ಬುಧವಾರ, ನವೆಂಬರ್ 13, 2019
22 °C
ಮನೆಯಂಗಳದಲ್ಲಿ ಮಾತುಕತೆ

‘ವೈಜ್ಞಾನಿಕ ಅಧ್ಯಯನ ಅಗತ್ಯ’ : ಇತಿಹಾಸ ತಜ್ಞ ಸುರೇಶ್ ಮೂನ ಅಭಿಮತ

Published:
Updated:
Prajavani

ಬೆಂಗಳೂರು: ‘ವಿಜ್ಞಾನ ಹಾಗೂ ಇತಿಹಾಸ ಒಂದೇ ನಾಣ್ಯದ ಎರಡು ಮುಖಗಳಂತೆ. ಹಾಗಾಗಿ ಇತಿಹಾಸವನ್ನು ಸುಮ್ಮನೆ ಕೆದಕುವುದನ್ನು ಬಿಟ್ಟು, ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಕೆಲಸವಾಗಬೇಕು’ ಎಂದು ಇತಿಹಾಸ ತಜ್ಞ ಸುರೇಶ್ ಮೂನ ಅಭಿಪ್ರಾಯಪಟ್ಟರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿ ಮನದಾಳವನ್ನು ಹಂಚಿಕೊಂಡರು. ‘ಯಾವುದೇ ಘಟನೆಗಳಿಗೆ ನಿಖರವಾದ ಕಾರಣವನ್ನು ಪತ್ತೆ ಮಾಡಬೇಕು. ವೈಜ್ಞಾನಿಕ ಅಧ್ಯಯನ ಮಾಡಿದರೆ ಮಾತ್ರ ನಿಜವಾದ ವಿಷಯ ಗೊತ್ತಾಗುತ್ತದೆ. ಆಗ ಮುಂದಿನ ಪೀಳಿಗೆಗೂ ಇತಿಹಾಸದ ವಿಚಾರದಲ್ಲಿ ಗೊಂದಲ ಉಂಟಾಗುವುದಿಲ್ಲ’ ಎಂದರು. 

‘ಗೂಗಲ್‌ ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ. ಇದನ್ನೇ ನಂಬಿಕೊಂಡು ಸಂಶೋಧನೆ ನಡೆಸಲು ಸಾಧ್ಯವಿಲ್ಲ. ಗೂಗಲ್‌ನಿಂದ ಹೊರಬಂದು ಸಂಶೋಧನೆಗಳನ್ನು ಕೈಗೆತ್ತಿಕೊಳ್ಳಬೇಕು’ ಎಂದು ತಿಳಿಸಿದರು. 

‘ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ನಗರದ ವ್ಯಾಪ್ತಿಯನ್ನು ನಿರ್ಧರಿಸಲು ನಾಲ್ಕು ಕಡೆ ಗೋಪುರಗಳನ್ನು ನಿರ್ಮಿಸಿದರು ಎಂಬ ಸಾಮಾನ್ಯ ಅಭಿಪ್ರಾಯ ಇದೆ. ಈ ಗೋಪುರಗಳನ್ನು 2ನೇ ಕೆಂಪೇಗೌಡರು ನಿರ್ಮಿಸಿದ್ದರು ಎಂಬ ಅಂಶ ಎಲ್ಲರಿಗೂ ತಿಳಿದಿಲ್ಲ. ಜತೆಗೆ ಅವರು ಏಳಕ್ಕೂ ಅಧಿಕ ಗೋಪುರಗಳನ್ನು ನಿರ್ಮಾಣ ಮಾಡಿದ್ದಾರೆ ಎಂಬ ಸತ್ಯದ ಬಗ್ಗೆ ಸರಿಯಾದ ಸಂಶೋಧನೆ ನಡೆದಿಲ್ಲ’ ಎಂದರು.

‘ವೃಷಭಾವತಿಯೂ ಥೇಮ್ಸ್‌ನಂತಾಗಲಿ’
‘ಇತಿಹಾಸವು ನಮಗೆ ಪಾಠಗಳನ್ನು ಕಲಿಸುತ್ತದೆ. ಲಂಡನ್‍ನಲ್ಲಿ ಕೊಳಚೆಯಾಗಿದ್ದ ಥೇಮ್ಸ್ ನದಿ ಇದೀಗ ಪ್ರವಾಸೋದ್ಯಮ ಕೇಂದ್ರವಾಗಿದೆ. ಅದೇ ರೀತಿ ವೃಷಭಾವತಿ ನದಿಯನ್ನು ಪುನಶ್ಚೇತನಗೊಳಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ’ ಎಂದು ಸುರೇಶ್ ಮೂನ ಹೇಳಿದರು.

‘ವಿದೇಶಗಳಲ್ಲಿ ಜನರಿಗೆ ನನ್ನ ಊರು ಎಂಬ ಮನೋಭಾವವಿರುತ್ತದೆ. ಈ ಮನೋಭಾವ ಬೆಂಗಳೂರಿನ ಜನರಲ್ಲೂ ಬಂದರೆ ಕಸ, ಪರಿಸರ ಮಾಲಿನ್ಯ ಮೊದಲಾದ ಸಮಸ್ಯೆಗಳು ಪರಿಹಾರವಾಗುತ್ತವೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)