ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2025ರೊಳಗೆ ಮೆಟ್ರೊ ಗುಲಾಬಿ ಮಾರ್ಗ ಪೂರ್ಣ

‘ಭದ್ರಾ’ ಟಿಬಿಎಂ ಕಾರ್ಯಾಚರಣೆ ಮುಗಿಸಿದ ಪ್ರಕ್ರಿಯೆ ವೀಕ್ಷಿಸಿದ ಡಿ.ಕೆ. ಶಿವಕುಮಾರ್
Published 8 ಫೆಬ್ರುವರಿ 2024, 18:31 IST
Last Updated 8 ಫೆಬ್ರುವರಿ 2024, 18:31 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ ಗುಲಾಬಿ ಮಾರ್ಗದಲ್ಲಿ 2025ರೊಳಗೆ ಸಂಚಾರ ಆರಂಭಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸುರಂಗ ಕೊರೆಯುವ ಮಷಿನ್‌ (ಟಿಬಿಎಂ) ‘ಭದ್ರಾ’ ಕಾರ್ಯಾಚರಣೆ ಪೂರ್ಣಗೊಳಿಸಿ ಹೊರಬರುವ ಪ್ರಕ್ರಿಯೆಯನ್ನು ಕೆ.ಜಿ. ಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಗುರುವಾರ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಕಾಳೇನ ಅಗ್ರಹಾರದಿಂದ ನಾಗವಾರವರೆಗೆ 21.76 ಕಿ.ಮೀ.ನ ಈ ಮಾರ್ಗದಲ್ಲಿ 13.76 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದೆ. 9 ಸುರಂಗ ಮಾರ್ಗಗಳಲ್ಲಿ 8 ಪೂರ್ಣಗೊಂಡಿವೆ. ಇನ್ನೂ ಒಂದು ಸುರಂಗದಲ್ಲಿ ಕೊರೆಯುವ ಕಾರ್ಯ ನಡೆಯುತ್ತಿದ್ದು, ಮುಂದಿನ ತಿಂಗಳು ಅದೂ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಈ ಹಂತದ ಮೆಟ್ರೊ ಕಾಮಗಾರಿ ಜವಾಬ್ದಾರಿಯನ್ನು ಅಬ್‌ಕಾಮ್, ಎಲ್‌ ಆ್ಯಂಡ್‌ ಟಿ ಮತ್ತು ಐಟಿಡಿ ಸಂಸ್ಥೆಗಳು ಗುತ್ತಿಗೆ ತೆಗೆದುಕೊಂಡಿವೆ. ಪ್ರಸ್ತುತ ಐಟಿಡಿ ಸಂಸ್ಥೆ ಕಾಮಗಾರಿ ನಡೆಸುತ್ತಿರುವ ಭಾಗದಲ್ಲಿ ಸುರಂಗ ಕೊರೆಯುವ ಕೆಲಸವನ್ನು ವೀಕ್ಷಿಸಲಾಯಿತು ಎಂದು ವಿವರ ನೀಡಿದರು.

‘ನಮ್ಮ ಮೆಟ್ರೊ ಅಂತರರಾಷ್ಟ್ರೀಯ ಗುಣಮಟ್ಟ ಕಾಪಾಡಿಕೊಂಡಿದೆ. ದೆಹಲಿಗಿಂತ ಉತ್ತಮವಾದ ಕೆಲಸ ನಮ್ಮಲ್ಲಿ ನಡೆದಿದೆ. ಯಾವುದೇ ಹಂತದಲ್ಲೂ ಕೆಲಸದ ಗುಣಮಟ್ಟದಲ್ಲಿ ರಾಜಿಯಾಗಿಲ್ಲ’ ಎಂದರು.

ಟಿಬಿಎಂ: ‘ವರದ’, ‘ಅವನಿ’, ‘ಊರ್ಜ್ವಾ’, ‘ವಿಂಧ್ಯಾ’, ‘ಲವಿ’, ‘ವಮಿಕ’, ‘ರುದ್ರ’ ಟನಲ್‌ ಬೋರಿಂಗ್ ಮಷಿನ್‌ಗಳು ಇಲ್ಲಿವರೆಗೆ ಕಾರ್ಯಾಚರಣೆ ಪೂರ್ಣಗೊಳಿಸಿವೆ.  ವೆಂಕಟೇಶಪುರ–ಕಾಡುಗೊಂಡನಹಳ್ಳಿ (ಕೆ.ಜಿ. ಹಳ್ಳಿ) ಒಂದು ಸುರಂಗ ಮಾರ್ಗವನ್ನು ‘ತುಂಗಾ’ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸಿತ್ತು. ಇನ್ನೊಂದು ಸುರಂಗವನ್ನು ಇದೀಗ ಪೂರ್ಣಗೊಳಿಸಿ ‘ಭದ್ರಾ’ ಹೊರಬಂದಿದೆ. ಸೌತ್‌ ರ‍್ಯಾಂಪ್‌ ನಿಲ್ದಾಣದಿಂದ ಲ್ಯಾಂಗ್‌ಫೋರ್ಡ್‌ ಟೌನ್‌ ಸುರಂಗ ಮಾರ್ಗವು (2.16 ಕಿ.ಮೀ.) ಮುಂದಿನ ತಿಂಗಳು ಪೂರ್ಣಗೊಳ್ಳಲಿದೆ. ಸುರಂಗ ಕೊರೆಯುವ ಕಾರ್ಯ ಶೇ 91ರಷ್ಟು ಮುಗಿದಿದೆ. ಒಟ್ಟು ಕಾಮಗಾರಿ ಶೇ 75ರಷ್ಟು ಆಗಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆ.ಜಿ. ಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಸುರಂಗ ಕೊರೆಯುವ ಮಷಿನ್‌ (ಟಿಬಿಎಂ) ‘ಭದ್ರಾ’ ಕಾರ್ಯಾಚರಣೆ ಪೂರ್ಣಗೊಳಿಸುತ್ತಿರುವುದು –ಪ್ರಜಾವಾಣಿ ಚಿತ್ರ
ಕೆ.ಜಿ. ಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಸುರಂಗ ಕೊರೆಯುವ ಮಷಿನ್‌ (ಟಿಬಿಎಂ) ‘ಭದ್ರಾ’ ಕಾರ್ಯಾಚರಣೆ ಪೂರ್ಣಗೊಳಿಸುತ್ತಿರುವುದು –ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT