ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ದೃಶ್ಯ ಪರಿಶೀಲನೆ:ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ತಳ್ಳುಗಾಡಿ ವ್ಯಾಪಾರಿ ಸೆರೆ

Last Updated 3 ಡಿಸೆಂಬರ್ 2022, 1:34 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಮಂಜುನಾಥ್ ಅಲಿಯಾಸ್ ಮೂರ್ತಿ ಎಂಬುವವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಮಂಜುನಾಥ್ ತಳ್ಳುಗಾಡಿ ವ್ಯಾಪಾರಿ. ನಗರದಲ್ಲಿ ವ್ಯಾಪಾರಕ್ಕಾಗಿ ಸುತ್ತಾಡುತ್ತಿದ್ದ ಈತ, ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದ. ಈತನನ್ನು ಬಂಧಿಸಿ ₹ 6.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಮಂಜುನಾಥ್, ಅಪರಾಧ ಹಿನ್ನೆಲೆಯುಳ್ಳವ. ಅಪರಾಧ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ತಳ್ಳುಗಾಡಿಯಲ್ಲಿ ಮುಸುಕಿನ ಜೋಳ ಮಾರಲಾರಂಭಿಸಿದ್ದ. ಬೀಗ ಹಾಕಿರುತ್ತಿದ್ದ, ಅಂಗಳದಲ್ಲಿ ಕಸ ಬಿದ್ದಿರುತ್ತಿದ್ದ, ರಂಗೋಲಿ ಹಾಕಿರದ ಮನೆಗಳನ್ನು ಆರೋಪಿ ಗುರುತಿಸುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದುಕೊಂಡು, ಬಾಗಿಲು ಮೀಟಿ ಒಳನುಗ್ಗಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ.’

‘ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ತನಿಖೆ ಕೈಗೊಂಡು, 50 ಸಿಸಿಟಿವಿ ಕ್ಯಾಮೆರಾಗಳ ದೃಶ್ಯ ಪರಿಶೀಲಿಸಲಾಗಿತ್ತು. ಆರೋಪಿಯ ನಡಿಗೆ ಶೈಲಿ ಹಾಗೂ ಮುಖಚಹರೆ ಪತ್ತೆ ಮಾಡಲಾಗಿತ್ತು. ಶ್ರೀರಾಮಪುರದಲ್ಲಿ ತಳ್ಳುಗಾಡಿಯಲ್ಲಿ ವ್ಯಾಪಾರಕ್ಕೆ ಹೊರಟಿದ್ದ ವೇಳೆಯಲ್ಲೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.

‘ಕದ್ದ ಚಿನ್ನಾಭರಣವನ್ನು ಅಡವಿಡುತ್ತಿದ್ದ ಆರೋಪಿ, ಹಣ ಪಡೆಯುತ್ತಿದ್ದ. ಕೆಲ ಚಿನ್ನಾಭರಣವನ್ನು ಮಾರುತ್ತಿದ್ದ. ಬಂದ ಹಣವನ್ನು ದುಶ್ಚಟ ಹಾಗೂ ಕುಟುಂಬ ನಿರ್ವಹಣೆಗೆ ಬಳಸುತ್ತಿದ್ದ. 10ಕ್ಕೂ ಹೆಚ್ಚು ಕಡೆ ಆರೋಪಿ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT