ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಮೊಬೈಲ್ ಮಳಿಗೆ ಮಾಲೀಕನ ಕೊಲೆಗೆ ಯತ್ನ

Published 18 ಮಾರ್ಚ್ 2024, 20:40 IST
Last Updated 18 ಮಾರ್ಚ್ 2024, 20:40 IST
ಅಕ್ಷರ ಗಾತ್ರ

ಬೆಂಗಳೂರು: ಧ್ವನಿವರ್ಧಕದ ಶಬ್ದ ಹೆಚ್ಚಿಸಿದರೆಂಬ ಕಾರಣಕ್ಕೆ ಮೊಬೈಲ್ ಮಳಿಗೆ ಮಾಲೀಕ ಮುಖೇಶ್ (26) ಎಂಬುವವರ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಲಾಗಿದ್ದು, ಕೃತ್ಯ ಎಸಗಿದ್ದ ಮೂವರು ಆರೋಪಿಗಳನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನಗರ್ತಪೇಟೆ ಸಿದ್ದಣ್ಣ ಗಲ್ಲಿಯ ಜುಮ್ಮಾ ಮಸೀದಿ ರಸ್ತೆಯಲ್ಲಿ ಭಾನುವಾರ (ಮಾರ್ಚ್ 17) ಸಂಜೆ ನಡೆದಿರುವ ಘಟನೆ ಸಂಬಂಧ ಮುಖೇಶ್ ಅವರು ದೂರು ನೀಡಿದ್ದಾರೆ. ಆರೋಪಿಗಳಾದ ಸುಲೇಮಾನ್, ಶಹನವಾಜ್, ರೋಹಿತ್, ಡ್ಯಾನಿಶ್, ತರುಣ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಳಿಗೆಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಘಟನೆ ದೃಶ್ಯಗಳು ಸೆರೆಯಾಗಿವೆ. ವಿಡಿಯೊ ಪರಿಶೀಲಿಸಿ, ಆರೋಪಿಗಳನ್ನು ಗುರುತಿಸಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿವೆ.

‘ಆರೋಪಿಗಳು, ಮಳಿಗೆಯ ಅಕ್ಕ–ಪಕ್ಕದ ಪ್ರದೇಶಗಳ ನಿವಾಸಿಗಳು. ಆಗಾಗ ಮಳಿಗೆ ಬಳಿ ಓಡಾಡುತ್ತಿದ್ದರು. ಆರೋಪಿಗಳ ಹಿನ್ನೆಲೆ ಹಾಗೂ ಯಾವುದಾದರೂ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

ಘಟನೆ ವಿವರ: ‘ಕಬ್ಬನ್‌ ಪೇಟೆಯ ನಿವಾಸಿ ಮುಖೇಶ್, ಜುಮ್ಮಾ ಮಸೀದಿ ರಸ್ತೆಯಲ್ಲಿ ಕೃಷ್ಣ ಟೆಲಿಕಾಂ ಮಳಿಗೆ ಇಟ್ಟುಕೊಂಡಿದ್ದಾರೆ. ಮೊಬೈಲ್ ಬಿಡಿ ಭಾಗ, ಧ್ವನಿವರ್ಧಕ ಹಾಗೂ ಇತರೆ ವಸ್ತುಗಳನ್ನು ಮಾರುತ್ತಿದ್ದಾರೆ. ದಿನವೂ ಧ್ವನಿವರ್ಧಕದಲ್ಲಿ ಭಕ್ತಿಗೀತೆ ಹಾಗೂ ಇತರೆ ಗೀತೆಗಳನ್ನು ಹಾಕುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಭಾನುವಾರವೂ ಧ್ವನಿವರ್ಧಕದಲ್ಲಿ ಗೀತೆಗಳನ್ನು ಹಾಕಿದ್ದರು. ಸಂಜೆ 6.25ರ ಸುಮಾರಿಗೆ ಮಳಿಗೆಗೆ ಬಂದಿದ್ದ ಆರೋಪಿಗಳು, ‘ಧ್ವನಿವರ್ಧಕದ ಶಬ್ದವನ್ನು ಏಕೆ ಹೆಚ್ಚು ಮಾಡಿದ್ದಿಯಾ, ನಮಗೆ ತೊಂದರೆಯಾಗುತ್ತಿದೆ’ ಎಂದು ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು. ಆರೋಪಿಯೊಬ್ಬ, ಮುಖೇಶ್ ಮೇಲೆ ಹಲ್ಲೆ ಮಾಡಿದ್ದ. ನಂತರ, ಎಲ್ಲ ಆರೋಪಿಗಳು ಸೇರಿ ಮುಖೇಶ್‌ ಅವರನ್ನು ಮಳಿಗೆಯಿಂದ ಹೊರಗೆ ಎಳೆದು ರಸ್ತೆಯಲ್ಲಿ ಥಳಿಸಿದ್ದರು.’

‘ಮುಖೇಶ್ ಅವರ ಮುಖ, ಹೊಟ್ಟೆ ಹಾಗೂ ದೇಹದ ಹಲವು ಭಾಗಗಳಿಗೆ ಪೆಟ್ಟಾಗಿತ್ತು. ರಕ್ತ ಸಹ ಬರುತ್ತಿತ್ತು. ಕೃತ್ಯ ಎಸಗಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಮುಖೇಶ್ ಅವರನ್ನು ರಕ್ಷಿಸಲು ಹೋಗಿದ್ದವರಿಗೂ ಆರೋಪಿಗಳು ಜೀವ ಬೆದರಿಕೆಯೊಡ್ಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಬಿಗಿ ಭದ್ರತೆ: ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಗರ್ತಪೇಟೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT