ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿದ್ವಾಯಿ: ಅಧಿಕಾರಕ್ಕೆ ಮುನ್ನವೇ ಕಾರ್ಯಾದೇಶ– ಟೆಂಡರ್‌ನಲ್ಲಿ ಭ್ರಷ್ಟಾಚಾರದ ಆರೋ‍ಪ

ಕಿದ್ವಾಯಿ ಸಂಸ್ಥೆಯ ಹಿಂದಿನ ನಿರ್ದೇಶಕರ ಅವಧಿಯಲ್ಲಿ ಹಾಲಿ ನಿರ್ದೇಶಕರ ಸಹಿ
Published 16 ಆಗಸ್ಟ್ 2023, 23:51 IST
Last Updated 16 ಆಗಸ್ಟ್ 2023, 23:51 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಕಾರ ಸ್ವೀಕರಿಸುವ ಮುನ್ನವೇ ಪೆಟ್‌ ಸ್ಕ್ಯಾನ್‌ಗೆ ಸಂಬಂಧಿಸಿದ ಟೆಂಡರ್‌ಗೆ ಕಾರ್ಯಾದೇಶ ನೀಡಿದ ವಿಶೇಷ ಪ್ರಕರಣ ಇಲ್ಲಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಡೆದಿದೆ. 

2022ರ ಆಗಸ್ಟ್‌ನಲ್ಲಿ ಸಂಸ್ಥೆಯ ಈ ಹಿಂದಿನ ನಿರ್ದೇಶಕ ಡಾ.ಸಿ. ರಾಮಚಂದ್ರ ಅವರ ಅಧಿಕಾರಾವಧಿ ಅಂತ್ಯಗೊಂಡಿತ್ತು. ಆ ಸ್ಥಾನಕ್ಕೆ ಸರ್ಕಾರವು 2022ರ ಅಕ್ಟೋಬರ್ 17ರಂದು ರೇಡಿಯೇಷನ್ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ‌.ವಿ.ಲೋಕೇಶ್ ಅವರನ್ನು ನೇಮಿಸಿ ಆದೇಶ ಹೊರಡಿಸಿತ್ತು. ಆದರೆ, ಪೆಟ್‌ಸ್ಕ್ಯಾನ್‌ ನಿರ್ವಹಣೆ ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದಂತೆ 2022ರ ಆಗಸ್ಟ್ 18ರಂದು ಬೆಂಗಳೂರು ಮೆಡಿಕಲ್ ಸಿಸ್ಟಮ್ಸ್‌ (ಬಿಎಂಎಸ್) ಸಂಸ್ಥೆಗೆ ಕಾರ್ಯಾದೇಶ ನೀಡಲಾಗಿದ್ದು, ಇದಕ್ಕೆ ಡಾ.ವಿ.ಲೋಕೇಶ್ ಸಹಿ ಇದೆ. ಇದರಿಂದಾಗಿ ಟೆಂಡರ್‌ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಸಿಬ್ಬಂದಿ ಆರೋಪಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಪೆಟ್‌ಸ್ಕ್ಯಾನ್ ಪರೀಕ್ಷೆ ದುಬಾರಿಯಾಗಿದ್ದು, ಒಮ್ಮೆ ಪೆಟ್‌ಸ್ಕ್ಯಾನ್‌ ಮಾಡಿಸಿಕೊಳ್ಳಲು ₹25 ಸಾವಿರದಿಂದ ₹28 ಸಾವಿರದವರೆಗೆ ಶುಲ್ಕ ಪಾವತಿಸಬೇಕು. ಆದ್ದರಿಂದ ಸಂಸ್ಥೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಈ ಸೇವೆ ಪ್ರಾರಂಭಿಸಲು ಡಾ.ಸಿ. ರಾಮಚಂದ್ರ ಅವರು ಬಿಎಂಎಸ್‌ ಸಂಸ್ಥೆಗೆ ಕಾರ್ಯಾದೇಶ ನೀಡಿದ್ದರು. ಸಂಸ್ಥೆಯ ರೋಗಿಗಳಿಗೆ ಪ್ರತಿ ಪೆಟ್‌ಸ್ಕ್ಯಾನ್‌ಗೆ ₹ 7,200 ಹಾಗೂ ಹೊರಗಡೆಯ ರೋಗಿಗಳಿಗೆ ₹ 9,200 ನಿಗದಿಪಡಿಸಲಾಗಿತ್ತು. ಡಾ.ವಿ.ಲೋಕೇಶ್ ಅವರು ನಿರ್ದೇಶಕರಾಗಿ ನೇಮಕವಾದ ಬಳಿಕ ಹಳೆಯ ಕಾರ್ಯಾದೇಶ ರದ್ದುಪಡಿಸಿ, ಕೆಲವೊಂದು ಬದಲಾವಣೆಯೊಂದಿಗೆ ಹೊಸದಾಗಿ ಕಾರ್ಯಾದೇಶ ಹೊರಡಿಸಿದ್ದಾರೆ ಎಂಬ ಆರೋ‍ಪಿಸಲಾಗಿದೆ. 2022ರ ಆ.18ರ ಕಾರ್ಯಾದೇಶದಲ್ಲಿ ಇರುವ ಸಹಿ ತಮ್ಮದಲ್ಲವೆಂದು ಡಾ.ಸಿ. ರಾಮಚಂದ್ರ ಸ್ಪಷ್ಟಪಡಿಸಿದ್ದಾರೆ. 

3 ಲಕ್ಷಕ್ಕೂ ಅಧಿಕ ಮಂದಿಗೆ ಚಿಕಿತ್ಸೆ: ಸಂಸ್ಥೆಯಲ್ಲಿ ಪ್ರತಿವರ್ಷ 3 ಲಕ್ಷಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸಂಸ್ಥೆಯಲ್ಲಿನ ‘ಪೆಟ್‌ಸ್ಕ್ಯಾನ್‌’ ಘಟಕದಲ್ಲಿ ಪರೀಕ್ಷೆಗೆ ಒಳಗಾಗುವ ಪ್ರತಿ ರೋಗಿಯೂ ನಿಗದಿತ ಕೌಂಟರ್‌ನಲ್ಲಿ ಟೋಕನ್ ಪಡೆದು, ಪೆಟ್‌ಸ್ಕ್ಯಾನ್‌ಗೆ ಒಳಪಡಬೇಕೆಂಬ ನಿಯಮ ಟೆಂಡರ್‌ನಲ್ಲಿದೆ. ವಿತರಿಸಲಾದ ಟೋಕನ್ ಅನುಸಾರ ಸಂಸ್ಥೆಯು ಪೆಟ್‌ಸ್ಕ್ಯಾನ್‌ ಸೇವೆ ಒದಗಿಸುವವರಿಗೆ ಹಣ ಪಾವತಿಸಬೇಕಿದೆ. ಸಂಸ್ಥೆಯ ಹಾಗೂ ಹೊರಗಿನ ರೋಗಿಗಳು ನೇರವಾಗಿ ಪೆಟ್‌ ಸ್ಕ್ಯಾನ್‌ಗೆ ಒಳಪಡುವಂತಿಲ್ಲ. ಆದರೆ, ಈಗ ಈ ನಿಯಮ ಪಾಲನೆಯಾಗುತ್ತಿಲ್ಲ ಎಂದು ಅಲ್ಲಿನ ಸಿಬ್ಬಂದಿ ದೂರಿದ್ದಾರೆ.

‘ಪೆಟ್‌ಸ್ಕ್ಯಾನ್‌ಗೆ ಸಂಬಂಧಿಸಿದ ಟೆಂಡರ್ ಪಾರದರ್ಶಕವಾಗಿ ನಡೆದಿಲ್ಲ. ಈ ಹಿಂದೆ ಸಿದ್ಧಪಡಿಸಿದ ಕರಡನ್ನು ತಿದ್ದುಪಡಿ ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ನೇರವಾಗಿ ಪೆಟ್‌ಸ್ಕ್ಯಾನ್ ಮಾಡಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದ್ದು, ಹೆಚ್ಚಿನ ಹಣ ಪಡೆಯಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಂಸ್ಥೆಯ ಸಿಬ್ಬಂದಿಯೊಬ್ಬರು ತಿಳಿಸಿದರು. 

ಡಾ.ಸಿ.ರಾಮಚಂದ್ರ
ಡಾ.ಸಿ.ರಾಮಚಂದ್ರ
ಕಿದ್ವಾಯಿ ಸಂಸ್ಥೆಯಲ್ಲಿ ವಿಶ್ವ ದರ್ಜೆ ಸೇವೆ ಒದಗಿಸಲು ಕ್ರಮವಹಿಸಲಾಗಿತ್ತು. ಈಗ ಅಲ್ಲಿ ಏನಾಗುತ್ತಿದೆ ಎಂಬುದರ ಮಾಹಿತಿಯಿಲ್ಲ. ಪೆಟ್‌ಸ್ಕ್ಯಾನ್ ಕಾರ್ಯಾದೇಶದಲ್ಲಿ ಇರುವ ಸಹಿ ನನ್ನದಲ್ಲ.
– ಡಾ.ಸಿ. ರಾಮಚಂದ್ರ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿಕಟಪೂರ್ವ ನಿರ್ದೇಶಕ

‘ಅನಗತ್ಯ ಗೊಂದಲ ಸೃಷ್ಟಿ’

‘ಸಂಸ್ಥೆಯ ಹಿಂದಿನ ನಿರ್ದೇಶಕರು ಟೆಂಡರ್‌ಗೆ ಕಾರ್ಯಾದೇಶ ಹೊರಡಿಸಿದ್ದರು. ಇದಕ್ಕೆ 2022ರ ಅಕ್ಟೋಬರ್ ತಿಂಗಳಲ್ಲಿ ಅಣು ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) ಅನುಮೋದನೆ ನೀಡಿತ್ತು. ಆದ್ದರಿಂದ ಟೆಂಡರ್ ಪ್ರತಿಗೆ ಸಹಿ ಹಾಕಲಾಯಿತು. ಅದರ ಮೇಲೆ ಎಇಆರ್‌ಬಿ ಅನುಮೋದನೆ ಎಂದು ಸಹ ಬರೆಯಲಾಗಿದೆ. ಅನಗತ್ಯವಾಗಿ ಗೊಂದಲ ಸೃಷ್ಟಿಸಲಾಗುತ್ತಿದೆ’ ಎಂದು ಡಾ‌.ವಿ.ಲೋಕೇಶ್ ಹೇಳಿದರು.  ‘ಪೆಟ್‌ಸ್ಕ್ಯಾನ್‌ಗೆ ಟೆಂಡರ್‌ನಲ್ಲಿ ನಿಗದಿಪಡಿಸಿದ ಹಣವನ್ನು ಮಾತ್ರ ಪಡೆಯಾಗುತ್ತಿದೆ. ಯಾವುದೇ ರೀತಿಯ ಹೆಚ್ಚುವರಿ ಹಣವನ್ನು ಪಡೆಯಲಾಗುತ್ತಿಲ್ಲ. ದರವನ್ನು ಮೊದಲೇ ನಿಗದಿಪಡಿಸಲಾಗಿತ್ತು’ ಎಂದು ತಿಳಿಸಿದರು. 

ಏನಿದು ಪೆಟ್‌ಸ್ಕ್ಯಾನ್‌?

ಪೊಸಿಟ್ರಾನ್ ಎಮಿಷನ್ ಟೊಮೊಗ್ರಫಿ ಎಂಬುದು ಪೆಟ್‌ನ ವಿಸ್ತೃತ ರೂಪ. ಪೆಟ್ ಸ್ಕ್ಯಾನ್ ಕ್ಯಾನ್ಸರ್ ರೋಗಿಗಳಿಗೆ ಅಗತ್ಯವಾದ ಪರೀಕ್ಷೆ. ರಕ್ತದ ಕ್ಯಾನ್ಸರ್ (ಲಿಂಪೋಮಾ) ಲುಕೇಮಿಯಾ ಕ್ಷಯದಂತಹ ಸೋಂಕುಗಳನ್ನು ಪತ್ತೆ ಹಚ್ಚಲು ಹಾಗೂ ಕ್ಯಾನ್ಸರ್ ಕಾಯಿಲೆಯ ಹಂತಗಳನ್ನು ನಿಖರವಾಗಿ ತಿಳಿಯಲು ಈ ಪರೀಕ್ಷೆ ಸಹಕಾರಿ. ಖಾಲಿ ಹೊಟ್ಟೆಯಲ್ಲಿ ರೋಗಿಗೆ ರೇಡಿಯೊ ಆ್ಯಕ್ಟಿವ್‌ (ರೇಡಿಯೊಟ್ರೇಸರ್‌) ಚುಚ್ಚುಮದ್ದು ನೀಡಿ ಪೆಟ್‌ಸ್ಕ್ಯಾನ್‌ಗೆ ಒಳಪಡಿಸಲಾಗುತ್ತದೆ. 45 ರಿಂದ 60 ನಿಮಿಷದಲ್ಲಿ ಇಡೀ ದೇಹವನ್ನು ಸ್ಕ್ಯಾನ್‌ ಮಾಡಲಾಗುತ್ತದೆ. ಕ್ಯಾನ್ಸರ್‌ ಯಾವ ಹಂತದಲ್ಲಿದೆ ಎಂಬುದನ್ನು ಗುರುತಿಸಲು ಇದು ಸಹಾಯಕ. ಪ್ರಮುಖ ಕ್ಯಾನ್ಸರ್‌ ಆಸ್ಪತ್ರೆಗಳಲ್ಲಷ್ಟೇ ಈ ಯಂತ್ರ ಬಳಸಲಾಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT