ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲರ ನಡುವೆ ಬದುಕಿರುವ ಬಸವಣ್ಣ: ಶಾಸಕ ಬಸವರಾಜ ಬೊಮ್ಮಾಯಿ

ಬಸವಶ್ರೀ, ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಬಸವರಾಜ ಬೊಮ್ಮಾಯಿ
Published 12 ಮೇ 2024, 16:35 IST
Last Updated 12 ಮೇ 2024, 16:35 IST
ಅಕ್ಷರ ಗಾತ್ರ

ಬೆಂಗಳೂರು: ‘ಮೂಢನಂಬಿಕೆ, ತಾರತಮ್ಯಗಳನ್ನು ಸಮಾಜದಿಂದ ತೆಗೆದು ಹಾಕಲು ಬಸವಣ್ಣ ಕಲ್ಯಾಣ ಕ್ರಾಂತಿ ಮಾಡಿದರು. ಅದರ ಪ‍ರಿಣಾಮ ಅವರು ಪ್ರಾಣ ಕಳೆದುಕೊಳ್ಳಬೇಕಾಯಿತು. ಅಂದು ಪ್ರಾಣ ಕಳೆದುಕೊಂಡರೂ ಇಂದಿಗೂ ಎಲ್ಲರ ನಡುವೆ ಬದುಕಿರುವ ಜೀವಾತ್ಮ ಅವರು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬಸವ ವೇದಿಕೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಬಸವಣ್ಣ ಹೊಂದಾಣಿಕೆ ಮಾಡಿಕೊಂಡಿದ್ದರೆ ಬಿಜ್ಜಳನ ಮಂತ್ರಿಯಾಗಿ ಮುಂದುವರಿಯಬಹುದಿತ್ತು. ಅಲ್ಪಾಯುಷಿಯಾಗದೇ ದೀರ್ಘ ಕಾಲ ಬದುಕಬಹುದಿತ್ತು. ಆದರೆ, ತತ್ವ, ಸಿದ್ಧಾಂತಕ್ಕಾಗಿ, ಜನರಿಗಾಗಿ ಅವರು ರಾಜೀ ಮಾಡಿಕೊಳ್ಳಲಿಲ್ಲ. ಅಂಥ ಬಸವಣ್ಣ ಸಮಾಜದಲ್ಲಿರುವ ಎಲ್ಲ ಅನಿಷ್ಟಗಳು ದೂರವಾಗುವವರೆಗೆ ನಮ್ಮ ನಡುವೆ ಇರಬೇಕು’ ಎಂದು ಆಶಿಸಿದರು.

‘ಜಗತ್ತಿನಲ್ಲಿ ಮೂರು ಬಗೆಯ ಹೋರಾಟಗಾರರು ಇದ್ದಾರೆ. ಪ್ರತಿಕ್ರಿಯೆ ನೀಡುವವರು ಮೊದಲನೆಯವರು. ಅವರು ಯಾವಾಗಲೂ ಭೂತಕಾಲದಲ್ಲಿ ಇರುತ್ತಾರೆ. ಆ ಕಾಲದಲ್ಲಿ ನಮ್ಮ ಭೂಮಿ, ನಮ್ಮ ಸ್ವತ್ತು ಆಗಿತ್ತು ಎಂದು ಈ ಕಾಲದಲ್ಲಿ ಹೋರಾಟ ಮಾಡುತ್ತಿರುತ್ತಾರೆ. ಇಸ್ರೇಲ್‌ ಇದಕ್ಕೆ ಉದಾಹರಣೆ’ ಎಂದು ವಿಶ್ಲೇಷಿಸಿದರು.

‘ವ್ಯವಸ್ಥೆಯನ್ನು ಬದಲಾಯಿಸಲು ಒಂದಾಗುವ ಕ್ರಾಂತಿಕಾರಿಗಳು ಎರಡನೆಯವರು. ರಕ್ತಸಿಕ್ತ ಅಥವಾ ಅಹಿಂಸಾತ್ಮಕ ಯಾವುದೇ ಮಾರ್ಗವಾದರೂ ಬದಲಾವಣೆ ಮಾಡುತ್ತಾರೆ. ಬದಲಾವಣೆಯ ಬಳಿಕ ಅವರಲ್ಲಿ ಒಗ್ಗಟ್ಟು ಉಳಿಯುವುದಿಲ್ಲ. ಹಾಗಾಗಿ ಫ್ರಾನ್ಸ್‌ ಕ್ರಾಂತಿ, ರಷ್ಯಾಕ್ರಾಂತಿ, ಚೀನಾಕ್ರಾಂತಿ ಸಹಿತ ಎಲ್ಲವೂ ವಿಫಲವಾದವು’ ಎಂದರು.

‘ಬಂಡಾಯಗಾರರು ಮೂರನೇ ಗುಂಪು. ಅವರು ಒಬ್ಬರೇ ಇದ್ದರೂ ತತ್ವ, ಸಿದ್ಧಾಂತಕ್ಕಾಗಿ ಬದುಕುತ್ತಾರೆ. ಪ್ರಾಣ ಹೋದರೂ ಸಿದ್ಧಾಂತ ಬಿಡಲ್ಲ. ಜನರ ಮನಸ್ಸನ್ನು ಪರಿವರ್ತಿಸಲು ನಿರಂತರ ಕೆಲಸ ಮಾಡುತ್ತಾರೆ. ಬುದ್ಧ, ಬಸವಣ್ಣ, ಏಸು, ಮಹಮ್ಮದ್‌ ಪೈಗಂಬರ್‌ ಈ ಸಾಲಿಗೆ ಸೇರಿದವರು’ ಎಂದರು.

ಬಸವಣ್ಣ, ದೇವರು ಮತ್ತು ಭಕ್ತರ ನಡುವೆ ಮಧ್ಯವರ್ತಿಗಳನ್ನು ತೆಗೆದು ಹಾಕಿ ಇಷ್ಟಲಿಂಗ ನೀಡಿದರು. ಆದರೆ, ಇಂದು ಮಧ್ಯವರ್ತಿಗಳು ಇಲ್ಲದೇ ಯಾವ ಕಾರ್ಯವೂ ಆಗದಷ್ಟು ಮೌಢ್ಯ ಬೆಳೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಾಜಿ ಸಚಿವೆ ಲೀಲಾದೇವಿ ಆರ್‌. ಪ್ರಸಾದ್‌ ಅವರಿಗೆ ‘ಬಸವಶ್ರೀ’ ಪ್ರಶಸ್ತಿ ಹಾಗೂ ಹಿಂದೂಸ್ತಾನಿ ಸಂಗೀತ ಗಾಯಕ ಪಂಡಿತ್‌ ಅಂಬಯ್ಯ ನುಲಿ ಅವರಿಗೆ ‘ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರತ್ನಕಲಾ ಅಧ್ಯಕ್ಷತೆ ವಹಿಸಿದ್ದರು. ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌, ಬಸವ ವೇದಿಕೆ ಅಧ್ಯಕ್ಷ ಸಿ. ಸೋಮಶೇಖರ್‌, ಉಪಾಧ್ಯಕ್ಷ ಎಸ್‌. ಷಡಕ್ಷರಿ ಉಪಸ್ಥಿತರಿದ್ದರು.

‘ಸಾವಿರಾರು ಕೋಟಿ ರೂಪಾಯಿ ಉಳಿತಾಯ’ ‘ನಾನು ಮುಖ್ಯಮಂತ್ರಿಯಾಗಿದ್ದಾಗ ಕೆಲವರು 40 ಪರ್ಸೆಂಟ್‌ ಆರೋಪ ಮಾಡಿದ್ದರು. ಈಗ ಅವರೆಲ್ಲಿದ್ದಾರೋ ಗೊತ್ತಿಲ್ಲ. ನಾನು ಈ ಬಗ್ಗೆ ಪಾರದರ್ಶಕತೆ ಕಾಪಾಡಲು ಯಾವುದೇ ಟೆಂಡರ್ ನೀಡುವ ಮೊದಲು ಪರಿಶೀಲನೆಗೆ  ನ್ಯಾ. ರತ್ನಕಲಾ ಅವರ ನೇತೃತ್ವದಲ್ಲಿ ಸಮಿತಿ ಮಾಡಿದೆ‌. ಈ ಸಮಿತಿ ಉತ್ತಮ ಕೆಲಸ ಮಾಡಿದ್ದರಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ಉಳಿಯಿತು’ ಎಂದು ಶಾಸಕ ಬಸವರಾಜ ಬೊಮ್ಮಾಯಿ ನೆನಪು ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT