ನ ಸಹಚರರೊಂದಿಗೆ ಪರಂಗಿಪೇಟೆ, ಕಡೆಗೋಳಿ, ಬಿ.ಸಿ.ರೋಡ್ ಹಾಗೂ ಬಂಟ್ವಾಳ ಪ್ರದೇಶಗಳಲ್ಲಿ ಕೊಲೆ, ಕೊಲೆ ಯತ್ನ, ದೊಂಬಿ, ಹಲ್ಲೆಯಂತಹ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. 2024ರ ಮಾರ್ಚ್ ಮತ್ತು ಮೇ ಮಧ್ಯದಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿದ್ದು ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಗತ್ಯ ಇರುತ್ತದೆ. ಈ ದೃಷ್ಟಿಯಿಂದ ಈತನನ್ನು 2024ರ ಮಾರ್ಚ್ 28ರಿಂದ 2024ರಿಂದ ಜಾರಿಗೆ ಬರುವಂತೆ ಜೂನ್ 30ರವರೆಗೆ ಗಡಿಪಾರು ಮಾಡಲಾಗಿದೆ" ಎಂದು ಆದೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT