ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮರಾಜ್‌ ರಸ್ತೆ: ಮುಂದಿನ ತಿಂಗಳು ಸಂಚಾರಕ್ಕೆ ಮುಕ್ತ

ಮೆಟ್ರೊ ಕಾಮಗಾರಿಗಾಗಿ ಐದು ವರ್ಷಗಳಿಂದ ಮುಚ್ಚಲಾಗಿರುವ ರಸ್ತೆ
Published 28 ಮಾರ್ಚ್ 2024, 21:54 IST
Last Updated 28 ಮಾರ್ಚ್ 2024, 21:54 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಗುಲಾಬಿ ಮಾರ್ಗದ ಕಾಮಗಾರಿ ಸಂಬಂಧ ಐದು ವರ್ಷಗಳ ಹಿಂದೆ ಮುಚ್ಚಲಾಗಿದ್ದ ಕಾಮರಾಜ್‌ ರಸ್ತೆ ಏಪ್ರಿಲ್‌ ಅಂತ್ಯದ ಒಳಗೆ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ನಾಗವಾರ–ಕಾಳೇನ ಅಗ್ರಹಾರ ಮೆಟ್ರೊ ಮಾರ್ಗದಲ್ಲಿ ಕಾವೇರಿ ಎಂಪೊರಿಯಂ ಜಂಕ್ಷನ್‌ನಿಂದ ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ ಅಂತರ್‌ಬದಲಾವಣೆಯ (ಇಂಟರ್‌ಚೇಂಜ್‌) ಎಂ.ಜಿ. ರಸ್ತೆ ಮೆಟ್ರೊ ಭೂಗತ ನಿಲ್ದಾಣ ನಿರ್ಮಿಸಲು ಕಾಮರಾಜ್‌ ರಸ್ತೆಯನ್ನು 2019ರಲ್ಲಿ ಬಿಎಂಆರ್‌ಸಿಎಲ್‌ ಮುಚ್ಚಿತ್ತು. ಆದರೆ, ಭೂಮಿ ಹಸ್ತಾಂತರ, ಮರಗಳ ತೆರವು ಪ್ರಕ್ರಿಯೆ ವಿಳಂಬವಾಗಿದ್ದರಿಂದ ಕಾಮಗಾರಿ ತುಂಬಾ ನಿಧಾನವಾಗಿ ಸಾಗಿತ್ತು. ಮಧ್ಯೆ ಕೋವಿಡ್‌ ಬಿಕ್ಕಟ್ಟು ಕೂಡಾ ವಿಳಂಬಕ್ಕೆ ಕಾರಣವಾಯಿತು.

ಕಾಮರಾಜ್‌ ರಸ್ತೆ ಮುಚ್ಚಿದ್ದರಿಂದ, ಈ ರಸ್ತೆ ಮೂಲಕ ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಇತರ ಸ್ಥಳಗಳನ್ನು ತಲುಪಲು ವಾಹನ ಸವಾರರು ಸುತ್ತು ಹಾಕಿಕೊಂಡು ಬರುವಂತಾಯಿತು. ಕಾಮರಾಜ್ ರಸ್ತೆ ಸಂಚಾರ ಮುಕ್ತಗೊಳ್ಳಬೇಕೆಂದು ಹಲವು ಮಂದಿ ಕಾಯುತ್ತಿದ್ದರು.

ಈಗ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಕಾಮರಾಜ್‌ ರಸ್ತೆಯ ಒಂದು ಬದಿಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಯಾವುದೇ ಸಮಸ್ಯೆ ಇಲ್ಲ. ಏಪ್ರಿಲ್‌ ಅಂತ್ಯದ ಒಳಗೆ ರಸ್ತೆಯ ಒಂದು ಬದಿಯಿಂದ ವಾಹನ ಸಂಚಾರ ಆರಂಭವಾಗಲಿದೆ. ಯಂತ್ರೋಪಕರಣಗಳ ಸಾಗಾಟಕ್ಕಾಗಿ ಇನ್ನೊಂದು ಬದಿಯ ರಸ್ತೆ ಬಳಕೆಯಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ. 

ನಗರದ ಅತಿ ಉದ್ದದ ಭೂಗತ ಹಳಿಯನ್ನು ಹೊಂದಿರುವ ಮೆಟ್ರೊ ಗುಲಾಬಿ ಮಾರ್ಗದ ಸುರಂಗ ಮಾರ್ಗದಲ್ಲಿ ರೈಲು ಸಂಚರಿಸುವಾಗ ಉಂಟಾಗುವ ಕಂಪನವನ್ನು ತಗ್ಗಿಸಲು ಮಾಸ್‌ ಸ್ಪ್ರಿಂಗ್‌ ಸಿಸ್ಟಂ (ಎಂಎಸ್‌ಎಸ್‌) ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಕಾಮರಾಜ್‌ ರಸ್ತೆ ಮೆಟ್ರೊ ನಿಲ್ದಾಣವು ನಾಲ್ಕು ಪ್ರವೇಶ–ನಿರ್ಗಮನ ದ್ವಾರಗಳನ್ನು ಹೊಂದಿರುತ್ತದೆ. ಈಗಾಗಲೇ ನೇರಳೆ ಮಾರ್ಗದಲ್ಲಿ ಇರುವ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣಕ್ಕೆ ಹೊಸ ನಿಲ್ದಾಣದ ಒಂದು ದ್ವಾರ ಸಂಪರ್ಕಿಸಲಿದೆ ಎಂದು ಮೆಟ್ರೊ ಸಾರ್ವಜನಿಕ ಸಂಪರ್ಕಾಧಿಕಾರಿ ವಿವರಿಸಿದ್ದಾರೆ.

ಕೊನೆ ಸುರಂಗ ಕೊರೆಯಲು ಬಾಕಿ

ಗುಲಾಬಿ ಮಾರ್ಗದಲ್ಲಿ ಕೊರೆಯಬೇಕಿರುವ ಕೊನೆಯ ಸುರಂಗಕ್ಕೆ ಏಪ್ರಿಲ್‌ ಮೊದಲ ವಾರದಲ್ಲಿ ಚಾಲನೆ ದೊರೆಯಲಿದೆ. ಜುಲೈ ಅಥವಾ ಆಗಸ್ಟ್‌ಗೆ ಈ ಯಂತ್ರಗಳು ಸುರಂಗ ಕೊರೆದು ಹೊರಬರಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೆಯುವ ಕೆಲಸ ಮುಗಿದಿರುವ ಸುರಂಗಗಳಲ್ಲಿ ಟ್ರ್ಯಾಕ್‌ ಸ್ಲ್ಯಾಬ್‌ ಅಳವಡಿಸುವ ಕಾಮಗಾರಿಗಳು ನಡೆಯುತ್ತಿವೆ. 2025ರ ಡಿಸೆಂಬರ್‌ ಅಂತ್ಯದ ಒಳಗೆ ಗುಲಾಬಿ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಪ್ರಾರಂಭವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT