ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌; 215ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Published 18 ಜನವರಿ 2024, 20:26 IST
Last Updated 18 ಜನವರಿ 2024, 20:26 IST
ಅಕ್ಷರ ಗಾತ್ರ

ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ತೋಟಗಾರಿಕೆ ಇಲಾಖೆಯು ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿಕೊಂಡಿರುವ 215ನೇ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಚಾಲನೆ ದೊರೆಯಿತು. ಶುಕ್ರವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಸವಣ್ಣ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಇದೇ ವೇಳೆ ತೋಟಗಾರಿಕೆ ಇಲಾಖೆ ಪರಿಚಯಿಸುತ್ತಿರುವ ಜೇನು ತುಪ್ಪದ ನೂತನ ಬ್ರ್ಯಾಂಡ್ ‘ಝೇಂಕಾರ’ ಲೋಕಾರ್ಪಣೆ ಮಾಡಿದರು. ಈ ಬಾರಿಯ ಫಲಪುಷ್ಪ ಪ್ರದರ್ಶನವು ಬಸವಣ್ಣ ಮತ್ತು ವಚನ ಸಾಹಿತ್ಯವನ್ನು ಆಧರಿಸಿದ್ದು, ಈ ಪ್ರದರ್ಶನ ಇದೇ 28ರವರೆಗೆ ನಡೆಯಲಿದೆ.

ಈ ಬಾರಿಯ ಪ್ರದರ್ಶನಕ್ಕೆ 32 ಲಕ್ಷ ಹೂವುಗಳನ್ನು ಬಳಸಲಾಗಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅನುಭವ ಮಂಟಪದ ಪುಷ್ಪ ಮಾದರಿ ನಿರ್ಮಿಸಲಾಗಿದೆ. ಇದು ಬಸವಕಲ್ಯಾಣದಲ್ಲಿ ನಿರ್ಮಾಣದ ಹಂತದಲ್ಲಿರುವ ಅನುಭವ ಮಂಟಪದ ಯಥಾವತ್ ಕಿರು ಪುಷ್ಪ ಪ್ರತಿರೂಪವಾಗಿದ್ದು, 34 ಅಡಿ ಅಗಲ ಮತ್ತು 30 ಅಡಿ ಎತ್ತರವಿದೆ. ಇದಕ್ಕೆ 4.8 ಲಕ್ಷ ಹೂವುಗಳನ್ನು ಬಳಸಲಾಗಿದ್ದು, ಪ್ರದರ್ಶನದ ಅವಧಿಯಲ್ಲಿ ಎರಡು ಬಾರಿಗೆ 9.6 ಲಕ್ಷ ಹೂವುಗಳನ್ನು ಅಳವಡಿಸಲಾಗುತ್ತದೆ. 

ಬಸವಣ್ಣ ಪ್ರತಿಮೆ ನಿರ್ಮಾಣ: ಅನುಭವ ಮಂಟಪದ ಪುಷ್ಪ ಮಾದರಿಯ ಮುಂದೆ ಬಸವಣ್ಣ ಅವರ 10 ಅಡಿ ಎತ್ತರದ ಪ್ರತಿಮೆ ಇದ್ದು, ಬಸವಣ್ಣ ಅವರು ವಚನ ರಚಿಸುವ ಭಂಗಿಯಲ್ಲಿ ಕುಳಿತುಕೊಂಡಿದ್ದಾರೆ. ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಗೆ ವಚನಾನುಭವ ಗೋಷ್ಠಿಯನ್ನು ನೆನಪಿಸುವಂತಹ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಅನುಭವ ಮಂಟಪದ ಹಿಂಬದಿಗೆ ಬಸವಣ್ಣ ಅವರ ಬದುಕಿನ ವಿವಿಧ ಹಂತಗಳನ್ನು ಪ್ರತಿಬಿಂಬಿಸುವ 5 ಕಲಾಕೃತಿಗಳನ್ನು ವಿಶೇಷ ಹೂ–ಗಿಡಗಳ ಜೋಡಣೆಯ ನಡುವೆ ಪ್ರದರ್ಶಿಸಲಾಗಿದೆ. ಕೇಂದ್ರಭಾಗದಲ್ಲಿ ಕೂಡಲಸಂಗಮದಲ್ಲಿರುವ ಬಸವಣ್ಣ ಅವರ ಐಕ್ಯ ಮಂಟಪದ ಪುಷ್ಪ ಮಾದರಿ ನಿರ್ಮಿಸಲಾಗಿದೆ. 

ಗಾಜಿನ ಮನೆಯ ಒಳಾಂಗಣದ ಹಿಂಬದಿಯ ಆವರಣದಲ್ಲಿ ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಬಾಚಿಕಾಯಕದ ಬಸವಣ್ಣ ಮತ್ತು ಶರಣೆ ಸತ್ಯಕ್ಕನವರ ಪ್ರತಿಮೆಗಳನ್ನು ಪೀಠದ ಮೇಲಿರಿಸಿ, ಪೀಠವನ್ನು ಹೂಗಳಿಂದ ಅಲಂಕರಿಸಲಾಗಿದೆ. ಗಾಜಿನ ಮನೆಯ ಕೇಂದ್ರ ಭಾಗದ ಎಡಬದಿಗೆ ವರ್ಟಿಕಲ್ ಗಾರ್ಡನ್ ಮತ್ತು ಇಷ್ಟಲಿಂಗ ಪರಿಕಲ್ಪನೆಯ ಕಲಾಕೃತಿ ಪ್ರದರ್ಶಿಸಲಾಗಿದೆ.

ಶಿವಶರಣರ ಮಾದರಿಗಳನ್ನು ಜನರು ಕಣ್ತುಂಬಿಕೊಂಡರು
ಶಿವಶರಣರ ಮಾದರಿಗಳನ್ನು ಜನರು ಕಣ್ತುಂಬಿಕೊಂಡರು
ಪ್ರದರ್ಶನದಲ್ಲಿ ಇರಿಸಲಾಗಿರುವ ಬಸವಣ್ಣ ಅವರ ಪುತ್ಥಳಿ
ಪ್ರದರ್ಶನದಲ್ಲಿ ಇರಿಸಲಾಗಿರುವ ಬಸವಣ್ಣ ಅವರ ಪುತ್ಥಳಿ
ಫಲಪುಷ್ಪ ಪ್ರದರ್ಶನದಲ್ಲಿ ಮಕ್ಕಳು ಶಿವಲಿಂಗವನ್ನು ಕುತೂಹಲದಿಂದ ವೀಕ್ಷಿಸಿದರು
ಫಲಪುಷ್ಪ ಪ್ರದರ್ಶನದಲ್ಲಿ ಮಕ್ಕಳು ಶಿವಲಿಂಗವನ್ನು ಕುತೂಹಲದಿಂದ ವೀಕ್ಷಿಸಿದರು
ಸಮಾಜದಲ್ಲಿ ಬದಲಾವಣೆ ಹಾಗೂ ಸಮಾನತೆ ತರಲು ಬಸವಾದಿ ಶರಣರು ಹೋರಾಟ ಮಾಡಿದರು. ಆ ಹೋರಾಟವನ್ನು ಜನರಿಗೆ ಪರಿಚಯಿಸಲು ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
-ಸಿದ್ದರಾಮಯ್ಯ ಮುಖ್ಯಮಂತ್ರಿ

ವಿವಿಧೆಡೆ ಪಾರ್ಕಿಂಗ್ ವ್ಯವಸ್ಥೆ

ಕಾರುಗಳು ಸೇರಿ ನಾಲ್ಕು ಚಕ್ರಗಳ ವಾಹನಗಳಿಗೆ ಶಾಂತಿನಗರ ಬಸ್‌ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ ಜೋಡಿ ರಸ್ತೆಯ ಬಳಿಯ ಹಾಪ್‌ಕಾಮ್ಸ್ ಆವರಣ ಹಾಗೂ ಜೆ.ಸಿ. ರಸ್ತೆಯಲ್ಲಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಲಾಲ್‌ಬಾಗ್ ಮುಖ್ಯದ್ವಾರದ ಬಳಿ ಇರುವ ಅಲ್ ಅಮೀನ್ ಕಾಲೇಜು ಆವರಣದಲ್ಲಿ ಅವಕಾಶ ನೀಡಲಾಗಿದೆ. ಲಾಲ್‌ಬಾಗ್ ಪಶ್ಚಿಮ ದ್ವಾರಕ್ಕೆ ಹೊಂದಿಕೊಂಡು ಮೆಟ್ರೊ ನಿಲ್ದಾಣವಿದ್ದು ಲಾಲ್‌ಬಾಗ್ ಸುತ್ತಮುತ್ತ ವಾಹನ ಪಾರ್ಕಿಂಗ್‌ಗೆ ಸೂಕ್ತ ಸ್ಥಳಾವಕಾಶ ಇಲ್ಲದಿರುವುದರಿಂದ ಸಾಧ್ಯವಾದಷ್ಟು ಮೆಟ್ರೊ ರೈಲುಗಳನ್ನು ಬಳಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರವೇ* ಶ ಶುಲ್ಕ: 

* ವಯಸ್ಕರಿಗೆ; ₹ 80 ಮಕ್ಕಳಿಗೆ (12 ವರ್ಷದೊಳಗೆ); ₹30

* ರಜಾ ದಿನಗಳಲ್ಲಿ; ₹100

* ಸಮವಸ್ತ್ರ ಧರಿಸಿದ 10ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ

* ಪ್ರದರ್ಶನದ ಸಮಯ ಬೆಳಿಗ್ಗೆ 6ರಿಂದ ಸಂಜೆ 6.30

ಟಿಕೆಟ್‌ ಎಲ್ಲಿ ಲಭ್ಯ?

ಲಾಲ್‌ಬಾಗ್‌ನ ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಟಿಕೆಟ್ ದೊರೆಯಲಿದೆ. ತೋಟಗಾರಿಕೆ ಇಲಾಖೆಯ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿಯೂ ಟಿಕೆಟ್ ಪಡೆಯುವ ಅವಕಾಶ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT