ಇನ್‌ಸ್ಪೆಕ್ಟರ್, ಕಾನ್‌ಸ್ಟೆಬಲ್‌ ಎಸಿಬಿ ಬಲೆಗೆ

7
ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಠಾಣೆಯಲ್ಲೇ ಹಣ ವಸೂಲಿ

ಇನ್‌ಸ್ಪೆಕ್ಟರ್, ಕಾನ್‌ಸ್ಟೆಬಲ್‌ ಎಸಿಬಿ ಬಲೆಗೆ

Published:
Updated:
Deccan Herald

ಬೆಂಗಳೂರು: ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಸ್ನೂಕರ್ ಕ್ಲಬ್‌ ಮಾಲೀಕರೊಬ್ಬರಿಂದ ₹30 ಸಾವಿರ ವಸೂಲಿ ಮಾಡುತ್ತಿದ್ದರು ಎನ್ನಲಾದ ಬಾಣಸವಾಡಿ ಇನ್‌ಸ್ಪೆಕ್ಟರ್‌ ಡಿ.ಎಚ್‌.ಮುನಿಕೃಷ್ಣ, ಕಾನ್‌ಸ್ಟೆಬಲ್ ಉಮೇಶ್‌ ಹಾಗೂ ಮಧ್ಯವರ್ತಿ ಅಶ್ರಫ್‌, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಬಾಣಸವಾಡಿಯಲ್ಲಿ ಕ್ಲಬ್‌ ನಡೆಸುತ್ತಿರುವ ಸೈಯದ್ ಇಸ್ಮಾಯಿಲ್, ಹಣ ವಸೂಲಿ ಬಗ್ಗೆ ಎಸಿಬಿಗೆ ದೂರು ನೀಡಿದ್ದರು. ಶನಿವಾರ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಹಣದ ಸಮೇತವಾಗಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

‘ಆಗಾಗ ಕ್ಲಬ್‌ಗೆ ಹೋಗಿ ಬರುತ್ತಿದ್ದ ಇನ್‌ಸ್ಪೆಕ್ಟರ್‌, ‘ಪ್ರತಿ ತಿಂಗಳು ಹಣ ನೀಡಬೇಕು. ಇಲ್ಲದಿದ್ದರೆ, ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ’ ಎಂದು ಸೈಯದ್‌ ಅವರನ್ನು ಬೆದರಿಸಿದ್ದರು. ಅದಕ್ಕೆ ಹೆದರಿದ್ದ ಮಾಲೀಕ, ಕೆಲವು ತಿಂಗಳು ಹಣ ಕೊಟ್ಟಿದ್ದರು’ ಎಂದು ಎಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಮೂರು ತಿಂಗಳಿನಿಂದ ಹಣ ಕೊಟ್ಟಿರಲಿಲ್ಲ. ಅದಕ್ಕೆ ಕೋಪಗೊಂಡಿದ್ದ ಇನ್‌ಸ್ಪೆಕ್ಟರ್‌, ಪುನಃ ಬೆದರಿಕೆ ಹಾಕಿದ್ದರು. ಅದರಿಂದ ನೊಂದ ಸೈಯದ್‌, ಎಸಿಬಿ ಕಚೇರಿಗೆ ಬಂದು ದೂರು ನೀಡಿದ್ದರು’ ಎಂದರು.

ಮಧ್ಯವರ್ತಿಗಳಿಂದ ಹಣ ವಸೂಲಿ: ‘ಇನ್‌ಸ್ಪೆಕ್ಟರ್‌, ತಾನಾಗಿಯೇ ಹಣ ಪಡೆಯುತ್ತಿರಲಿಲ್ಲ. ಅದಕ್ಕಾಗಿ ಕಾನ್‌ಸ್ಟೆಬಲ್ ಉಮೇಶ್ ಹಾಗೂ ಅಶ್ರಫ್‌ನನ್ನು ಮಧ್ಯವರ್ತಿಗಳನ್ನಾಗಿ ಬಳಸಿಕೊಳ್ಳುತ್ತಿದ್ದರು’ ಎಂದು ಎಸಿಬಿ ಅಧಿಕಾರಿ ವಿವರಿಸಿದರು.

‘ಸೈಯದ್‌ ಅವರನ್ನು ಶನಿವಾರ ಠಾಣೆಗೆ ಕಳುಹಿಸಿದ್ದೆವು. ಅಲ್ಲಿಯೇ ಉಮೇಶ್‌, ಅವರಿಂದ ₹30 ಸಾವಿರ ಪಡೆದು ಇನ್‌ಸ್ಪೆಕ್ಟರ್‌ ಅವರಿಗೆ ಕೊಟ್ಟಿದ್ದ. ಅವಾಗಲೇ ದಾಳಿ ನಡೆಸಿದೆವು. ಮೂವರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !