ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೆಣ್ಣಿನ ಸಂವೇದನೆಯ ಆತ್ಮಕಥನ’

ಬಿಐಸಿಯಲ್ಲಿ ಮೊಗಳ್ಳಿ ಗಣೇಶ್ ಅವರ ‘ನಾನೆಂಬುದು ಕಿಂಚಿತ್ತು‘ ಆತ್ಮಕಥೆ ಕುರಿತ ಸಂವಾದ
Published 17 ಮಾರ್ಚ್ 2024, 21:30 IST
Last Updated 17 ಮಾರ್ಚ್ 2024, 21:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮೊಗಳ್ಳಿ ಗಣೇಶ್ ಅವರ ಆತ್ಮಕಥನದಲ್ಲಿ ಹೆಣ್ಣಿನ ಸಂವೇದನೆಯನ್ನು ಕಾಣಬಹುದು’ ಎಂದು ವಿಮರ್ಶಕಿ ಎಂ.ಎಸ್‌. ಆಶಾದೇವಿ ಅಭಿಪ್ರಾಯ ವ್ಯಕ್ತಪಡಿಸಿದರು.

ದೊಮ್ಮಲೂರಿನಲ್ಲಿರುವ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ನಲ್ಲಿ (ಬಿಐಸಿ) ಭಾನುವಾರ ನಡೆದ ‘ಅನುಭವ ಕಥನ’ ಶೀರ್ಷಿಕೆಯಡಿ ಮೊಗಳ್ಳಿ ಗಣೇಶ್ ಅವರ ಆತ್ಮಕಥೆ ‘ನಾನೆಂಬುದು ಕಿಂಚಿತ್ತು’ ಕೃತಿ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚರಿತ್ರಕಾರರು ಆತ್ಮಕಥನಗಳನ್ನು ಅನಾತ್ಮಕಥನಗಳೆಂದು ಕರೆಯುತ್ತಾರೆ. ‌ಅದರಲ್ಲಿ ಆತ್ಮವಂಚನೆಯೇ ಹೆಚ್ಚಾಗಿ ಇರುತ್ತದೆ. ಆದರೆ, ಮೊಗಳ್ಳಿ ಅವರು ತಮ್ಮ ಜೀವನದಲ್ಲಿ ನಡೆದ ಪ್ರತಿಯೊಂದು ಘಟನೆಯನ್ನು ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ಈ ಕೃತಿ ಒಂದು ಕಾದಂಬರಿ ಓದುವ ಅನುಭವ ನೀಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ಪ್ರಾಧ್ಯಾಪಕ ಸುರೇಶ್ ನಾಗಲಮಡಿಕೆ, ‘ಮೊಗಳ್ಳಿ ಅವರ ನಾನೆಂಬುದು ಕಿಂಚಿತ್ತು ಕಥನವು ಅಂತರಂಗ ಹಾಗೂ ಅಂತಃಕರಣದ ಕಥನವಾಗಿದೆ. ಇದು ಹಲವು ಬಗೆಯ ಮನುಷ್ಯರ ಕಥನವಾಗಿದೆ. ಇದರಲ್ಲಿ ಬಳಸುವ ಭಾಷೆಗೆ ವಿಶಿಷ್ಟವಾದ ರೂಪಕ ಶಕ್ತಿ ನೀಡಿದ್ದಾರೆ. ಈ ಕೃತಿಯ ಕೊನೆಯವರೆಗೂ ತಾಯಿ ಕಾರುಣ್ಯದ ರೂಪಕವಾದರೆ, ಮತ್ತೊಂದು ತುದಿಯಲ್ಲಿ ತಂದೆ ಕ್ರೌರ್ಯದ ರೂಪಕವಾಗಿದ್ದಾರೆ. ತಾಯಿ ಜನಪದ, ಅಧ್ಯಾತ್ಮ ಜೀವಿಯಾಗಿ ಕಂಡರೆ, ತಂದೆ ಕೊನೆಯವರೆಗೂ ಕ್ರೂರಿಯಾಗಿ ಕಾಣುವ ಬಗೆ ನಮಗೆ ಬೇರೆ ಬೇರೆ ಆಲೋಚನೆ ತಂದು ಕೊಡುತ್ತದೆ’ ಎಂದರು. 

ಕಥೆಗಾರ ಮೊಗಳ್ಳಿ ಗಣೇಶ್, ‘ನನ್ನ ಬರಹವೇ ನನ್ನ ಸೃಜನಶೀಲತೆ ಆಗಿದೆ. ನನ್ನ ಆತ್ಮಕಥನದಲ್ಲಿ ನಾನು ನೆಪ ಮಾತ್ರ. ಅದರಲ್ಲಿ ನನ್ನ ತಾಯಿಯ ರುಜವಾತು ಹೆಚ್ಚು ಇದ್ದು, ಅವರ ಸಂವೇದನೆ ನನ್ನ ಮೂಲಕ ರೂಪುಗೊಂಡಿದೆ. ಬಸವಣ್ಣ, ಗಾಂಧೀಜಿ ಮತ್ತು ಅಂಬೇಡ್ಕರ್‌ ಅವರ ಚಳವಳಿಗಳಲ್ಲಿ ಅವರ ತಾಯಿಯಂದಿರ ಸಂವೇದನೆಯನ್ನು ನಾವು ಕಾಣಬಹುದು’ ಎಂದರು.

ಸಂವಾದದಲ್ಲಿ ವಿಮರ್ಶಕ ಎನ್‌. ಮನು ಚಕ್ರವರ್ತಿ, ಚಂದನಗೌಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT