ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಹನಿಟ್ರ್ಯಾಪ್: ಸಿನಿಮಾ ನಟ ಬಂಧನ

* ಸಾಲ ತೀರಿಸಲು ಸ್ನೇಹಿತೆ ಬಳಸಿಕೊಂಡು ಕೃತ್ಯ * ₹ 9 ಲಕ್ಷ ನಗದು ಜಪ್ತಿ
Last Updated 13 ಆಗಸ್ಟ್ 2022, 22:22 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿಯೊಬ್ಬರನ್ನು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ₹ 14.90 ಲಕ್ಷ ಸುಲಿಗೆ ಮಾಡಿದ್ದ ಪ್ರಕರಣದಲ್ಲಿ ಯುವರಾಜ್ ಅಲಿಯಾಸ್ ಯುವ (24) ಎಂಬಾತನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಜೆ.ಪಿ. ನಗರ ನಿವಾಸಿ ಯುವರಾಜ್, ವೃತ್ತಿಯಲ್ಲಿ ಜಿಮ್‌ ಸಲಕರಣೆ ಮಾರಾಟಗಾರ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ‘ಮಿಸ್ಟರ್ ಭೀಮರಾವ್’ ಸಿನಿಮಾದಲ್ಲೂ ನಾಯಕನಾಗಿ ಯುವರಾಜ್ ನಟಿಸುತ್ತಿದ್ದನೆಂದು ಹೇಳಲಾಗುತ್ತಿದೆ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಹಲಸೂರು ಗೇಟ್ ಠಾಣೆ ಪೊಲೀಸರು ಹೇಳಿದರು.

‘ಎಚ್ಎಸ್‌ಆರ್ ಲೇಔಟ್ ನಿವಾಸಿಯಾಗಿರುವ 72 ವರ್ಷದ ಉದ್ಯಮಿ ದೂರು ನೀಡಿದ್ದರು. ಯುವತಿಯರು ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಇದೀಗ, ಪ್ರಕರಣದ ಪ್ರಮುಖ ಆರೋಪಿ ಯುವರಾಜ್‌ನನ್ನು ಬಂಧಿಸಲಾಗಿದೆ. ₹ 9 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

ಸ್ನೇಹಿತೆ ಬಳಸಿಕೊಂಡು ಕೃತ್ಯ: ‘ತಯಾರಿಕಾ ಕಂಪನಿಗಳಿಂದ ಸಲಕರಣೆಗಳನ್ನು ಖರೀದಿಸಿ ಜಿಮ್‌ಗಳಿಗೆ ಮಾರುತ್ತಿದ್ದ ಯುವರಾಜ್, ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ. ಹಲವರ ಬಳಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸುವುದಕ್ಕಾಗಿಯೇ ಉದ್ಯಮಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಸಂಚು ರೂಪಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಯುವರಾಜ್‌ನ ಸ್ನೇಹಿತೆ ವಿಮೆ ಕಂಪನಿಯೊಂದರ ಪ್ರತಿನಿಧಿ. ಅವರು ಉದ್ಯಮಿ ಜೊತೆ ಸಂಪರ್ಕದಲ್ಲಿದ್ದರು. ನಿತ್ಯವೂ ವಾಟ್ಸ್‌ಆ್ಯಪ್‌ ಚಾಟಿಂಗ್ ಹಾಗೂ ವಿಡಿಯೊ ಕರೆ ಮಾಡುತ್ತಿದ್ದರು. ಇದನ್ನು ತಿಳಿದಿದ್ದ ಆರೋಪಿ, ಸ್ನೇಹಿತೆಯನ್ನೇ ಬಳಸಿಕೊಂಡು ಹನಿಟ್ರ್ಯಾಪ್ ಮಾಡಲು ಮುಂದಾಗಿದ್ದ.’

‘ಸ್ನೇಹಿತೆ ಮೊಬೈಲ್‌ ಮೂಲಕ ತಾನೇ ಉದ್ಯಮಿ ಜೊತೆ ಚಾಟಿಂಗ್ ಮಾಡುತ್ತಿದ್ದ. ಲೈಂಗಿಕವಾಗಿ ಮಾತನಾಡಿ ಪ್ರಚೋದಿಸುತ್ತಿದ್ದ. ಸ್ನೇಹಿತೆಯಿಂದಲೇ ವಿಡಿಯೊ ಕರೆ ಮಾಡಿಸಿ, ಚಿತ್ರೀಕರಿಸಿಟ್ಟುಕೊಂಡಿದ್ದ’ ಎಂದೂ ತಿಳಿಸಿದರು.

ಸಿಸಿಬಿ ಪೊಲೀಸರ ಸೋಗು: ‘ಸ್ನೇಹಿತೆ ಮೊಬೈಲ್‌ನಿಂದ ಸಂದೇಶ ಕಳುಹಿಸಿ ಆಗಸ್ಟ್ 3ರಂದು ಉದ್ಯಮಿಯನ್ನು ಹೊಸೂರು ರಸ್ತೆಗೆ ಕರೆಸಿದ್ದ ಆರೋಪಿ, ವಾಟ್ಸ್‌ಆ್ಯಪ್ ಚಾಟಿಂಗ್ ಹಾಗೂ ವಿಡಿಯೊ ತೋರಿಸಿ ಬೆದರಿಸಿದ್ದ. ಸಿಸಿಬಿ ಪೊಲೀಸರೆಂದು ಹೇಳಿ ಹಂತ ಹಂತವಾಗಿ ₹ 14.90 ಲಕ್ಷ ಸುಲಿಗೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ಯುವರಾಜ್ ಮಾತ್ರವಲ್ಲದೇ ಮತ್ತಷ್ಟು ಮಂದಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಅವರನ್ನು ಪತ್ತೆ ಮಾಡಲಾಗುತ್ತಿದೆ. ಸ್ನೇಹಿತೆಯ ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT