ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಕ್ಕಳೇ ಕ್ಷಮಿಸಿ: ನಿರ್ದೇಶಕ ಗಿರಿರಾಜ್‌

Last Updated 22 ಅಕ್ಟೋಬರ್ 2018, 13:28 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ #MeToo ಸದ್ದು ಜೋರಾಗುತ್ತಿದ್ದು, ಅನೇಕ ಕಲಾವಿದರು ಈ ಬಗ್ಗೆ ಮಾತನಾಡುತ್ತಿದ್ದಾರೆ. ನಿರ್ದೇಶಕ ಬಿ.ಎಂ.ಗಿರಿರಾಜ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.

ನಾನು ಗೊತ್ತಿದ್ದೊ ಗೊತ್ತಿಲ್ಲದೆಯೊ ನೋವು ಕೊಟ್ಟ ಎಲ್ಲ ಹೆಣ್ಣುಮಕ್ಕಳ ಕ್ಷಮೆ ಯಾಚಿಸುತ್ತ, ಈ ಹೊತ್ತು ಚಿತ್ರರಂಗದ ಎಲ್ಲ ಗಂಡಸರು ಮತ್ತು ಮಂಡಳಿ ಈ ಸ್ಟೇಟಮೆಂಟ್ ನೀಡಬೇಕೆಂದು ಬಯಸುವೆ.

ಇವತ್ತಿನ ಉರಿಯ ಚಿಮ್ಮಾಳಿಗೆಯ ಮೇಲೆ ನಿಂತು ಇನ್ನೂ ಏನು ಆಗಿಲ್ಲ ಅಂತ ನಾವು ನಿರಾಕರಣೆಯನ್ನು ಪ್ರದರ್ಶಿಸಲು ಸಾಧ್ಯವಿಲ್ಲ. ತಿದ್ದಿಕೊಳ್ಳಲೇ ಬೇಕಿದೆ. ಕೆಲವೊಮ್ಮೆ ಹಿಂಸೆ ಸಾಮಾನ್ಯವಾದಾಗ ನಾವು ಅದನ್ನ ಒಪ್ಪಿಕೊಂಡು ಇದೇ ನಾಡಾವಳಿ ಅಂತ ಸುಮ್ಮನಾಗುತ್ತೇವೆ. ಹೀಗೆಲ್ಲ ನಡೀತಿದ್ದದ್ದು ನಮಗೆ ಗೊತ್ತಿರಲಿಲ್ಲವೇನೆಂದಲ್ಲ. ಆದರೆ ಇದು ಸಾಮಾನ್ಯ ಮತ್ತು ಇದ್ದ ಒಪ್ಪಿತವಾದದ್ದು ಅಂತ ನಂಬಿದ್ದೆವು. ಗಂಡಸರು ಇದು ಒಪ್ಪಿತ ಅಂತ ನಂಬಿದ್ದೆವು. ಹೆಂಗಸರು ಇದು ಒಪ್ಪಿತ ಅಂತ ನಂಬಿದ್ದರು. ಉಳಿದವರು ಇದು ಒಪ್ಪಿತ ಅಂತ ನಂಬಿದ್ದರು. ಸಂವಿಧಾನಕ್ಕು ಮುಂಚೆ ಜಾತಿ ಪದ್ದತಿಯನ್ನು ಒಪ್ಪಿದ್ದ ಹಾಗೆ. ಕ್ಯಾನ್ಸರಿಗೂ ಮುಂಚೆ ಧೂಮಪಾನ ಒಪ್ಪಿದ್ದ ಹಾಗೆ. ವಿಜ್ಞಾನದ ಅರಿವಿಗೂ ಮುಂಚೆ ಭೂಮಿ ಚಪ್ಪಟೆಯಾಗಿದೆ ಅಂತ ಒಪ್ಪಿದ್ದ ಹಾಗೆ. ಅದಕ್ಕೆ ಈ ಗಂಡಸಿನ ಅಹಂನ್ನು ಖುಷಿಗೊಳಿಸುವ ಅಧಿಕ ಹೊರೆಗಳು ನಿಮ್ಮಗೆ ಒಪ್ಪಿತ ಅಂತ ನಾವೂ ನಂಬಿದ್ದೆವು. ಆದರೆ ಈ ಅರಿವಿನ ಚಂಡಮಾರುತ ಬರಬೇಕಾಯ್ತು ನಮ್ಮನ್ನೆಲ್ಲ ನಮ್ಮ ದಂತ ಗೋಪುರದಿಂದ ಕೆಳಗೆಡವಲು. ಈ ಸ್ಥಿತಿಗೆ ಒಂದಲ್ಲ ಒಂದು ರೀತಿ ನಾವೆಲ್ಲ ಜವಾಬ್ದಾರರೆ. ಅದಕ್ಕೆ ಎಲ್ಲ ಹೆಣ್ಣುಮಕ್ಕಳಲ್ಲಿ ಈ ಕಳಕಳಿಯ ಅಹವಾಲು ಕೇಳಬೇಕೆಂದು ಮನವಿ.

ಮೊದಲನೆಯದಾಗಿ ನಮ್ಮದೊಂದು ಉದ್ಯಮ ಮತ್ತು ಪರಿವಾರ ಅಲ್ಲ ಅಂತ ಇವತ್ತಿಂದ ಒಪ್ಪುತ್ತೇವೆ. ಒಂದು ಪರಿವಾರಕ್ಕೆ ಎಲ್ಲ ಸವಲತ್ತುಗಳಿದ್ದರೂ, ಅದು ನಾಚಿಕೆ ಮತ್ತು ಮರ್ಯಾದೆಯ ಹೊರೆ ಹೊರಬೇಕಾಗುತ್ತದೆ. ಅದರಿಂದ ಮನೆಯೊಳಗೆ ಏನೆ ಆದರೂ ಏನು ಆಗಿಲ್ಲ ಆಗಿಲ್ಲ ಅಂತ ಹೊರಗಿನವರಿಗೆ ಸುಳ್ಳು ಹೇಳಬೇಕಾಗುತ್ತದೆ. ಇದೊಂದು ಉದ್ಯಮ. ಉದ್ಯಮಕ್ಕೆ ನೂರಾರು ನಿಯಮಗಳಿರುತ್ತವೆ. ಅದರ ಪಾಲನೆಯಲ್ಲಿ ಪ್ರಮಾದಗಳಾದರೆ ಶಿಕ್ಷೆಗಳಿರುತ್ತವೆ.

ಮುಂದಿನ ಮಾತು ನಿಮಗೆ ಸಿಟ್ಟು ತರಿಸಬಹುದು ಆದರೆ ಕೇಳಬೇಕೆಂದು ವಿನಂತಿ. ಹಿಂದೆ ನಡೆದಿದ್ದೆಲ್ಲ ಮುನ್ನೆಡೆಯಲು ನಮಗೆ ಬೆಳಕಾಗಲಿ. ಅತ್ಯಾಚಾರ, ಅಪಹರಣೆ, ದೈಹಿಕ ಹಿಂಸೆ ಹೊರತು ಪಡೆಸಿ ನಿಮ್ಮ ನೋವನ್ನ ಮರೆತು ಇನ್ನೊಂದು ಅವಕಾಶಕ್ಕಾಗಿ ಬೇಡುತ್ತೇವೆ. ಜೊತೆಗೆ ಎಲ್ಲ ಗಂಡಸರು, ಹಿಂದೆ ತಾವು ಮಾಡಿದ್ದು, ಹೊಸ ಅರಿವಿನ ಮೂಸೆಯಲ್ಲಿ ತಪ್ಪು ಅಂತ ಅನಿಸಿದರೆ ವಯಕ್ತಿಕವಾಗಿ ಪ್ಲೀಸ್ ಆ ಹೆಣ್ಣುಮಕ್ಕಳಲ್ಲಿ ಕ್ಷಮೆ ಕೇಳಿ. ಕ್ಷಮಿಸುವ ಅಧುಕಾರ ಮತ್ತು ಹಕ್ಕು, ನೋವು ಅನುಭವಿಸಿದವರಿಗೆ ಮಾತ್ರ ಇರತ್ತೆ ಅನ್ನುವುದು ನಮಗೆ ಗೊತ್ತು. ಆದರೆ ಈಗ ತಿರುಗಿ ಕಟ್ಟುವ ಸಮಯದಲ್ಲಿ ನೆಲಗುರುಳಿಸುವ ಕ್ರಿಯೆ ಸಹಾಯವಾಗಲ್ಲ. ನಮ್ಮನ್ನು ನಂಬಿ ಒಂದು ಕೊನೆಯ ಅವಕಾಶ ಕೊಡಿ. ಗಂಡಸರು ಒಳ್ಳೆಯ ಕೆಲಸಕ್ಕೆ ಒಂದಾದಾಗ ದೇವರ ಕಣ್ಣಲ್ಲೂ ಸಂತಸದ ನೀರು ತರಿಸಿದ್ದೇವೆ. ಶಾಂತರಾಗಿ ಸಂಯಂ ತೋರಬೇಕಾಗಿ ವಿನಂತಿ.

ಇನ್ನು ಮುಂದೆ ಪ್ರತಿ ನಿರ್ಮಾಣ ಸಂಸ್ಥೆಗೆ ಒಂದು ಲಿಖಿತ, ಚಿತ್ರೀಕೃತ ಒಟ್ಟರೆ ಎಲ್ಲಾ ರೀತಿಯ ನಡಾವಳಿಯನ್ನ ಸಷ್ಟವಾಗಿಸುವ ಒಂದು ಪ್ರಮಾಣ ಪತ್ರವನ್ನು ಕಳಿಸುತ್ತೇವೆ. ಇನ್ನು ಮುಂದೆ ನಾವ್ಯಾರು ನಮಗೆ ಹೀಗೆ ಅಂತ ಗೊತ್ತಿರಲಿಲ್ಲ ಅಂತ ಸಬೂಬು ಹೇಳುವ ಹಾಗಿಲ್ಲ. ನಮ್ಮ ಪ್ರಜ್ಞೆ ನಮಗೆ ಹೇಳಬೇಕಿತ್ತು. ಆದರೆ ತುಂಬ ನಿದ್ದೆ ಹೋಗಿದ್ದೇವೆ.

ಕೆಲಸದ ಜಾಗವನ್ನು ಶುದ್ಧವಾಗಿಡಲು ಹಲವು ಬದಲಾವಣೆಯನ್ನು ತರಲಿದ್ದೇವೆ. ಅದಕ್ಕೆ ಕಾನೂನಿನ, ಸಮಾಜಶಾಸ್ತ್ರದ ಮತ್ತು ಮನಃಶಾಸ್ತ್ರದ ಅರಿವು ಬೇಕಿದೆ. ಹೀಗಾಗಿ ಹೆಸರಾಂತ ಮತ್ತು ಶುದ್ಧ ಚಾರಿತ್ರ್ಯದ ತಜ್ಞರನ್ನು ಆಯ್ಕೆ ಮಾಡಿದ್ದೇವೆ.

ಕರ್ನಾಟಕ ಹನ್ನೆರಡನೇ ಶತಮಾನದಿಂದಲೂ ಸಮಸಮಾಜದ ಆಶಯಕ್ಕೆ ದುಡಿದ ಲಿಖಿತ ದಾಖಲೆಗಳಿವೆ. ಇಲ್ಲಿನ ಎಷ್ಟೋ ರಾಜರು ಸಾಮಾಜಿಕ ನ್ಯಾಯಕ್ಕಾಗಿ ತಮ್ಮಆಸ್ತಿಯನ್ನೇ ಒತ್ತೆ ಇಟ್ಟಂತವರು. ನಮ್ಮ ಜನಪ್ರತಿನಿಧಿ ಸರ್ಕಾರಗಳು ಬೇರ ರಾಜ್ಯಗಳಿಗಿಂತ ಹೆಚ್ಚ ಪ್ರಗತಿಶೀಲ ನಿರ್ಧಾರಗಳನ್ನು ತೆಗೆದುಕೊಂಡಿವೆ. ಆದರೆ ಯಾಕೊ ನಾವು ನಮ್ಮ ಚರಿತ್ರೆಯನ್ನು ಮರೆತು ಬಿಟ್ಟಿದ್ದೇವೆ. ನಮ್ಮ ಚರಿತ್ರೆಯನ್ನು ಮರುಕಳಿಸುವ ಸಮಯ ಬಂದಿದೆ. ನಮ್ಮ ಹೆಂಗಸರು ನಮ್ಮ ಮೇಲೆ ಹೆಮ್ಮೆ ಪಡುವ ಹಾಗೆ ಮಾಡುವ ಸಮಯ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT