ವಿಳಾಸ ಕೇಳಿದವನನ್ನು ಕೊಂದು ಸುಟ್ಟುಬಿಟ್ಟರು!

7
22ರ ಹುಡುಗನ ಮೇಲೆ 14 ಮಂದಿ ದಾಳಿ l ಹೊಸಕೋಟೆ ಪೊಲೀಸರಿಂದ ಇಬ್ಬರ ಬಂಧನ‌

ವಿಳಾಸ ಕೇಳಿದವನನ್ನು ಕೊಂದು ಸುಟ್ಟುಬಿಟ್ಟರು!

Published:
Updated:
Deccan Herald

ಬೆಂಗಳೂರು: ಆಗಷ್ಟೇ ಪದವಿ ಮುಗಿಸಿ ನಗರಕ್ಕೆ ಬಂದಿದ್ದ ಆ ಯುವಕ, ಹೊಸ ಕೆಲಸ ಸಿಕ್ಕ ಖುಷಿಯಲ್ಲಿದ್ದ. ಸಹೋದ್ಯೋಗಿಯನ್ನು ಮನೆಗೆ ಡ್ರಾಪ್ ಮಾಡಿ ಬರುವಾಗ ದಾರಿ ತಪ್ಪಿ, ರಸ್ತೆಯಲ್ಲಿ ಸಿಕ್ಕ ರೌಡಿಯೊಬ್ಬನ ಬಳಿ ವಿಳಾಸ ಕೇಳಿದ. ಕುಡಿದ ಮತ್ತಿನಲ್ಲಿದ್ದ ಆ ರೌಡಿ ಹಾಗೂ ಆತನ 13 ಸಹಚರರು, ಎದುರಾಳಿ ಗ್ಯಾಂಗ್‌ನವನು ಎಂದುಕೊಂಡು ಆ ಯುವಕನನ್ನು ಅಪಹರಿಸಿ ಕೊಂದೇಬಿಟ್ಟರು. ಬಳಿಕ, ದೇಹವನ್ನು ಸುಟ್ಟೂ ಹಾಕಿದರು.

– ಇದು ಯಾವುದೇ ಸಿನಿಮಾದ ದೃಶ್ಯವಲ್ಲ; ಹೆಬ್ಬಾಳದ ‘ಇಂಟೆಲಿನೆಟ್’ ಕಂಪನಿ ಉದ್ಯೋಗಿ ಎಚ್‌.ಚೇತನ್‌ನ (22) ಬದುಕು ದುರಂತ ಅಂತ್ಯ ಕಂಡ ಬಗೆ.

ಆತನ ದೇಹ ದೊಡ್ಡದೇನಹಳ್ಳಿಯ ನೀಲಗಿರಿ ತೋಪಿನಲ್ಲಿ ಸೆ.15ರಂದು ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೊಬೈಲ್ ಕರೆ ವಿವರದ (ಸಿಡಿಆರ್) ಸುಳಿವಿನಿಂದ ತನಿಖೆ ಪ್ರಾರಂಭಿಸಿದ ಹೊಸಕೋಟೆ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಸಾಯಿವರ್ಧನ್ ಅಲಿಯಾಸ್ ವರ್ಧನ್ (26) ಹಾಗೂ ಸುನೀಲ್‌ಕುಮಾರ್ (24) ಎಂಬುವರನ್ನು ಸೆ.27ರಂದು
ಸೆರೆಹಿಡಿದಿದ್ದಾರೆ. 

ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ಪ್ರಕರಣ ಅ.3ರಂದು ಕೆ.ಆರ್.ಪುರ ಠಾಣೆಗೆ ವರ್ಗವಾಗಿದೆ. ಇದೀಗ, ರೌಡಿ ನವೀನ್ ಅಲಿಯಾಸ್ ಅಪ್ಪು ಸೇರಿದಂತೆ 11 ಮಂದಿಯ ಪತ್ತೆಗೆ ಎರಡೂ ಠಾಣೆಗಳ ಪೊಲೀಸರು ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ‘ಹಂತಕರ ಗುಂಪು ಚದುರಿ ಹೋಗಿದ್ದು, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಭಯದಲ್ಲಿ ಕುಳಿತಿದ್ದ ಅಪ್ಪು: ಗಣೇಶ ಹಬ್ಬದ ಪ್ರಯುಕ್ತ ಸೆ.13ರಂದು ದೇವಸಂದ್ರದ ‘ಲಿಟ್ಲ್‌ ಬ್ಲೂಮ್’ ಶಾಲೆ ಬಳಿ ಗಣೇಶಮೂರ್ತಿ ಪ್ರತಿ‌ಷ್ಠಾಪಿಸಲಾಗಿತ್ತು. ಆಯೋಜಕರು ಮರುದಿನ ರಾತ್ರಿ ಅಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಿದ್ದರು.‌

ಹಾಡು ಬದಲಿಸುವ ವಿಚಾರಕ್ಕೆ ಸ್ಥಳೀಯ ನಿವಾಸಿ ಹರೀಶ್ ಅಲಿಯಾಸ್ ಪಕ್ಕ ಹಾಗೂ ಅಪ್ಪು ನಡುವೆ ಜಗಳವಾಗಿತ್ತು. ಅವರ ಸಹಚರರು ಸಹ ಪರಸ್ಪರ ಕೈ–ಕೈ ಮಿಲಾಯಿಸಿದ್ದರಿಂದ ಗುಂಪು ಘರ್ಷಣೆ ಉಂಟಾಗಿತ್ತು. ಈ ಹಂತದಲ್ಲಿ ಹರೀಶ್, ‘ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ. ನಿನ್ನ ಆಯಸ್ಸು ಗಟ್ಟಿ ಇಲ್ಲ’ ಎಂದು ಅಪ್ಪುಗೆ ಬೆದರಿಕೆ ಹಾಕಿದ್ದ. 

ಹೊಯ್ಸಳ ವಾಹನ ಸ್ಥಳಕ್ಕೆ ಬರುತ್ತಿದ್ದಂತೆಯೇ ಜಾಗ ಖಾಲಿ ಮಾಡಿದ್ದ ಅಪ್ಪು ಹಾಗೂ ಸಹಚರರು, ಜೆ.ಸಿ.ಲೇಔಟ್‌ಗೆ ತೆರಳಿ ರಸ್ತೆ ಬದಿ ಬಿಯರ್ ಕುಡಿಯುತ್ತ ಕುಳಿತಿದ್ದರು. ಹರೀಶ್ ಧಮ್ಕಿಯಿಂದ ಬೆದರಿದ್ದ ಅಪ್ಪು, ಆತನನ್ನೇ ಮುಗಿಸಿಬಿಡುವ ವಿಚಾರವಾಗಿ ಸಹಚರರ ಜತೆ ಚರ್ಚೆ ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದರು. 

ಕತ್ತಲಲ್ಲಿ ದಾರಿ ತಪ್ಪಿದ ಚೇತನ್: ನೆಲಮಂಗಲ ತಾಲ್ಲೂಕು ಅವರೆಹಳ್ಳಿ ಗ್ರಾಮದ ಚೇತನ್, ಆರು ತಿಂಗಳ ಹಿಂದೆ ನಗರಕ್ಕೆ ಬಂದು ಮಹಾಲಕ್ಷ್ಮಿಲೇಔಟ್‌ನಲ್ಲಿ ನೆಲೆಸಿದ್ದ. ಸಹೋದ್ಯೋಗಿ ವಿನಯ್ ಸಿದ್ಧಾರೆಡ್ಡಿಯ ಬೈಕ್‌ ಕೆಟ್ಟು ಹೋಗಿದ್ದರಿಂದ, ಆತನನ್ನು ಮನೆಗೆ ಡ್ರಾಪ್ ಮಾಡಲು ರಾತ್ರಿ 11.30ರ ಸುಮಾರಿಗೆ ಬಸವನಪುರಕ್ಕೆ ಬಂದಿದ್ದ. ವಿನಯ್‌ನನ್ನು ಮನೆ ಹತ್ತಿರ ಬಿಟ್ಟು ವಾಪಸಾಗುವಾಗ, ದಾರಿ ತಪ್ಪಿ ಜೆ.ಸಿ.ಲೇಔಟ್‌ ಮಾರ್ಗ ಹಿಡಿದಿದ್ದ. ಅಲ್ಲಿ ಬೈಕ್ ನಿಲ್ಲಿಸಿ ರೌಡಿ ಅಪ್ಪು ಬಳಿ ವಿಳಾಸ ಕೇಳಿದ್ದ.

‘ಹರೀಶ್ ಕಡೆಯವನು’ ಎಂದು ಭಾವಿಸಿ ಚೇತನ್‌ಗೆ ಮನಸೋಇಚ್ಛೆ ಥಳಿಸಿದ್ದ ಅಪ್ಪು, ಬಳಿಕ ಆತನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಪುತ್ತೂಟ್‌ ಕಟ್ ರಸ್ತೆಯ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದ. ಸಹಚರರು ಆತನ ಬೈಕನ್ನೇ ಹಿಂಬಾಲಿಸಿಕೊಂಡು ಹೋಗಿದ್ದರು. ಚೇತನ್‌ನನ್ನು ಆ ಮನೆಯಲ್ಲಿ ಕೂಡಿ ಹಾಕಿ ನಸುಕಿನವರೆಗೂ ಚಿತ್ರಹಿಂಸೆ ಕೊಟ್ಟಿದ್ದರು.

‘ಪ್ಲೀಸ್ ಪಿಕ್ ಮೈ ಕಾಲ್‌...’: ನಸುಕಿನ ವೇಳೆ 3.30ರ ಸುಮಾರಿಗೆ ವಿನಯ್‌ಗೆ ಕರೆ ಮಾಡಿದ್ದ ಚೇತನ್, ಪ್ರತಿಕ್ರಿಯೆ ದೊರೆಯದಿದ್ದಾಗ ಸಹೋದ್ಯೋಗಿ ಸುಮಾ ಅವರಿಗೂ ಕರೆ ಮಾಡಿದ್ದ. ಅವರೂ ನಿದ್ರೆಯಲ್ಲಿದ್ದರಿಂದ ಪ್ರತಿಕ್ರಿಯಿಸಿರಲಿಲ್ಲ. ಈ ವೇಳೆ ಚೇತನ್, ‘ಪ್ಲೀಸ್, ಪಿಕ್ ಮೈ ಕಾಲ್‌’ (ದಯವಿಟ್ಟು ನನ್ನ ಕರೆ ಸ್ವೀಕರಿಸಿ) ಎಂದು ಇಬ್ಬರಿಗೂ ಸಂದೇಶ ಕಳುಹಿಸಿದ್ದ. ಆ ನಂತರ ಆರೋಪಿಗಳು ಆತನ ಮೊಬೈಲನ್ನೂ ಕಿತ್ತುಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು. 

‘ನನಗೆ ಹರೀಶ್ ಯಾರೆಂದು ಗೊತ್ತಿಲ್ಲ’ ಎಂದು ಪದೇ ಪದೇ ಹೇಳುತ್ತಿದ್ದರಿಂದ ಕುಪಿತಗೊಂಡ ಆರೋಪಿಗಳು, 4.30ರ ಸುಮಾರಿಗೆ ಮಚ್ಚು–ಲಾಂಗುಗಳಿಂದ ಹಲ್ಲೆ ನಡೆಸಿ ಚೇತನ್‌ನನ್ನು ಹತ್ಯೆ ಮಾಡಿದ್ದರು. ಬಳಿಕ ಶವವನ್ನು ದೊಡ್ಡದೇನಹಳ್ಳಿಯ ನೀಲಗಿರಿ ತೋಪಿಗೆ ತೆಗೆದುಕೊಂಡು ಹೋಗಿ ಸುಟ್ಟು ಹಾಕಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ಡಿ.ರಮೇಶ್ ಅವರು ವಾಯುವಿಹಾರಕ್ಕೆ ಹೋದಾಗ ಶವ ನೋಡಿ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದ್ದರು.

ಚೇತನ್‌ನ ಸಂದೇಶ ನೋಡಿ ವಿನಯ್ ಬೆಳಿಗ್ಗೆಯೇ ಆತನಿಗೆ ಕರೆ ಮಾಡಿದ್ದ. ಆದರೆ, ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಮನೆಗೂ ಹೋಗದೆ, ಕಚೇರಿಗೂ ಬಾರದೆ ಇದ್ದುದರಿಂದ ಅನುಮಾನಗೊಂಡ ಆತ, ಸೆ.15ರ ಮಧ್ಯಾಹ್ನ ಕೆ.ಆರ್.ಪುರ ಠಾಣೆಗೆ ದೂರು ಕೊಟ್ಟಿದ್ದ. ಬೆಳಿಗ್ಗೆಯಷ್ಟೇ ಅಪರಿಚಿತ ಶವ ಪತ್ತೆಯಾಗಿದ್ದರಿಂದ, ಪೊಲೀಸರು ವಿನಯ್‌ನನ್ನು ಹೊಸಕೋಟೆಗೆ ಕರೆದುಕೊಂಡು ಹೋಗಿದ್ದರು. ಆತ ಶವ ಗುರುತಿಸಿ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ್ದ.

ತಲೆಮರೆಸಿಕೊಂಡಿರುವ ಆರೋಪಿಗಳು
ನವೀನ್ ಅಲಿಯಾಸ್ ಅಪ್ಪು, ಮಂಜುನಾಥ್ ಅಲಿಯಾಸ್ ಕೋಳಿಮಂಜ, ಗಿರೀಶ, ವಿಶ್ವಾಸ್, ವಿಶಾಲ್, ರಬಾಜ್, ಪುನೀತ್, ಕಿರಣ್, ಮನೋಜ್, ಮಧುಸೂದನ್, ಅವಿನಾಶ್ ಹಾಗೂ ಅರುಣ್‌ಕುಮಾರ್ ಇವರೆಲ್ಲ ಕೆ.ಆರ್.ಪುರ ಹಾಗೂ ರಾಮಮೂರ್ತಿನಗರದ ನಿವಾಸಿಗಳು.

ಜೀವಕ್ಕೆ ಬೆಲೆ ಇಲ್ವಾ?
‘ನನ್ನ ತಮ್ಮ ತುಂಬ ಸಾಧು ಹುಡುಗ. ಆತನಿಗೆ ಯಾರೂ ಎದುರಾಳಿಗಳಿರಲಿಲ್ಲ. ಸಣ್ಣ ಹುಡುಗನನ್ನು 14–15 ಜನ ಗುಂಪು ಕಟ್ಟಿಕೊಂಡು ಹೊಡೆದಿದ್ದಾರೆ. ಜೀವಕ್ಕೆ ಬೆಲೆಯೇ ಇಲ್ವಾ? ಪೊಲೀಸರು ಹಂತಕರನ್ನು ಪತ್ತೆ ಮಾಡಿ ಶಿಕ್ಷೆಯನ್ನೂ ಕೊಡಿಸಬಹುದು. ಆದರೆ, ತಮ್ಮ ವಾಪಸ್ ಬರುವುದಿಲ್ಲವಲ್ಲ’ ಎಂದು ಚೇತನ್ ಅಣ್ಣ ಹರೀಶ್ ದುಃಖತಪ್ತರಾದರು.

ಬರಹ ಇಷ್ಟವಾಯಿತೆ?

 • 13

  Happy
 • 2

  Amused
 • 13

  Sad
 • 4

  Frustrated
 • 31

  Angry

Comments:

0 comments

Write the first review for this !