ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಬಿ.ಪಾಟೀಲರ ಕೊಡುಗೆ ಶೂನ್ಯ- ಆರ್. ಆಂಜನೇಯ ರೆಡ್ಡಿ

ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಅಸಮಾಧಾನ
Published 28 ಏಪ್ರಿಲ್ 2024, 19:39 IST
Last Updated 28 ಏಪ್ರಿಲ್ 2024, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಕೃಷ್ಣಾ ನದಿ ನೀರಿನ ಬಗ್ಗೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ. 2013ರಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಅವರು ರಾಜ್ಯದ ನೀರಾವರಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ ಮತ್ತು ನೀರಾವರಿ ಪ್ರದೇಶದ ವಿಸ್ತರಣೆ ನಗಣ್ಯ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿಟ್ಟಿರುವ ಕೃಷ್ಣಾ ನದಿ ನೀರಿನ ಬೇಡಿಕೆಗೆ ಪ್ರತಿಕ್ರಿಯಿಸಿರುವ ಎಂ.ಬಿ. ಪಾಟೀಲ, ‘ಕೃಷ್ಣಾ ನದಿಯಿಂದ ಒಂದು ಹನಿ ನೀರನ್ನೂ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ’ ಎಂಬ ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ. ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ಅವರು ಕೇವಲ ವಿಜಯಪುರ ಜಿಲ್ಲೆಗೆ ಸಿಮೀತರಾಗಿದ್ದರು. ಹಲವು ದಶಕಗಳಿಂದಲೂ ನೀರಾವರಿ ವಂಚಿತ ಬಯಲುಸೀಮೆಯ ನೀರಿನ ಬವಣೆಗೆ ಅವರೆಂದೂ ತಲೆಕೆಡಿಸಿಕೊಂಡವರಲ್ಲ’ ಎಂದು ಹೇಳಿದ್ದಾರೆ.

‘ಐದು ವರ್ಷಗಳ ಅವಧಿಯಲ್ಲಿ ಪಾಟೀಲರು ಬೊಗಸೆ ನೀರು ಹರಿಯುವ ಖಾತ್ರಿ ಇಲ್ಲದಿದ್ದರೂ ಎತ್ತಿನಹೊಳೆ ಯೋಜನೆಗೆ ದಲ್ಲಾಳಿಗಳ ಜತೆಗೆ ಶಾಮೀಲಾಗಿ, ಸಾವಿರಾರು ಕೋಟಿ ರೂಪಾಯಿಯಲ್ಲಿ ಕೊಳವೆ ಹಾಕಿಸುವುದರಲ್ಲಿ ತಲ್ಲೀನರಾಗಿದ್ದರು. 12 ವರ್ಷ ಕಳೆದರೂ ಒಂದು ಹನಿ ನೀರು ಸಹ ಹರಿಯದಿರುವ ಎತ್ತಿನಹೊಳೆಯ ಬಗ್ಗೆ ಅವರಿಗೆ ಯಾವುದೇ ಪಶ್ಚತ್ತಾಪವಿಲ್ಲ. ಅಖಂಡ ಕರ್ನಾಟಕದ ಸಮಗ್ರತೆಯನ್ನು ಮರೆತರೆ ರಾಜಕಾರಣಿಗಳಿಗೆ ಪಾಠ ಕಲಿಸಬೇಕಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT