ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಶಿಕ್ಷಕರಿಗೆ 6ನೇ ಗ್ಯಾರಂಟಿ ನೀಡಲಿ: ಸಂಗೀತ ನಿರ್ದೇಶಕ ಹಂಸಲೇಖ

ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಅತಿಥಿ ಶಿಕ್ಷಕರ ಸಮಾವೇಶದಲ್ಲಿ ಹಂಸಲೇಖ
Published 17 ಮಾರ್ಚ್ 2024, 15:48 IST
Last Updated 17 ಮಾರ್ಚ್ 2024, 15:48 IST
ಅಕ್ಷರ ಗಾತ್ರ

ಬೆಂಗಳೂರು: ಅತಿಥಿ ಶಿಕ್ಷಕರ ಬವಣೆ ನೀಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳುವ ಮೂಲಕ 6ನೇ ಗ್ಯಾರಂಟಿಯನ್ನು ನೀಡಬೇಕು ಎಂದು ಸಂಗೀತ ನಿರ್ದೇಶಕ ಹಂಸಲೇಖ ಆಗ್ರಹಿಸಿದರು.

ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ನೀಡಬೇಕು ಎಂದು ತಾಯಿ ಜ್ಯೋತಿಬಾಯಿ ಫುಲೆ ಹೊರಟಾಗ ಕಲ್ಲು, ಸಗಣಿ ಬಿಸಾಡಿದ ಸಮಾಜ ನಮ್ಮದು. ಇಂಥ ಸಮಾಜದಲ್ಲಿ ಇಷ್ಟೊಂದು ಶಿಕ್ಷಕರು ಈಗ ಹುಟ್ಟಿದ್ದಾರೆ ಎಂದರೆ ನಾವು ಗೆದ್ದಿದ್ದೇವೆ ಎಂದರ್ಥ. ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರ ಸಂಕಷ್ಟಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಕರಡಿಗುಡ್ಡ ಹಕ್ಕೊತ್ತಾಯಗಳನ್ನು ಮಂಡಿಸಿದರು. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಮೆರಿಟ್‌ ಪದ್ಧತಿ ಕೈಬಿಡಬೇಕು. ಮೊದಲು ಸೇವೆ ಮಾಡಿದವರಿಗೆ ಆದ್ಯತೆ ನೀಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಅನ್ವಯವಾಗಬೇಕು. ಅತಿಥಿ ಶಿಕ್ಷಕರಿಗೆ ತಿಂಗಳಿಗೆ ಕನಿಷ್ಠ ₹25 ಸಾವಿರ ವೇತನ ನೀಡಬೇಕು. ನೇಮಕಾತಿಯಲ್ಲಿ ಶೇ 5 ಕೃಪಾಂಕ ಕೊಡಬೇಕು. ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಿ ಶಿಕ್ಷಕರಿಗೆ ನೀಡುವಂತೆ ಬೇಸಿಗೆಯ ರಜೆ ಸೇರಿ 12 ತಿಂಗಳೂ ವೇತನ ನೀಡಬೆಕು. ದೆಹಲಿ, ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ ಸರ್ಕಾರಗಳು ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಿದಂತೆ ಕರ್ನಾಟಕ ಸರ್ಕಾರವೂ ಕಾಯಂಗೊಳಿಸಬೇಕು. ಸೇವಾ ಪ್ರಮಾಣಪತ್ರ ನೀಡಬೇಕು. ವೇತನವು ನೇರವಾಗಿ ಅತಿಥಿ ಶಿಕ್ಷಕರ ಖಾತೆಗೆ ಪಾವತಿಯಾಗಬೇಕು. ಸರ್ಕಾರಿ ಶಿಕ್ಷಕರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಅತಿಥಿ ಶಿಕ್ಷಕರಿಗೂ ನೀಡಬೇಕು. ಜೀವವಿಮೆ ಸೌಲಭ್ಯ ಒದಗಿಸಬೇಕು ಎಂದು ಬೇಡಿಕೆಗಳನ್ನು ಮುಂದಿಟ್ಟರು.

ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿ, ‘ಕೂಲಿಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ ಮಾಡಲಾಗುತ್ತದೆ. ಅಷ್ಟು ವೇತನ ಕೂಡ ಅತಿಥಿ ಶಿಕ್ಷಕರಿಗೆ ಇಲ್ಲದಿರುವುದು ನಾಚಿಗೇಡಿನ ಸಂಗತಿ. ಮಾತಿನಲ್ಲಿ ಸಮಸಮಾಜದ ಬಗ್ಗೆ ಮಾತನಾಡುವ, ಸಮಾಜವಾದಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಚ್ಛಾಶಕ್ತಿ ಇಲ್ಲ’ ಎಂದು ಟೀಕಿಸಿದರು.

ಶಿಕ್ಷಕರ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.

ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾರಾ ಪ್ರತಾಪ್‌ ರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಬಿಡಿಎ ಸದಸ್ಯ ಪುಟ್ಟಸ್ವಾಮಿ ಗೌಡ, ವಿದ್ಯಾರ್ಥಿ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ತೋಳು ಭರಮಣ್ಣ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ರುದ್ರಪುನೀತ್‌, ಶಿಕ್ಷಣ ಉಳಿಸಿ ಸಮಿತಿ ಸಂಚಾಲಕಿ ಐಶ್ವರ್ಯ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತ ಎಚ್‌.ಎಸ್‌., ಗೌರವಾಧ್ಯಕ್ಷ ಅನಂತನಾಯ್ಕ್‌ ಎನ್‌., ಉಪಾಧ್ಯಕ್ಷೆ ಚಿತ್ರಲೇಖಾ, ಸಂಘಟನಾ ಕಾರ್ಯದರ್ಶಿ ಲೋಲಾಕ್ಷಿ, ಕೋಶಾಧಿಕಾರಿ ಸೌಮ್ಯಾ ಎಚ್‌.ಎಸ್‌. ಉಪಸ್ಥಿತರಿದ್ದರು.

ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಶಿಕ್ಷಕರು –ಪ್ರಜಾವಾಣಿ ಚಿತ್ರ
ಅತಿಥಿ ಶಿಕ್ಷಕರ ವಾರ್ಷಿಕ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಶಿಕ್ಷಕರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT