ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಾವರಿ ಪಂಪ್‌ಸೆಟ್‌: ಕಾರ್ಯಾದೇಶ ನೀಡಲು ಒತ್ತಾಯ

₹1,500 ಕೋಟಿ ಟೆಂಡರ್‌ ಅಂತಿಮ: ಕಾಮಗಾರಿಗೆ ಆದೇಶ ನೀಡದ ಎಸ್ಕಾಂಗಳು
Published 22 ನವೆಂಬರ್ 2023, 16:30 IST
Last Updated 22 ನವೆಂಬರ್ 2023, 16:30 IST
ಅಕ್ಷರ ಗಾತ್ರ

ಬೆಂಗಳೂರು: ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿ, ಮೂಲಸೌಕರ್ಯ ಒದಗಿಸುವ ಕಾಮಗಾರಿಗೆ ಕಾರ್ಯಾದೇಶ ನೀಡಬೇಕು ಎಂದು ಎಲೆಕ್ಟ್ರಿಕಲ್ ಇಪಿಸಿ ಕಾಂಟ್ರಾಕ್ಟರ್ಸ್‌ ಅಸೋಸಿಯೇಷನ್ ಆಗ್ರಹಿಸಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‌ ಅಧ್ಯಕ್ಷ ರಾಮಕೃಷ್ಣ ಎಚ್.ಎನ್., ‘ರಾಜ್ಯದಲ್ಲಿರುವ ಅನಧಿಕೃತ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿ, ಮೂಲಸೌಲಭ್ಯ ಕಲ್ಪಿಸಲು 2022ರ ಮೇ 31ರಂದು ಟೆಂಡರ್‌ ಆಹ್ವಾನಿಸಲಾಗಿತ್ತು. ಅರ್ಹ ಗುತ್ತಿಗೆದಾರರೊಂದಿಗೆ ದ್ವಿಪಕ್ಷಿಯ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಪಂಪ್‌ಸೆಂಟ್‌ಗಳಿಗೆ ಮೂಲಸೌಕರ್ಯ ಒದಗಿಸಲು ಎಲ್ಲ ಎಸ್ಕಾಂಗಳು ವಿಸೃತ್ತ ಆದೇಶಗಳನ್ನು ನೀಡಿವೆ. ಆದರೆ, ಪ್ರತ್ಯೇಕ ಕಾರ್ಯಾದೇಶ ನೀಡಲು ಸರ್ಕಾರ ಮೀನಮೀಷ ಎಣಿಸುತ್ತಿದೆ’ ಎಂದು ದೂರಿದರು.

‘ರಾಜ್ಯದಲ್ಲಿರುವ ಎಲ್ಲ ಎಸ್ಕಾಂಗಳು ಅನುದಾನ ಹೊಂದಾಣಿಕೆ ಮಾಡಿಕೊಂಡಿವೆ. ಹೆಸ್ಕಾಂ, ಬೆಸ್ಕಾಂ ಮತ್ತು ಸೆಸ್ಕ್‌ನ ವ್ಯಾಪ್ತಿಯಲ್ಲಿ ₹1,500 ಕೋಟಿ ಟೆಂಡರ್‌ ಆಹ್ವಾನಿಸಲಾಗಿತ್ತು. ಇದಕ್ಕೆ ಬಜೆಟ್‌ನಲ್ಲಿ ಹಣ ನಿಗದಿಯಾಗಿದೆ ಎಂಬ ಕಾರಣಕ್ಕೆ ಹೆಸ್ಕಾಂ ವ್ಯಾಪ್ತಿಯಲ್ಲಿ ಸುಮಾರು ₹ 200 ಕೋಟಿಯ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಹಣ ಬಿಡುಗಡೆಯಾಗದ ಕಾರಣ ಗುತ್ತಿಗೆದಾರರು ಸಾಲದ ಸುಳಿಗೆ ಸಿಲುಕಿಕೊಂಡಿದ್ದಾರೆ. ಆದ್ದರಿಂದ, ಸರ್ಕಾರ ಕೂಡಲೇ ಟೆಂಡರ್‌ ಹಣ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಲು ಆದೇಶಿಸಿಬೇಕು’ ಎಂದು ಒತ್ತಾಯಿಸಿದರು.

ಅಸೋಸಿಯೇಷನ್‌ ಸದಸ್ಯ ಎಂ.ಎಸ್‌. ಮಂಜುನಾಥ್, ‘ಹೆಸ್ಕಾಂ, ಬೆಸ್ಕಾಂ ಮತ್ತು ಸೆಸ್ಕ್‌ನ ಆದೇಶವಿದೆ ಎಂಬ ಕಾರಣಕ್ಕೆ ಟೆಂಡರ್‌ ಪಡೆದುಕೊಂಡಿರುವ ಗುತ್ತಿಗೆದಾರರು, ₹ 500 ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಂಡಿದ್ದಾರೆ. ಈ ಸಾಮಗ್ರಿಗಳ  ಖರೀದಿಗಾಗಿ ಬ್ಯಾಂಕ್‌ಗಳಿಂದ ಸಾಲ ಮಾಡಿಕೊಂಡು, ಬಡ್ಡಿ ಪಾವತಿ ಮಾಡುತ್ತಿದ್ದೇವೆ. ಆದರೆ ಸರ್ಕಾರ ಮಾತ್ರ ಕಾರ್ಯಾದೇಶ ನೀಡಲು ಸತಾಯಿಸುತ್ತಿದೆ’ ಎಂದು ಹೇಳಿದರು.

‘ಕಾಮಗಾರಿಗಳ ಬಿಲ್‌ ಪಾವತಿಸಲು ಹಿಂದೆ ಅಧಿಕಾರಿಗಳು ಕಮಿಷನ್‌ ಕೇಳುತ್ತಿದ್ದರು. ಈಗ ಕಾರ್ಯಾದೇಶ ನೀಡಲು ಹಣದ ಬೇಡಿಕೆ ಇಡುತ್ತಿದ್ದಾರೆ. ಇದರಿಂದ, 200 ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT