ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವವರಿ 2ರಿಂದ ‘ಕರ್ಣಾಟ ಭಾರತ ಕಥಾಮಂಜರಿ’ ವಿಶೇಷ ಉಪನ್ಯಾಸ

Published 31 ಡಿಸೆಂಬರ್ 2023, 15:54 IST
Last Updated 31 ಡಿಸೆಂಬರ್ 2023, 15:54 IST
ಅಕ್ಷರ ಗಾತ್ರ

ಬೆಂಗಳೂರು: ಕುಮಾರವ್ಯಾಸ ಮತ್ತು ಆತ ರಚಿಸಿದ ಕನ್ನಡದ ಮೇರುಕಾವ್ಯ ‘ಕರ್ಣಾಟ ಭಾರತ ಕಥಾಮಂಜರಿ’ ಕುರಿತು ನಗರದ ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಜ. 2, 3 ಮತ್ತು 5ರಂದು ಸಂಜೆ 6.30ಕ್ಕೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.

ನ್ಯೂಯಾರ್ಕ್‌ನ ಸ್ಟೋನಿ ಬ್ರೂಕ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್‌.ಎನ್‌. ಶ್ರೀಧರ್‌ ಹಾಗೂ ಕುಮಾರವ್ಯಾಸ ಭಾರತದ ಕುರಿತು ವಿಶೇಷ ಅಧ್ಯಯನ ನಡೆಸಿರುವ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಅವರು ಈ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಹದಿನೈದನೇ ಶತಮಾನದ ಕನ್ನಡದ ಕ್ಲಾಸಿಕ್‌ ಕೃತಿ ಎನಿಸಿದ ಕುಮಾರವ್ಯಾಸ ಭಾರತವು ತನ್ನ ಅನನ್ಯತೆಯಿಂದ ಓದುಗರ ಮನವನ್ನು ಸೂರೆಗೊಂಡಿದೆ. ಸಾವಿರಾರು ಕನ್ನಡಿಗರ ಮನೆಯಲ್ಲಿ ನಿತ್ಯವೂ ಪಾರಾಯಣ ಮಾಡುತ್ತಿದ್ದ ಮಹಾಕಾವ್ಯವೂ ಇದಾಗಿದೆ. ಕುಮಾರವ್ಯಾಸ ಕವಿಯನ್ನು ಶೇಕ್ಸ್‌ಪಿಯರ್‌, ಕಾಳಿದಾಸ ಅವರಂತಹ ಮಹಾನ್‌ ಕವಿಗಳ ಜತೆಗೆ ಹೋಲಿಕೆ ಮಾಡಲಾಗುತ್ತದೆ. ಬಿಐಸಿಯಲ್ಲಿ ನಡೆಯಲಿರುವ ಉಪನ್ಯಾಸ ಸರಣಿಯಲ್ಲಿ ಶ್ರೀಧರ್‌ ಮತ್ತು ಹನೂರು ಅವರು, ಕುಮಾರವ್ಯಾಸ ಕವಿಯ ಮೇರು ವ್ಯಕ್ತಿತ್ವ, ಆತನ ಕಾಲಘಟ್ಟ, ಕವಿಯ ಕಾಣ್ಕೆ ಮತ್ತು ಮಹಾಭಾರತದ ಪಾತ್ರಪ್ರಪಂಚದ ‘ಉದ್ಯಾನ’ದಲ್ಲಿ ಕೇಳುಗರನ್ನು ಸುತ್ತಾಡಿಸಲಿದ್ದಾರೆ.

ತನ್ನ ಜೀವಿತಾವಧಿಗಿಂತ ಮುಂಚೆ ಬಂದಿದ್ದ ಮಹಾಭಾರತದ ವಿವಿಧ ಕಾವ್ಯಗಳು, ಅದರಲ್ಲೂ ಪಂಪ ಕಾವ್ಯವು ತುಳಿದ ಹೆಜ್ಜೆ ಜಾಡನಿಂದ ಹೊರಬಂದ ಕುಮಾರವ್ಯಾಸ ಹೇಗೆ ಹೊಸ‘ಮಾರ್ಗ’ವನ್ನೇ ರೂಪಿಸಿದ ಎಂಬುದನ್ನೂ ವಿವರಿಸಲಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ನಡೆಯುವ ಈ ಉಪನ್ಯಾಸವು ಮಹಾಭಾರತ ಕಥಾಜಗತ್ತಿನಲ್ಲಿ ಶ್ರೋತೃಗಳನ್ನು ವಿಹರಿಸುವಂತೆ ಮಾಡಲಿದೆ ಎಂದು ಬಿಐಸಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT