ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಚಟುವಟಿಕೆ | 61 ಆರೋಪಿಗಳ ಬಂಧನ; ₹ 2 ಕೋಟಿ ಮೌಲ್ಯದ ವಸ್ತು ವಶ

ಉತ್ತರ ವಿಭಾಗದ ಪೊಲೀಸರ ಕಾರ್ಯಾಚರಣೆ
Last Updated 17 ಆಗಸ್ಟ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ವಿಭಾಗದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮಾದಕ ವಸ್ತು, ರಕ್ತಚಂದನ ಮಾರಾಟ, ಸುಲಿಗೆ, ಸರ ಕಳವು, ಮೊಬೈಲ್‌ ಸುಲಿಗೆ, ಮನೆಯಲ್ಲಿ ಚಿನ್ನಾಭರಣ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ 61 ಆರೋಪಿಗಳನ್ನು ಬಂಧಿಸಿ, ₹ 2 ಕೋಟಿ ₹ 40 ಸಾವಿರ ಮೌಲ್ಯದ ವಸ್ತು ವಶ ಪಡಿಸಿಕೊಳ್ಳಲಾಗಿದೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ ಉತ್ತರ ವಿಭಾಗದ 15 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ ಕಾರ್ಯಾ ಚರಣೆಯ ಮಾಹಿತಿ ನೀಡಿದರು.

ಒಟ್ಟು 89 ಪ್ರಕರಣ ಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸ ಲಾಗಿದೆ ಎಂದು ತಿಳಿಸಿದರು. ‘ಐವರಿ ಕೋಸ್ಟಾ ದೇಶದ ಪ್ರಜೆಯ ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಿನಲ್ಲಿ 2012ರಿಂದಲೂ ಅಕ್ರಮವಾಗಿ ನೆಲೆಸಿದ್ದ. ಜತೆಗೆ ಗಾಂಜಾ ಪೂರೈಕೆ ಮಾಡುತ್ತಿದ್ದ. ಆತನನ್ನು ಬಂಧಿಸಿ 1.9 ಕೆ.ಜಿ ಚರಸ್‌, 5 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಪ್ರಕರಣದಲ್ಲಿ ರಾಜಾಜಿ ನಗರದಲ್ಲಿ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. 662 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯ ಲಾಗಿದೆ’ ಎಂದರು.

ಆಂಧ್ರಪ್ರದೇಶದಿಂದ ರಕ್ತಚಂದನ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ₹ 35 ಲಕ್ಷ ಮೌಲ್ಯದ 722 ಕೆ.ಜಿ ರಕ್ತಚಂದನ ವಶಕ್ಕೆ ಪಡೆಯಲಾಗಿದೆ.

ಬಾಡಿಗೆ ಕೇಳುವ ನೆಪದಲ್ಲಿ ಸುಲಿಗೆ: ಪೀಣ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಾಕು ತೋರಿಸಿ, ಮನೆಯ ಮಾಲೀಕರನ್ನೇ ಸುಲಿಗೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸ ಲಾಗಿದೆ. ಬಂಧಿತರಿಂದ 70 ಗ್ರಾಂ ಚಿನ್ನಾಭರಣ, 120 ಗ್ರಾಂ ಬೆಳ್ಳಿ ಸಾಮಗ್ರಿ, ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ದೇವನಹಳ್ಳಿ ರಸ್ತೆಯಲ್ಲಿ ನಡೆದಿದ್ದ ಸುಲಿಗೆ ಪ್ರಕರಣದ ಆರೋಪಿಗಳನ್ನು ಸಂಜಯನಗರ ಪೊಲೀಸರು ಆಂಧ್ರಪ್ರದೇಶದದಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ನಾಡ ಪಿಸ್ತೂಲ್‌, 11 ಜೀವಂತ ಗುಂಡು ವಶಕ್ಕೆ ಪಡೆದಿದ್ದಾರೆ. ಶ್ರೀರಾಮಪುರ ವ್ಯಾಪ್ತಿಯಲ್ಲಿ ಕನ್ನಿಕಾ ಪರಮೇಶ್ವರ ದೇವಸ್ಥಾನಕ್ಕೆ ಭಕ್ತರ ಸೋಗಿನಲ್ಲಿ ಬಂದು ದೇವಿಯ ಸರ, ತಾಳಿ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಸುಬ್ರಹ್ಮಣ್ಯ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಿ ಸಾಮಗ್ರಿ ಕಳವು ಮಾಡಿದ್ದ ಹಾಗೂ ಆರ್‌ಎಂಸಿ ಠಾಣೆಯ ವ್ಯಾಪ್ತಿಯಲ್ಲಿ ಬಾಗಿಲು ಒಡೆದು ಚಿನ್ನಾಭರಣ ದೋಚಿದ್ದ ಅಮೆಜಾನ್‌ ಡೆಲಿವರಿ ಬಾಯ್‌ ಒಬ್ಬನನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್‌ ಪಾಟೀಲ್‌, ಉತ್ತರ ವಿಭಾಗದ ಡಿಸಿಪಿ ವಿನಾಯಕ ಪಾಟೀಲ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT