ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ: ಕಿರಿಯ ಲೆಕ್ಕಾಧಿಕಾರಿ ಮಧ್ಯಸ್ಥಿಕೆಯಲ್ಲಿ ವ್ಯವಹಾರ?

* ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣ * ಎಸ್‌ಐಟಿ ಅಧಿಕಾರಿಗಳಿಂದ ಹಲವರ ವಿಚಾರಣೆ
Published 2 ಜೂನ್ 2024, 15:48 IST
Last Updated 2 ಜೂನ್ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ₹89.62 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣದಲ್ಲಿ, ನಿಗಮದ ‘ಕಿರಿಯ ಲೆಕ್ಕ ಅಧಿಕಾರಿ’ ಎನ್ನಲಾದ ಶಿವಕುಮಾರ್ ಎಂಬವರ ಮೂಲಕ ಬ್ಯಾಂಕ್ ವ್ಯವಹಾರ ನಡೆದಿರುವ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜಿ. ಪದ್ಮನಾಭ ಮತ್ತು ಲೆಕ್ಕಾಧಿಕಾರಿಯಾಗಿದ್ದ ಪರಶುರಾಮ್ ಜಿ. ದುರುಗಣ್ಣವರ ಅವರನ್ನು ಎಸ್‌ಐಟಿ ಅಧಿಕಾರಿಗಳು ಈಗಾಗಲೇ ಬಂಧಿಸಿ, ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

‘ಬಂಧಿತ ಪದ್ಮನಾಭ ಹಾಗೂ ಪರುಶುರಾಮ್ ಅವರು ಅಕ್ರಮ ವರ್ಗಾವಣೆಗೂ ತಮಗೂ ಸಂಬಂಧ ಇಲ್ಲವೆಂದು ವಾದಿಸುತ್ತಿದ್ದಾರೆ. ಲಭ್ಯ ಪ್ರಾಥಮಿಕ ದಾಖಲೆಗಳನ್ನು ಪರಿಶೀಲಿಸಿದಾಗ, ಬ್ಯಾಂಕ್ ವಹಿವಾಟಿನ ಪ್ರತಿಯೊಂದು ದಾಖಲೆಗಳಲ್ಲಿ ಇಬ್ಬರ ಸಹಿ ಹಾಗೂ ಮೊಹರು ಇರುವುದು ಕಂಡುಬಂದಿದೆ. ಈ ದಾಖಲೆಗಳನ್ನು ಆಧರಿಸಿ ಇಬ್ಬರನ್ನೂ ಬಂಧಿಸಲಾಗಿದೆ. ದಾಖಲೆಗಳು ಅಸಲಿಯೋ ಅಥವಾ ನಕಲಿಯೋ ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ’ ಎಂದು ಮೂಲಗಳು ಹೇಳಿವೆ.

‘ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಜಿ. ರಸ್ತೆಯ ಶಾಖೆಯಲ್ಲಿರುವ  ನಿಗಮದ ಖಾತೆಗೆ ಸಂಬಂಧಪಟ್ಟಂತೆ ಚೆಕ್‌ ಸ್ವೀಕರಿಸಲು, ಠೇವಣಿ ರಶೀದಿ ಪಡೆಯಲು, ಒವರ್‌ ಡ್ರಾಫ್ಟ್‌ ದಾಖಲೆ ಹಾಗೂ ಇತರೆ ದಾಖಲೆಗಳ ಪಡೆಯಲು ಕಿರಿಯ ಲೆಕ್ಕ ಅಧಿಕಾರಿ ಶಿವಕುಮಾರ್ (ಉದ್ಯೋಗಿ ಸಂಖ್ಯೆ–18163) ಅವರಿಗೆ ಅಧಿಕಾರ ನೀಡಲಾಗಿದೆ’ ಎಂಬುದಾಗಿ ಪದ್ಮನಾಭ ಅವರು ಮೇ 4ರಂದು ಬ್ಯಾಂಕ್‌ಗೆ ಪತ್ರ ಬರೆದಿದ್ದರು. ಈ ಪತ್ರ ಆಧರಿಸಿ ತನಿಖೆ ನಡೆದಿದೆ. ಶಿವಕುಮಾರ್ ಯಾರು ಎಂಬುದನ್ನು ಪತ್ತೆ ಮಾಡಲಾಗಿದೆ. ಆತನನ್ನು ವಿಚಾರಣೆ ನಡೆಸಿದರೆ, ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ತಿಳಿಸಿವೆ.

‘ಶಿವಕುಮಾರ್ ಮೂಲಕವೇ ಚೆಕ್, ಇತರೆ ದಾಖಲೆಗಳ ವಿನಿಮಯ ಆಗಿರುವ ಅನುಮಾನವಿದೆ. ಆದರೆ, ಇದು ಆರ್ಥಿಕ ವ್ಯವಹಾರಕ್ಕೆ ಸಂಬಂಧಪಟ್ಟ ಅಪರಾಧ. ಆರೋಪಿ ಯಾರು? ಹಣ ದುರ್ಬಳಕೆ ಮಾಡಿಕೊಂಡವರು ಯಾರು ಎಂಬುದನ್ನು ನಿಖರವಾಗಿ ಈಗಲೇ ಹೇಳಲು ಸಾಧ್ಯವಿಲ್ಲ. ಬ್ಯಾಂಕ್ ಅಧಿಕಾರಿಗಳಿಂದ ಸೂಕ್ತ ದಾಖಲೆಗಳನ್ನು ಕಲೆಹಾಕಿದ ನಂತರವೇ ಸ್ಪಷ್ಟ ಮಾಹಿತಿ ತಿಳಿಯಲಿದೆ’ ಎಂದು ಮೂಲಗಳು ಹೇಳಿವೆ.

ಬ್ಯಾಂಕ್ ಸಿಬ್ಬಂದಿ ವಿಚಾರಣೆ: ‘ಬ್ಯಾಂಕ್ ಸಿಬ್ಬಂದಿ ಮೂಲಕವೇ ಹಣ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿದೆ. ಬ್ಯಾಂಕ್ ಸಿಬ್ಬಂದಿಯ ವಿಚಾರಣೆ ಅಗತ್ಯವಿದೆ. ಕೆಲ ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

‘ಕಾನೂನಿನ ವ್ಯಾಪ್ತಿಯಲ್ಲಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಿಕೊಂಡು, ವಾಪಸು ಕಳುಹಿಸಲಾಗುತ್ತಿದೆ. ಸೂಕ್ತ ದಾಖಲೆ ಲಭ್ಯವಾಗುತ್ತಿದ್ದಂತೆ, ಮತ್ತೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು‘ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT