ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ಐಗೆ ಮಾಹಿತಿ ಹಂಚಿಕೆ ಆರೋಪ: ಜಾಮೀನು ನಿರಾಕರಣೆ

Last Updated 18 ಜುಲೈ 2022, 19:25 IST
ಅಕ್ಷರ ಗಾತ್ರ

ಬೆಂಗಳೂರು: ಪಾಕಿಸ್ತಾನದ ಐಎಸ್‌ಐ ಜೊತೆ ಭಾರತೀಯ ನೌಕಾದಳದ ಮಾಹಿತಿ ಹಂಚಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಜಿತೇಂದರ್ ಸಿಂಗ್ ಎಂಬುವರಿಗೆ
ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.

ಜಾಮೀನು ಕೋರಿ ನಗರದ ಕಾಟನ್ ಪೇಟೆಯ ಜೊಲ್ಲಿ ಮೊಹಲ್ಲಾದ ಜಿತೇಂದರ್ ಸಿಂಗ್ (24) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಇದು ದೇಶದ ಸಮಗ್ರತೆ ಹಾಗೂ ಸೌರ್ವಭೌಮತ್ವಕ್ಕೆ ಸಂಬಂಧಿಸಿದ ವಿಷಯವಾಗಿದೆ. ಜಾಮೀನು ನೀಡಿದರೆ ಇದರಿಂದ ದುಷ್ಪರಿಣಾಮವಾಗುವ ಸಾಧ್ಯತೆಯಿದೆ’ ಎಂದು ಅಭಿಪ್ರಾಯಪಟ್ಟಿದೆ.

ವಿಚಾರಣೆ ವೇಳೆ ಆರೋಪಿ ಪರ ವಕೀಲ ಗೋಪಾಲ ಸಿಂಗ್, 'ಸಿಂಗ್ ಅಮಾಯಕ. ಆತನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಪಾಕಿಸ್ತಾನದ ಪೂಜಾ ಎಂಬಾಕೆಯೊಂದಿಗೆ ಕೇವಲ ಚಾಟ್ ಮಾಡಿದ್ದಾನೆ. ಆಕೆಯ ಪ್ರೀತಿ ಗಳಿಸಲು ಭಾರತೀಯ ಸೇನಾ ಸಮವಸ್ತ್ರ ಧರಿಸಿ ಸೈನಿಕ ಎಂದು ಬಿಂಬಿಸಿಕೊಂಡಿದ್ದಾನೆ. ಸಮವಸ್ತ್ರ ಮತ್ತು ಹಂಚಿಕೊಂಡ ಫೋಟೊ ಹೊರತುಪಡಿಸಿ ಆರೋಪವನ್ನು ಪುಷ್ಟೀಕರಿಸುವ ಬೇರಾವುದೇ ದಾಖಲೆಗಳಿಲ್ಲ. ಹಾಗಾಗಿ, ಜಾಮೀನು ನೀಡಬೇಕು' ಎಂದು ಕೋರಿದ್ದರು.

ಆದರೆ, ಇದನ್ನು ನಿರಾಕರಿಸಿರುವ ನ್ಯಾಯಪೀಠ, 'ಅರ್ಜಿದಾರ ಸಂಗ್ರಹಿಸಿ ಹಂಚಿಕೊಂಡಿರುವ ಮಾಹಿತಿ ಭಾರತದ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದಲೂ ಅತ್ಯಂತ ಅಪಾಯಕಾರಿಯಾಗಿದೆ' ಎಂದು ಹೇಳಿದೆ. ರಾಜ್ಯ ಪ್ರಾಸಿಕ್ಯೂಷನ್ ಪರ ವಕೀಲೆ ರಶ್ಮಿ ಜಾಧವ್ ವಾದ ಮಂಡಿಸಿದರು.

ಪ್ರಕರಣವೇನು?: ‘ಜಿತೇಂದರ್ ಸಿಂಗ್ ಸೇನಾ ಸಮವಸ್ತ್ರ ಧರಿಸಿಕೊಂಡು ನೌಕಾ ದಳಕ್ಕೆ ಸಂಬಂಧಿಸಿದಂತೆ ಪೋಟೊ ಹಾಗೂ ಇತರೆ ಮುಖ್ಯ ಮಾಹಿತಿ ಸಂಗ್ರಹಿಸಿ ಪಾಕಿಸ್ತಾನದ ಐಎಸ್‌ಐಗೆ ರವಾನಿಸಿದ್ದಾರೆ’ ಎಂದು ಆರೋಪಿಸಿ ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್ 2021ರ ಸೆಪ್ಟೆಂಬರ್ 19 ರಂದು ಕಾಟನ್‌ ಪೇಟೆ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಸಿಂಗ್ ಅವರನ್ನು 2021ರ ನವೆಂಬರ್ 19ರಂದು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT