ಸೋಮವಾರ, ಮಾರ್ಚ್ 30, 2020
19 °C
ರಾತ್ರಿವರೆಗೂ ಕ್ಲಿನಿಕ್ ತೆರೆಯುವಂತೆ ಸಾರ್ವಜನಿಕರ ಮನವಿ

20 ಸಾವಿರ ಮಂದಿಗೆ ಚಿಕಿತ್ಸೆ ನೀಡಿದ ‘ಇಂದಿರಾ ಕ್ಲಿನಿಕ್‌’

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾರಿಗೆ ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ಉಚಿತವಾಗಿ ಪ್ರಾಥಮಿಕ ಚಿಕಿತ್ಸೆ ನೀಡುವ ಸಲುವಾಗಿ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ತೆರೆಯಲಾಗಿರುವ ‘ಇಂದಿರಾ ಕ್ಲಿನಿಕ್‌’ ಎರಡೇ ವರ್ಷದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿಗೆ ತುರ್ತು ಚಿಕಿತ್ಸೆ ನೀಡಿದೆ. 

ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಹಾಗೂ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕ್ಲಿನಿಕ್‌ ತೆರೆದಿರುತ್ತದೆ. ನಿತ್ಯ ಇಲ್ಲಿ 40ಕ್ಕೂ ಹೆಚ್ಚು ಮಂದಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಕೇಂದ್ರದಲ್ಲಿ ಒಬ್ಬರು ವೈದ್ಯಾಧಿಕಾರಿ, ಶುಶ್ರೂಷಕಿ, ಫಾರ್ಮಾಸಿಸ್ಟ್‌ ಹಾಗೂ ಗ್ರೂಪ್‌ ಡಿ ನೌಕರ ಸೇರಿ ಒಟ್ಟು ನಾಲ್ವರು ಕಾರ್ಯನಿರ್ವಹಿಸುತ್ತಾರೆ. ಈಗ ಪೂರ್ಣಾವಧಿಯ ವೈದ್ಯರನ್ನು ನೇಮಿಸಲಾಗಿದೆ.

ಬಡವರ ಬಂಧುವಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್‌ನ ಕಾರ್ಯನಿರ್ವಹಿಸುವ ಅವಧಿಯನ್ನು ವಿಸ್ತರಿಸಿ, ಇನ್ನೂ ಹೆಚ್ಚು ಜನರ ಆರೋಗ್ಯ ಸುಧಾರಣೆಗೆ ನೆರವಾಗಬೇಕು ಎಂದು ಸಾರ್ವ
ಜನಿಕರು ಮನವಿ ಮಾಡಿದ್ದಾರೆ.

ರಾಷ್ಟ್ರೀಯ ನಗರ ಆರೋಗ್ಯ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಾಗೂ ಪಾಲಿಕೆ ಸಹಯೋಗದಲ್ಲಿ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ 2017ರ ಡಿಸೆಂಬರ್‌ನಲ್ಲಿ ಇಂದಿರಾ ಕ್ಲಿನಿಕ್‌ ಆರಂಭಿಸಲಾಯಿತು. ನಂತರ ಯಶವಂತಪುರ ಬಸ್‌ ನಿಲ್ದಾಣದಲ್ಲೀ ಇದೇ ಮಾದರಿಯ ಕ್ಲಿನಿಕ್‌ ಆರಂಭಿಸಲಾಗಿತ್ತು.

‘ತಲೆನೋವು, ಕೆಮ್ಮು, ವಾಂತಿ, ಜ್ವರದಂತಹ ಆರೋಗ್ಯ ಸಮಸ್ಯೆಯಿಂದ ಕ್ಲಿನಿಕ್‌ಗೆ ಬರುತ್ತಾರೆ. ತೀವ್ರ ಎದೆನೋವು →ಸಮಸ್ಯೆಯಿಂದ ಬಂದವರಿಗೂ ತುರ್ತು ಚಿಕಿತ್ಸೆ ನೀಡಲಾಗಿದೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಲೈಂಗಿಕ ಅಲ್ಪಸಂಖ್ಯಾತರು ಚಿಕಿತ್ಸೆ ಪಡೆಯುತ್ತಾರೆ’ ಎಂದು ಇಲ್ಲಿನ ಸಿಬ್ಬಂದಿ ತಿಳಿಸಿದರು.

‘ಬಸ್‌ ನಿಲ್ದಾಣದಲ್ಲಿ  ಅಸ್ವಸ್ಥರಾಗಿ ಕುಸಿದು ಬೀಳುವ ಪ್ರಯಾಣಿಕರಿಗೆ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿ, ವಿಕ್ಟೋರಿಯಾ, ವಾಣಿವಿಲಾಸ ಅಥವಾ ಕೆ.ಸಿ.ಜನರಲ್‌ ಆಸ್ಪತ್ರೆಗೆ ಕಳುಹಿಸಿಕೊಡುತ್ತೇವೆ’ ಎಂದು ವಿವರಿಸಿದರು. 

‘ಮುಂಜಾನೆಯೇ ರಾಜ್ಯದ ವಿವಿಧ ಸ್ಥಳಗಳಿಂದ ಪ್ರಯಾಣಿಕರು ಬೆಂಗಳೂರಿಗೆ ಬರುತ್ತಾರೆ. ದೂರದ ಸ್ಥಳಗಳಿಂದ ಪ್ರಯಾಣಿಸುವವರಿಗೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಆ ಸಮಯದಲ್ಲಿ ತುರ್ತು ಚಿಕಿತ್ಸೆ ಪಡೆಯಲು ಇಂದಿರಾ ಕ್ಲಿನಿಕ್ ತೆರೆದಿರುವುದಿಲ್ಲ’ ಎಂದು ಪ್ರಯಾಣಿಕ ಎನ್.ಪವನ್‌ ಕುಮಾರ್‌ ತಿಳಿಸಿದರು.

‘ಮುಂಜಾನೆ ಬರುವ ಪ್ರಯಾಣಿಕರಲ್ಲಿ ವೃದ್ಧರ ಸಂಖ್ಯೆ ಹೆಚ್ಚು. ಆ ಸಮಯದಲ್ಲಿ ತುರ್ತು ಚಿಕಿತ್ಸೆಯ ಅಗತ್ಯ ಹೆಚ್ಚಾಗಿರುತ್ತದೆ. ಕ್ಲಿನಿಕ್‌ನ ಅವಧಿ ವಿಸ್ತರಣೆ ಮಾಡುವ ಬಗ್ಗೆ ಪಾಲಿಕೆ ಅಧಿಕಾರಿಗಳು ಚಿಂತನೆ ನಡೆಸಬೇಕು’ ಎಂದು ಮನವಿ ಮಾಡಿದರು.

‘ರಾತ್ರಿಯಿಡಿ ಬಸ್‌ ಚಲಾಯಿಸುವುದರಿಂದ ತಲೆನೋವು, ಮೈಕೈ ನೋವಿನಿಂದ ಆರೋಗ್ಯ ಹದಗೆಟ್ಟಿರುತ್ತದೆ. ಮುಂಜಾನೆ ವೇಳೆ ಕ್ಲಿನಿಕ್‌ ತೆರೆದಿದ್ದರೆ ಮಾತ್ರೆ ಅಥವಾ ಚಿಕಿತ್ಸೆ ಪಡೆಯಬಹುದು’ ಎಂದು ಸಾರಿಗೆ ಸಿಬ್ಬಂದಿಯೊಬ್ಬರು ಸಲಹೆಯನ್ನು ನೀಡಿದರು.

ಕ್ಲಿನಿಕ್‌ನಲ್ಲಿ ಸಿಬ್ಬಂದಿ ಕೊರತೆ

‘ಕ್ಲಿನಿಕ್‌ ಅವಧಿ ವಿಸ್ತರಣೆಗೆ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ಒಂದು ಪಾಳಿಯಲ್ಲಿ ಮಾತ್ರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೆಚ್ಚುವರಿ ಸಿಬ್ಬಂದಿ ಲಭ್ಯವಾದರೆ ರಾತ್ರಿವರೆಗೆ ಕ್ಲಿನಿಕ್‌ ತೆರೆಯಬಹುದು. ಹೆಚ್ಚುವರಿ ಸಿಬ್ಬಂದಿ ನೇಮಕ ವಿಚಾರವಾಗಿ ಪಾಲಿಕೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು’ ಎಂದು ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಬಿ.ಕೆ.ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. 

***

ಬಸ್‌ ನಿಲ್ದಾಣದ ಸಮೀಪದಲ್ಲಿ ಬೇರೆ ಆಸ್ಪತ್ರೆಗಳಿಲ್ಲ. ನಿಲ್ದಾಣದಲ್ಲೇ ಇರುವ ಇಂದಿರಾ ಕ್ಲಿನಿಕ್‌ನ ಅವಧಿ ವಿಸ್ತರಿಸಿ, ರಾತ್ರಿ ಪಾಳಿಯಲ್ಲಿ ವೈದ್ಯರು ಲಭ್ಯವಿದ್ದರೆ ಪ್ರಯಾಣಿಕರಿಗೂ ಅನುಕೂಲ
-ರಾಕೇಶ್‌, ಪ್ರಯಾಣಿಕ

ಕೆಲಸದ ವಿಚಾರವಾಗಿ ಬೆಂಗಳೂರಿಗೆ ಬಂದು ಹೋಗುತ್ತೇನೆ. ನಿಲ್ದಾಣದಲ್ಲೇ ಕ್ಲಿನಿಕ್‌ ಇರುವುದು ಅನುಕೂಲ. ಇಲ್ಲಿ ಉಚಿತ ಚಿಕಿತ್ಸೆ ದೊರೆಯುವ ಮಾಹಿತಿ ಇರಲಿಲ್ಲ
-ಚಿಕ್ಕಮಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು