ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಥವಾಗಿ ಬಿದ್ದ ಬ್ಯಾರಿಕೇಡ್‌ಗಳು

ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದ ಸ್ಥಳದಲ್ಲಿ ಕಸ ಸಮಸ್ಯೆ
Last Updated 30 ಮೇ 2018, 13:39 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಈಚೆಗೆ ಇಲ್ಲಿನ ದೇಶವಳ್ಳಿ ಸಮೀಪ ಆಗಮಿಸಿ ಭಾಷಣ ಮಾಡಿದ್ದ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್‌ಗಾಗಿ ಅಳವಡಿಸಿದ್ದ ಪೊಲೀಸ್ ಬ್ಯಾರಿಕೇಡ್‍ಗಳನ್ನು ಇನ್ನೂ ತೆರವುಗೊಳಿಸಿಲ್ಲ. ಈಗ ಹುಡುಗರು ಕ್ರಿಕೆಟ್ ಆಟದ ಬೌಂಡರಿ ಗೆರೆಗೆ ಬ್ಯಾರಿಕೇಡ್‍ಗಳನ್ನು ಬಳಸಿಕೊಂಡು ಆಟವಾಡುತ್ತಿದ್ದಾರೆ.

ಸಂತೇಮರಹಳ್ಳಿ ಹಾಗೂ ದೇಶವಳ್ಳಿ, ಹೆಗ್ಗವಾಡಿಪುರ ಗ್ರಾಮಗಳ ನಡುವೆ ವಿಶಾಲವಾದ 25 ಎಕರೆ ಪ್ರದೇಶದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಂದ ಚುನಾವಣಾ ಪ್ರಚಾರದ ಸಮಾವೇಶ ನಡೆಸಲು ಈಚೆಗೆ ಬೃಹತ್ ವೇದಿಕೆ ನಿರ್ಮಿಸಲಾಗಿತ್ತು. ಪೊಲೀಸ್ ಬಂದೋಬಸ್ತ್‌ಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪೊಲೀಸ್ ಬ್ಯಾರಿಕೇಡ್‍ಗಳನ್ನು ತಂದು ಅಳವಡಿಸಲಾಗಿತ್ತು. ಸಮಾವೇಶ ಮುಗಿದು ತಿಂಗಳು ಮುಗಿಯುತ್ತಾ ಬಂದಿದೆ. ಪೊಲೀಸ್ ಬ್ಯಾರಿಕೇಡ್‍ಗಳನ್ನು ತೆರವುಗೊಳಿಸದ ಕಾರಣ ಮೈದಾನದಲ್ಲಿ ಅವು ಅನಾಥವಾಗಿ ಬಿದ್ದಿವೆ.

ಈ ವಿಶಾಲವಾದ ಮೈದಾನದಲ್ಲಿ ಸುತ್ತಮುತ್ತಲಿನ ಹುಡುಗರು ಬೇಸಿಗೆ ರಜಾ ಕಳೆಯಲು ಈ ಮೈದಾನದಲ್ಲಿ ಕ್ರಿಕೆಟ್ ಆಡಲು ಬರುತ್ತಿದ್ದರು. ಅನಾಥವಾಗಿ ಬಿದ್ದಿರುವ ಈ ಬ್ಯಾರಿಕೇಡ್‍ಗಳನ್ನು ಗಮನಿಸಿದ ಅವರು ಕ್ರಿಕೆಟ್ ಆಟದ ಬೌಂಡರಿ ಗೆರೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಅನುಪಯುಕ್ತವಾಗಿ ಬಿದ್ದಿರುವ ಬ್ಯಾರಿಕೇಡ್‍ಗಳು ಮಕ್ಕಳ ಆಟಕ್ಕೆ ಅನುಕೂಲವಾಗುತ್ತಿದೆ ಎಂದು ದಾರಿಹೋಕರು ಹೇಳುತ್ತಾರೆ.

ಚಾಮರಾಜನಗರ ಜಿಲ್ಲಾ ಪೊಲೀಸ್ ಎಂದು ಬರೆದಿರುವ ಬ್ಯಾರಿಕೇಡ್‍ಗಳು ಅಲ್ಲಲ್ಲಿ ಬಿದ್ದಿವೆ. ರಾಜಕೀಯ ಸಮಾವೇಶ ಮುಗಿದಿದ್ದರೂ ಇವುಗಳನ್ನು ಸಂರಕ್ಷಿಸಿಡುವ ಕೆಲಸಕ್ಕೆ ಸಂಬಂಧಪಟ್ಟವರು ಮುಂದಾಗಿಲ್ಲ ಎಂದು ಸ್ಥಳೀಯ ನಿವಾಸಿ ಕೃಷ್ಣಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.

ದೇಶಕ್ಕೆ ಸ್ವಚ್ಛತೆ ಬೋಧಿಸುವವರು ಅಶುಚಿತ್ವ ಸೃಷ್ಟಿಸಿ ಹೋಗಿದ್ದಾರೆ. ಸ್ವಚ್ಛತೆ ಕಡೆಗೆ ಗಮನ ಹರಿಸಿಲ್ಲ ಎಂದು ಸನಿಹದ ನಿವಾಸಿಗಳು, ವಾಯುವಿಹಾರಕ್ಕಾಗಿ ಬರುವವರು ದೂರುತ್ತಾರೆ.

ಅನಾಥವಾಗಿ ಬಿದ್ದಿರುವ ಪೊಲೀಸ್ ಬ್ಯಾರಿಕೇಡ್‍ಗಳನ್ನು ಸಂರಕ್ಷಿಸಿಡಬೇಕು. ಜತೆಗೆ ವ್ಯವಸಾಯ ಮಾಡುವ ಜಮೀನುಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು ಬೀಳದಂತೆ ಎಚ್ಚರಿಕೆ ವಹಿಸಬೇಕು ಎಂದು ದೇಶವಳ್ಳಿ ಹಾಗೂ ಹೆಗ್ಗವಾಡಿಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮೈದಾನದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ

ಸಮಾವೇಶಕ್ಕೆ ಆಗಮಿಸಿದ ಸಾರ್ವಜನಿಕರಿಗೆ ವಿತರಿಸಲು ತಂದಿದ್ದ ನೀರು ಹಾಗೂ ಮಜ್ಜಿಗೆ ತುಂಬಿದ ಪ್ಲಾಸ್ಟಿಕ್ ಚೀಲಗಳು ಮೈದಾನದ ತುಂಬಾ ವ್ಯಾಪಿಸಿಕೊಂಡು ಹರಡಿವೆ. ಈ ಪ್ಲಾಸ್ಟಿಕ್‍ಗಳು ಗಾಳಿಗೆ ಬೀಸಿ ಸನಿಹದ ಮನೆಗಳತ್ತ ತೂರಿವೆ. ಸಣ್ಣ ಸಣ್ಣ ಪ್ಲಾಸ್ಟಿಕ್ ಚೀಲಗಳು ಜಮೀನುಗಳ ಸುತ್ತ ಬಿದ್ದಿವೆ. ಮಳೆಗಾಲವಾಗಿರುವುದರಿಂದ ಬಿತ್ತನೆ ಮಾಡುವ ಜಮೀನಿನವರು ಪ್ಲಾಸ್ಟಿಕ್‍ಗಳನ್ನು ಹಾಯ್ದು ಶೇಖರಿಸಿ ಜಮೀನಿನಿಂದ ಹೊರಗಡೆ ಬೀಸಾಡುತ್ತಿದ್ದಾರೆ. ಮೈದಾನದಲ್ಲಿ ಮಳೆಗೆ ಮೇವು ಬೆಳೆದಿರುವುದರಿಂದ ಜಾನುವಾರುಗಳು ಪ್ಲಾಸ್ಟಿಕ್‍ಗಳನ್ನು ಮೇವಿನ ಜೊತೆಗೆ ತಿನ್ನುವಂತಹ ಪರಿಸ್ಥಿತಿ ಉಂಟಾಗಿದೆ.

– ಎಸ್‌.ಮಹದೇವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT