ಉಡುಗೊರೆ ಸ್ವೀಕರಿಸಿದ ಪೊಲೀಸರಿಗೆ ಕೆಆರ್‌ಎಸ್ ಪಕ್ಷದಿಂದ ಒಳ ಉಡುಪು!
ಬೆಂಗಳೂರು: ಬಾಗಲಗುಂಟೆ ಠಾಣೆಯ ಪೊಲೀಸರು ಸೇವಾ ಶಿಷ್ಟಾಚಾರ ಉಲ್ಲಂಘಿಸಿ ಮಾಜಿ ಶಾಸಕರಿಂದ ಶರ್ಟ್ ಮತ್ತು ಪ್ಯಾಂಟ್ ಬಟ್ಟೆ ಉಡುಗೊರೆಯಾಗಿ ಪಡೆದ ಘಟನೆಯನ್ನು ಖಂಡಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಕಾರ್ಯಕರ್ತರು, ಅಲ್ಲಿನ ಪೊಲೀಸರಿಗೆ ಒಳ ಉಡುಪು ಮತ್ತು ಬಟ್ಟೆ ಹೊಲಿಸಿಕೊಳ್ಳಲು ಹಣ ನೀಡಲು ಮುಂದಾದರು!
ಈ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ (ಕೆಆರ್‌ಎಸ್) ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ‘ಉಡುಗೊರೆ ಸ್ವೀಕರಿಸಿದ ಕುರಿತು ಇಲಾಖೆಯಿಂದ ವಿಚಾರಣೆ ನಡೆಯುತ್ತಿದೆ. ಈ ಘಟನೆ ನನ್ನ ಕೈ ಮೀರಿ ನಡೆದಿದೆ ಎಂದು ಠಾಣಾಧಿಕಾರಿ ಸುನೀಲ್ ವಿಷಾದ ವ್ಯಕ್ತಪಡಿಸಿದ್ದಾರೆ’ ಎಂದಿದ್ದಾರೆ.
‘ಪೊಲೀಸ್ ಸೇವಾ ನಿಯಮಗಳ ಪ್ರಕಾರ ಉಡುಗೊರೆ ಪಡೆಯುವುದು ನಿಯಮಬಾಹಿರ. ನಾವು ತೆಗೆದುಕೊಂಡು ಹೋಗಿದ್ದ ಒಳ ಉಡುಪುಗಳನ್ನು ಪೊಲೀಸರು ತೆಗೆದುಕೊಳ್ಳಲಿಲ್ಲ. ಅಲ್ಲದೆ, ಸ್ಥಳದಲ್ಲಿಯೇ ಸಂಗ್ರಹಿಸಿದ್ದ ₹ 1,500 ದೇಣಿಗೆಯನ್ನೂ ಸ್ವೀಕರಿಸಲಿಲ್ಲ’ ಎಂದಿದ್ದಾರೆ.
‘ಈ ಪ್ರಕರಣದ ಕುರಿತು ಪೊಲೀಸ್ ಇಲಾಖೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ, ರಾಜ್ಯ ಎಲ್ಲ ಠಾಣೆಗಳ ಸಿಬ್ಬಂದಿಗೆ ಪೊಲೀಸ್ ನಡವಳಿಕೆ ಕುರಿತು ಸ್ಪಷ್ಟ ಸಂದೇಶದ ಸುತ್ತೋಲೆ ಹೊರಡಿಸಬೇಕು. ಈ ವಿಚಾರವಾಗಿ ಸದ್ಯದಲ್ಲಿಯೇ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಲಿದ್ದೇವೆ. ಪೊಲೀಸರನ್ನು ಭ್ರಷ್ಟ ಅಧಿಕಾರಿಗಳ ಮತ್ತು ರಾಜಕಾರಣಿಗಳ ಗುಲಾಮಗಿರಿ ಮತ್ತು ಕಪಿಮುಷ್ಠಿಯಿಂದ ಹೊರಗೆ ತಂದು ಪ್ರಾಮಾಣಿಕ, ದಕ್ಷ, ಸ್ವಾವಲಂಬಿ, ಕರ್ತವ್ಯನಿಷ್ಠರನ್ನಾಗಿ ಮಾಡಬೇಕು ಎನ್ನುವುದು ನಮ್ಮ ಗುರಿ’ ಎಂದೂ ಅವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.