ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜುಲೈನಲ್ಲಿ ಉದ್ಯೋಗ ಮೇಳ ಆಯೋಜನೆ: ನಂಜೇಗೌಡ

ಒಕ್ಕಲಿಗರ ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷರ ಮಾಹಿತಿ
Published 14 ಏಪ್ರಿಲ್ 2024, 16:25 IST
Last Updated 14 ಏಪ್ರಿಲ್ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ಯಾಲೆಸ್‌ ಗುಟ್ಟಹಳ್ಳಿಯ ಬಿಲ್ವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಒಕ್ಕಲಿಗರ ಯುವ ಬ್ರಿಗೇಡ್ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ ವತಿಯಿಂದ ಭಾನುವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ ಪರೀಕ್ಷೆ ಸೇರಿದಂತೆ ದಂತ, ಚರ್ಮರೋಗ, ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು, ಮೂಳೆ ತಜ್ಞರು ನೂರಾರು ಮಂದಿಯ ಆರೋಗ್ಯ ತಪಾಸಣೆ ನಡೆಸಿದರು. ಇದೇ ವೇಳೆ ಉಚಿತ ಔಷಧಗಳನ್ನೂ ವಿತರಿಸಲಾಯಿತು.

ಒಕ್ಕಲಿಗರ ಯುವ ಬ್ರಿಗೇಡ್ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಮಾತನಾಡಿ, ‘ಸಂಸ್ಥೆಯ ಮೂಲಕ ಕಳೆದ ವರ್ಷ ಸುಮಾರು ಮೂರು ಸಾವಿರ ಯುವಜನರಿಗೆ ಉಚಿತ ಉದ್ಯೋಗಾವಕಾಶ ಕಲ್ಪಿಸಿದ್ದು, ಸುಮಾರು 150 ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡಲಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಉಚಿತ ಆರೋಗ್ಯ ಮೇಳ ನಡೆಸಿ ಗ್ರಾಮೀಣ ಜನರಿಗೆ ಸೇವೆ ಒದಗಿಸಲು ಸಹಕಾರ ನೀಡಿದ್ದೇವೆ’ ಎಂದರು.

‘ಈ ವರ್ಷ ನಾಲ್ಕು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ತುಮಕೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಿ, 750 ಯುವಕರಿಗೆ ಉದ್ಯೋಗ ದೊರಕಿಸಲಾಗಿದೆ. ಮುಂದಿನ ಉದ್ಯೋಗ ಮೇಳವನ್ನು ಮೈಸೂರಿನ ಪಿರಿಯಾಪಟ್ಟಣದಲ್ಲಿ ಜುಲೈ ವೇಳೆಗೆ ಆಯೋಜಿಸಲು ತೀರ್ಮಾನಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನದ ಬೆಂಗಳೂರು ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ‘ಹಿಂದೆ ಆರೋಗ್ಯ ಸ್ಥಿತಿ ಚೆನ್ನಾಗಿ ಇರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಉತ್ತಮ ಆಹಾರ ಪದ್ಧತಿ ಅಳವಡಿಕೆ ಮಾಡಿಕೊಳ್ಳುವ ಜತೆಗೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ’ ಎಂದು ಹೇಳಿದರು.

ಬಿಲ್ವ ಮಲ್ಟ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಕೇಶವಮೂರ್ತಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೂ ಗುಣಮಟ್ಟ ಆರೋಗ್ಯ ಸೇವೆ ಕಲ್ಪಿಸಲಾಗುವುದು. ದೊಡ್ಡ ಮಟ್ಟದಲ್ಲಿ ಉಚಿತ ಆರೋಗ್ಯ ಮೇಳವನ್ನು ನಡೆಸುವ ಮೂಲಕ ವೈದ್ಯಕೀಯ ಸೇವೆ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಮಾಡಲಾಗುವುದು’ ಎಂದು ಹೇಳಿದರು.

ಎಂಜಿನಿಯರ್‌ ಬಿ.ಕೆ.ಪವಿತ್ರಾ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಟಿ.ಆರ್.ಚಂದ್ರಶೇಖರ್‌ ಸ್ತ್ರೀರೋಗ ತಜ್ಞರಾದ ಡಾ.ಗೋಪಿನಾಥ್, ಮಾಜಿ ಸಿಂಡಿಕೇಟ್ ಸದಸ್ಯ ನಂಜುಂಡಯ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT