ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಉದ್ಯಾನದಲ್ಲಿ ಅಕ್ರಮ ಕಟ್ಟಡ:ನವೀಕರಣ ಕಾಮಗಾರಿಗೆ ಪರಿಸರ ಪ್ರೇಮಿಗಳ ಆಕ್ರೋಶ

ಪುನರ್ ನವೀಕರಣ ಕಾಮಗಾರಿಗೆ ಪರಿಸರ ಪ್ರೇಮಿಗಳ ಆಕ್ರೋಶ
Last Updated 10 ಏಪ್ರಿಲ್ 2023, 21:13 IST
ಅಕ್ಷರ ಗಾತ್ರ

ಬೆಂಗಳೂರು: ಹಚ್ಚ ಹಸಿರು ಹೊದ್ದಿರುವ ಕಬ್ಬನ್‌ ಉದ್ಯಾನವು ಕಾಂಕ್ರೀಟ್‌ ಕಾಡಾಗಿ ಬದಲಾಗುತ್ತಿದೆ. ಇದಕ್ಕೆ ವಾಯುವಿಹಾರಿಗಳು ಹಾಗೂ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಉದ್ಯಾನದಲ್ಲಿ ಇತ್ತೀಚೆಗೆ ಕಟ್ಟಡಗಳನ್ನು ಎಗ್ಗಿಲ್ಲದಂತೆ ನಿರ್ಮಿಸಲಾಗುತ್ತಿರುವುದು ಉದ್ಯಾನದ ಸೌಂದರ್ಯಕ್ಕೆ ಧಕ್ಕೆ ತರುತ್ತಿದೆ.

‘ಕಬ್ಬನ್‌ ಉದ್ಯಾನದಲ್ಲಿ ಯಾವುದೇ ನೂತನ ಕಟ್ಟಡಗಳನ್ನು ಕಟ್ಟುವಂತಿಲ್ಲ. ಇಲ್ಲಿ ಯಾವುದೇ ಕಟ್ಟಡ ನಿರ್ಮಿಸಬೇಕಾದರೆ ಹೈಕೋರ್ಟ್‌ನಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಬೇಕು. ಇದೆಲ್ಲವನ್ನು ಧಿಕ್ಕರಿಸಿ ಇಲ್ಲಿನ ಸೆಂಚುರಿ ಕ್ಲಬ್‌ ತೋಟಗಾರಿಕೆ ಇಲಾಖೆಯ ಅನುಮತಿ ಪಡೆದುಕೊಳ್ಳದೇ ಚುನಾವಣೆ ಸಂದರ್ಭದಲ್ಲಿ ನೀರಿನ ಸಂಸ್ಕರಣಾ ಘಟಕ ಮತ್ತು ಶೇಖರಣಾ ಟ್ಯಾಂಕ್‌ ನಿರ್ಮಿಸಲು ಮುಂದಾಗಿದೆ. ತೋಟಗಾರಿಕೆ ಇಲಾಖೆ ಈ ಕ್ಲಬ್‌ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು. ಉದ್ಯಾನದಲ್ಲಿ ಯಾವುದೇ ರೀತಿಯ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು’ ಎಂದು ನಡಿಗೆದಾರರ ಸಂಘದ ಎಸ್. ಉಮೇಶ್ ಒತ್ತಾಯಿಸಿದರು.

‘ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಕಬ್ಬನ್‌ ಉದ್ಯಾನವನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಇದರಿಂದ ಉದ್ಯಾನದಲ್ಲಿ ಸಾಕಷ್ಟು ಮರಗಳಿಗೆ ಹಾನಿಯಾಗಿದೆ’ ಎಂದು ಹೇಳಿದರು.

‘ಶಾರ್ಟ್‌ ಸರ್ಕ್ಯೂಟ್‌ನಿಂದ ಒಂದಷ್ಟು ಭಾಗ ಸುಟ್ಟಿದೆ ಎಂಬ ಕಾರಣಕ್ಕೆ ಅಕ್ವೇರಿಯಂ ಕಟ್ಟಡ, ಎನ್‌.ಜಿ.ಒ ಕ್ಲಬ್‌ ಮತ್ತು ಟೆನಿಸ್‌ ಕ್ಲಬ್‌ಗಳನ್ನು ಸ್ಟಾರ್‌ ಹೋಟೆಲ್‌ ರೀತಿಯಲ್ಲಿ ಪುನರ್‌ ನಿರ್ಮಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ, ಪೊಲೀಸ್‌ ಕಚೇರಿ, ಸೆಂಚುರಿ ಕ್ಲಬ್, ಬಾಲಭವನ ಹೀಗೆ ಕಬ್ಬನ್‌ ಉದ್ಯಾನದಲ್ಲಿರುವ ಬಹುತೇಕ ಎಲ್ಲ ಕಟ್ಟಡಗಳನ್ನು ನವೀಕರಿಸಲಾಗುತ್ತಿದೆ. ಇದನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರಶ್ನಿಸುತ್ತಿಲ್ಲ. ಇದರಿಂದ ಉದ್ಯಾನದ ಪರಿಸರ ಹಾಳಾಗುತ್ತಿದೆ’ ಎಂದು ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘ ಕಳವಳ ವ್ಯಕ್ತಪಡಿಸಿದೆ.

‘ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉದ್ಯಾನ ಈಗಾಗಲೇ ಸಂಪೂರ್ಣ ಕಾಂಕ್ರೀಟ್‌ ಕಾಡಾಗಿ ಪರಿವರ್ತಿಸಲಾಗುತ್ತಿದೆ. ಸರ್ಕಾರ ಕೂಡಲೇ ಕಬ್ಬನ್‌ ಉದ್ಯಾನದ ರಕ್ಷಣೆಗೆ ಮುಂದಾಗಬೇಕು’ ಎಂದು ಕಬ್ಬನ್ ಉದ್ಯಾನದ ನಡಿಗೆದಾರರಾದ ಸೌಮ್ಯ ಸತೀಶ್ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT