ಸೋಮವಾರ, ಮಾರ್ಚ್ 27, 2023
32 °C
41 ಎಂಬಿಬಿಎಸ್ ವಿದ್ಯಾರ್ಥಿಗಳು ಸಲ್ಲಿಸಿದ ರಿಟ್ ಅರ್ಜಿ ಸಂಬಂಧ ಆದೇಶ

ಹೊಸದಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಿ: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್‌ಜಿಯುಎಚ್‌ಎಸ್) ವಿವಿಧ ಸಂಯೋಜಿತ ಕಾಲೇಜುಗಳ ಎಂಬಿಬಿಎಸ್ ಪದವಿಯ ಅಂತಿಮ ವರ್ಷದ 41 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಕ್ಲಿನಿಕಲ್ ಪರೀಕ್ಷೆಯಲ್ಲಿ ನೀಡಲಾಗಿದ್ದ ಅಂಕಗಳನ್ನುರದ್ದುಪಡಿಸಿರುವ ಹೈಕೋರ್ಟ್‌, ಅರ್ಜಿದಾರ ವಿದ್ಯಾರ್ಥಿಗಳಿಗೆ ಮೂರು ವಾರದೊಳಗೆ ಹೊಸದಾಗಿ ಪ್ರಾಯೋಗಿಕ ಪರೀಕ್ಷೆ ನಡೆಸುವಂತೆ ಆದೇಶಿಸಿದೆ.

‘ಆರ್‌ಜಿಯುಎಚ್‌ಎಸ್ ನಡೆಸಿರುವ ಪ್ರಾಯೋಗಿಕ ಪರೀಕ್ಷೆಯು ವಿಶ್ವವಿದ್ಯಾಲಯದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ’ ಎಂದು ಆಕ್ಷೇಪಿಸಿ ಜಿಮ್ಸ್‌ನ (ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ) ವಿದ್ಯಾರ್ಥಿ ಬಸವರಾಜ ಇಟಗಿ ಸೇರಿದಂತೆ ವಿವಿಧ ವೈದ್ಯಕೀಯ ಕಾಲೇಜುಗಳ ಒಟ್ಟು 41 ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ಐ.ಅರುಣ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರಾದ ಪ್ರತೀಕ್‌ ಚಂದ್ರಮೌಳಿ ಹಾಗೂ ಕೆ.ಎಸ್.ವಿದ್ಯಾಶ್ರೀ, ‘ಪ್ರಾಯೋಗಿಕ ಪರೀಕ್ಷೆಗಳನ್ನು ನಿಯಮಮಾನುಸಾರ ನಡೆಸದೇ ಇರುವ ಕಾರಣ ಅರ್ಜಿದಾರ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಆದ್ದರಿಂದ, ಪ್ರಾಯೋಗಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗಿರುವ ಅಂಕಗಳನ್ನು ರದ್ದುಪಡಿಸಬೇಕು’ ಎಂದು ಕೋರಿದ್ದರು.

ಪ್ರತಿಯಾಗಿ ಆರ್‌ಜಿಯುಎಚ್‌ಎಸ್ ಪರ ವಕೀಲರು, ‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸದಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು’ ಎಂದು ನ್ಯಾಯಪೀಠಕ್ಕೆ ಮುಚ್ಚಳಿಕೆ ನೀಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿದಾರ ವಿದ್ಯಾರ್ಥಿಗಳು ಕೋರಿರುವ ವಿಷಯಗಳಿಗೆ ಹೊಸ ಪರೀಕ್ಷೆ ನಡೆಸುವಂತೆ ನಿರ್ದೇಶಿಸಿದೆ.

ಪ್ರಕರಣವೇನು?: ಅರ್ಜಿದಾರ ವಿದ್ಯಾರ್ಥಿಗಳಿಗೆ 2022ರ ಫೆಬ್ರುವರಿಯಲ್ಲಿ ಶಸ್ತ್ರಚಿಕಿತ್ಸೆ, ಸ್ತ್ರೀರೋಗ ಶಾಸ್ತ್ರ ಹಾಗೂ ಪ್ರಸೂತಿ, ಮಕ್ಕಳ ವೈದ್ಯಕೀಯ ಮತ್ತು ಜನರಲ್ ಮೆಡಿಸಿನ್ ವಿಷಯಗಳಿಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಆದರೆ, ಅವುಗಳಲ್ಲಿ ಅನುತ್ತೀರ್ಣರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು