ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೇಳಕ್ಕೆ ತೆರೆ, ಉದ್ಯೋಗದ ನಿರೀಕ್ಷೆ

ಉದ್ಯೋಗ ಮೇಳ: ಕೆಲವರಿಗಷ್ಟೇ ನೇಮಕಾತಿ ಪತ್ರ, ಎರಡನೇ ದಿನ ತಗ್ಗಿದ ಆಕಾಂಕ್ಷಿಗಳ ಸಂಖ್ಯೆ
Published 28 ಫೆಬ್ರುವರಿ 2024, 0:50 IST
Last Updated 28 ಫೆಬ್ರುವರಿ 2024, 0:50 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಅರಮನೆ ಮೈದಾನದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಎರಡು ದಿನ ನಡೆದ ‘ಬೃಹತ್‌ ಉದ್ಯೋಗ ಮೇಳ’ಕ್ಕೆ ಮಂಗಳವಾರ ಸಂಜೆ ತೆರೆಬಿತ್ತು. ಸ್ವವಿವರ ಸಲ್ಲಿಸಿದ ಸಾವಿರಾರು ಅಭ್ಯರ್ಥಿಗಳು, ಉದ್ಯೋಗ ಲಭಿಸುವ ನಿರೀಕ್ಷೆಯಲ್ಲಿ ವಾಪಸ್‌ ಆದರು.

‘ಅಂದಾಜು 86 ಸಾವಿರ ಮಂದಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರು. ಆಫ್‌ಲೈನ್‌ನಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಿದ್ದರಿಂದ ಸ್ಥಳದಲ್ಲೇ ಹಲವರು ಹೆಸರು ನೋಂದಣಿ ಮಾಡಿಕೊಂಡಿದ್ದರು. ಹೀಗಾಗಿ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಮೇಳಕ್ಕೆ ಬಂದಿದ್ದರು’ ಎಂದು ಇಲಾಖೆ ಮೂಲಗಳು ತಿಳಿಸಿವೆ.

‘ಪ್ರತಿ ಉದ್ಯೋಗಾಕಾಂಕ್ಷಿ, ಐದು ಕಂಪನಿಗಳಿಗೆ ಸ್ವವಿವರ ಸಲ್ಲಿಸಲು ಅವಕಾಶವಿತ್ತು. ಕೆಲವು ಕಂಪನಿಗಳು ಲಿಖಿತ ಪರೀಕ್ಷೆ, ಸ್ಥಳದಲ್ಲೇ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಂಡಿವೆ. ಅಂಥವರಿಗೆ ಸಮಾರೋಪ ಸಮಾರಂಭದಲ್ಲಿ ನೇಮಕಾತಿ ಪತ್ರ ನೀಡಲಾಯಿತು. ಉಳಿದವರ ಸ್ವವಿವರ ಪರಿಶೀಲಿಸಿ ಅರ್ಹರಿಗೆ ಕಂಪನಿಯಿಂದಲೇ ಕರೆ ಬರಲಿದೆ. ಆಗ ಮತ್ತೆ ಸಂದರ್ಶನಕ್ಕೆ ಹಾಜರಾಗಬಹುದು’ ಎಂದು ಅಧಿಕಾರಿಗಳು ಹೇಳಿದರು.

‘ವಿವಿಧ ಕಂಪನಿಗಳ 530 ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. 1.30 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದವು. ಮೇಳದಲ್ಲಿ ಭಾಗಿಯಾದ ಕಂಪನಿಗಳ ಜೊತೆಗೆ ನಿರಂತರ ಸಂಪರ್ಕ ಸಾಧಿಸಿ, ಎಷ್ಟು ಮಂದಿಗೆ ಉದ್ಯೋಗ ಕಲ್ಪಿಸಲಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಎರಡನೇ ದಿನವಾದ ಮಂಗಳವಾರ ರಾಜ್ಯದ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ಬಂದಿದ್ದರು. ಅವರೆಲ್ಲ ವಿವಿಧ ಕಂಪನಿಗಳಿಗೆ ಸ್ವವಿವರ ಸಲ್ಲಿಸಿದರು. ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಂತಿಮ ವರ್ಷ ಎಂಜಿನಿಯರಿಂಗ್‌ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಕಾಲೇಜು ವತಿಯಿಂದಲೇ ಬಸ್‌ನಲ್ಲಿ ಮೇಳಕ್ಕೆ ಕರೆ ತರಲಾಗಿತ್ತು.

ಎರಡನೇ ದಿನ ಮೇಳಕ್ಕೆ ಬಂದ ಆಕಾಂಕ್ಷಿಗಳ ಸಂಖ್ಯೆ ತಗ್ಗಿತ್ತು. ಯುವಕ, ಯುವತಿಯರು ಪೆಂಡಾಲ್‌ನಲ್ಲಿ ಸುತ್ತಾಟ ನಡೆಸಿ, ತಮಗೆ ಸೂಕ್ತ ಎನಿಸಿದ ಕಂಪನಿಗಳಿಗೆ ತಮ್ಮ ವಿವರ ಸಲ್ಲಿಸಿದರು.

ಮಂಗಳವಾರ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಸಮಾವೇಶಕ್ಕಾಗಿ ಸಾವಿರಾರು ಮಂದಿ ಬಂದಿದ್ದರು. ಅದೇ ಮಾರ್ಗದಲ್ಲಿ ಉದ್ಯೋಗ ಮೇಳಕ್ಕೆ ಬರಬೇಕಿದ್ದವರು ಸಂಚಾರ ದಟ್ಟಣೆಯಿಂದಾಗಿ ಸ್ಥಳಕ್ಕೆ ತಲುಪಲು ಪರದಾಡಬೇಕಾಯಿತು. ಮೈಸೂರು, ಮಂಡ್ಯ, ರಾಮನಗರ ಕಡೆಯಿಂದ ಮೇಳಕ್ಕೆ ಬರಬೇಕಿದ್ದವರು ನೈಸ್‌ ರಸ್ತೆಯಲ್ಲಿ ಉಂಟಾದ ದಟ್ಟಣೆಯಲ್ಲಿ ಸಿಲುಕಿ ಮಧ್ಯಾಹ್ನದ ಬಳಿಕ ಅರಮನೆ ಮೈದಾನಕ್ಕೆ ಬಂದಿದ್ದರು.

‘ಮೇಳ ಆಯೋಜನೆಯಿಂದ ಕಂಪನಿಗಳಿಗೆ ಪ್ರತಿಭಾನ್ವಿತ ಉದ್ಯೋಗಿಗಳು ಲಭಿಸುತ್ತಾರೆ. ನಾವೇ ಕಾಲೇಜಿಗೆ ತೆರಳಿ ‘ಕ್ಯಾಂಪಸ್‌ ಸಂದರ್ಶನ’ ನಡೆಸುತ್ತಿದ್ದವು. ಅದರ ಬದಲಿಗೆ ಸರ್ಕಾರವೇ ಈ ರೀತಿಯ ಮೇಳ ಆಯೋಜಿಸಲಿ’ ಎಂದು ಕಂಪನಿಯೊಂದರ ಪ್ರತಿನಿಧಿ ಹೇಳಿದರು.

ಪ್ರವೀಣ್ ಕುಮಾರ್‌ 
ಪ್ರವೀಣ್ ಕುಮಾರ್‌ 
ಅದಿಯಾ ಅಹ್ಮದ್
ಅದಿಯಾ ಅಹ್ಮದ್
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೌಶಲ್ಯಾಭಿವೃದ್ದಿ ಇಲಾಖೆ ಮೊದಲ ಬಾರಿಗೆ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದ ಎರಡನೇ ದಿನವಾದ ಮಂಗಳವಾರ ಉದ್ಯೋಗಾಕಾಂಕ್ಷಿಗಳ ದಂಡು. – ಪ್ರಜಾವಾಣಿ ಚಿತ್ರ/ರಂಜು ಪಿ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೌಶಲ್ಯಾಭಿವೃದ್ದಿ ಇಲಾಖೆ ಮೊದಲ ಬಾರಿಗೆ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳದ ಎರಡನೇ ದಿನವಾದ ಮಂಗಳವಾರ ಉದ್ಯೋಗಾಕಾಂಕ್ಷಿಗಳ ದಂಡು. – ಪ್ರಜಾವಾಣಿ ಚಿತ್ರ/ರಂಜು ಪಿ.
ಉದ್ಯೋಗಾಕಾಂಕ್ಷಿಗಳು ಲಿಖಿತ ಪರೀಕ್ಷೆ ಬರೆದರು. – ಪ್ರಜಾವಾಣಿ ಚಿತ್ರ/ರಂಜು ಪಿ
ಉದ್ಯೋಗಾಕಾಂಕ್ಷಿಗಳು ಲಿಖಿತ ಪರೀಕ್ಷೆ ಬರೆದರು. – ಪ್ರಜಾವಾಣಿ ಚಿತ್ರ/ರಂಜು ಪಿ

2.58 ಲಕ್ಷ ಖಾಲಿ ಹುದ್ದೆ ಭರ್ತಿಗೆ ಆಗ್ರಹ

‘ನಿರುದ್ಯೋಗದ ಸಮಸ್ಯೆ ತಗ್ಗಿಸಲು ಪ್ರತಿವರ್ಷ ಪ್ರಾದೇಶಿಕವಾರು ಬೃಹತ್‌ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದರೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಸುಮಾರು 2.58 ಲಕ್ಷ ಹುದ್ದೆಗಳ ಬಗ್ಗೆ ಚಕಾರ ಎತ್ತಿಲ್ಲ’ ಎಂದು ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಧಾಳ್ ಹೇಳಿದ್ದಾರೆ.

ಅನಿಸಿಕೆಗಳು...

ಮೊದಲ ಬಾರಿಗೆ ದೊಡ್ಡಮಟ್ಟದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಇದರಿಂದ ಅಂತಿಮ ವರ್ಷದ ಪದವಿ ಓದುತ್ತಿರುವ ವಿದ್ಯಾರ್ಥಿಗಳೂ ಸೇರಿದಂತೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಸರ್ಕಾರ ಒಂದು ಉತ್ತಮ ವೇದಿಕೆ ಕಲ್ಪಿಸಿದೆ
ಫಿರ್ದೋಸ್ ಮೈಸೂರು
ಈಗಾಗಲೇ ನಾನು ಉದ್ಯೋಗದಲ್ಲಿದ್ದೇನೆ. ಇದಕ್ಕಿಂತ ಒಳ್ಳೆಯ ಕೆಲಸ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಮೇಳದಲ್ಲಿ ಪಾಲ್ಗೊಂಡಿದ್ದೇನೆ. ಪ್ರತಿಷ್ಠಿತ ಕಂಪನಿಗಳ ಸಂಖ್ಯೆ ಕಡಿಮೆಯಿತ್ತು
ಕೆ.ಎಂ.ಪ್ರವೀಣ್‌ ಕುಮಾರ್ ಕೊಟ್ಟೂರು
ಹೊಸದಾಗಿ ಪದವಿ ಮುಗಿಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳದಲ್ಲಿ ಕೆಲಸ ಒದಗಿಸುವ ಸರ್ಕಾರ ಕ್ರಮ ಶ್ಲಾಘನೀಯ
ಅದಿಯಾ ಅಹ್ಮದ್ ವಿದ್ಯಾರ್ಥಿನಿ ಮೈಸೂರು

ಉದ್ಯೋಗ ಮೇಳ– ನೋಂದಣಿ ವಿವರ

ಯುವಕರು 52203

ಯುವತಿಯರು 31224

ನೋಂದಣಿ ಮಾಡಿಕೊಂಡ ವಿವಿಧ ವಿದ್ಯಾರ್ಹತೆವುಳ್ಳವರು 23000

ಪದವೀಧರರು 20000

ಬಿ.ಇ ಪದವಿ11500

ಸ್ನಾತಕೋತ್ತರ ಪದವಿ10000

ಪಿಯುಸಿ ವ್ಯಾಸಂಗ ಮಾಡಿದವರು6487

ಐಟಿಐ 6319

ಡಿಪ್ಲೊಮಾ 4332

ಎಸ್‌ಎಸ್‌ಎಲ್‌ಸಿ 230

ಎಂ.ಇ1559

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT