ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮಾಲಕಿ ಕೊಂದ ಬಾಡಿಗೆದಾರೆ ಸೆರೆ; ಶೋಕಿ ಜೀವನಕ್ಕಾಗಿ ಆಭರಣ ದೋಚಿದ್ದ ಆರೋಪಿ

Published 15 ಮೇ 2024, 14:43 IST
Last Updated 15 ಮೇ 2024, 14:43 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕೋನಸಂದ್ರದಲ್ಲಿ ಮನೆ ಮಾಲಕಿ ದಿವ್ಯಾ (36) ಎಂಬುವರ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿ ಆಗಿದ್ದಾರೆ.

ಕೋಲಾರದ ಮೋನಿಕಾ (24) ಬಂಧಿತ ಆರೋಪಿ.

ಮೇ 10ರ ಮಧ್ಯಾಹ್ನ ದಿವ್ಯಾ ಅವರನ್ನು ಕೊಲೆ ಮಾಡಲಾಗಿತ್ತು. ಚಿನ್ನಾಭರಣದ ಆಸೆಗೆ ಹೊರಗಿನಿಂದ ಬಂದಿದ್ದ ದುಷ್ಕರ್ಮಿಗಳು ಆಕೆಯನ್ನು ಕೊಂದು ಪರಾರಿಯಾಗಿದ್ದಾರೆ ಎಂದು ಆರಂಭದಲ್ಲಿ ಪೊಲೀಸರು ಶಂಕಿಸಿದ್ದರು. ಆದರೆ, ತನಿಖೆಯಿಂದ ದಿವ್ಯಾ ಅವರ ಮನೆಯಲ್ಲಿ ಬಾಡಿಗೆಗಿದ್ದ ಆರೋಪಿಯೇ ಕೊಲೆ ಮಾಡಿದ್ದು ಎಂಬುದು ಗೊತ್ತಾಗಿ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಮೋನಿಕಾ ಕಂಪನಿಯೊಂದರಲ್ಲಿ ಡೇಟಾ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದಳು. ಬಾಡಿಗೆಗೆ ಮನೆ ಹುಡುಕಾಟ ನಡೆಸುತ್ತಿದ್ದಳು. ಮೂರು ತಿಂಗಳ ಹಿಂದಷ್ಟೇ ಕೋನಸಂದ್ರದಲ್ಲಿ ಮನೆಯೊಂದು ಬಾಡಿಗೆ ಇದೆ ಎನ್ನುವ ಮಾಹಿತಿ ತಿಳಿದು, ದಿವ್ಯಾ ಅವರನ್ನು ವಿಚಾರಿಸಿದ್ದಳು. ಮೋನಿಕಾ ಜೊತೆಗೆ ಬಂದಿದ್ದ ಪ್ರಿಯಕರನನ್ನು ತನ್ನ ಪತಿಯೆಂದು ದಿವ್ಯಾ–ಗುರುಮೂರ್ತಿ ದಂಪತಿಗೆ ಪರಿಚಯಿಸಿದ್ದಳು’ ಎಂದು ಪೊಲೀಸರು ಹೇಳಿದರು.

‘ಬಾಡಿಗೆಗೆ ಮನೆ ಪಡೆದ ಮೇಲೆ ಪ್ರಿಯಕರ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಉಳಿದಂತೆ ಆರೋಪಿ ಒಬ್ಬಳೇ ಇರುತ್ತಿದ್ದಳು. ಆರೋಪಿ ಮೋಜಿನ ಜೀವನಕ್ಕೆ ಕೈಸಾಲ ಮಾಡಿಕೊಂಡಿದ್ದಳು. ಪ್ರಿಯಕರನಿಗೆ ವಾಹನ ಸಹ ಕೊಡಿಸಿದ್ದಳು. ವಾಹನ ಕೊಡಿಸಲು ಮಾಡಿದ್ದ ಸಾಲ ತೀರಿಸಲು ಹಣ ಹೊಂದಿಸುತ್ತಿದ್ದಳು. ಇದೇ ವೇಳೆ ಮನೆ ಮಾಲಕಿ ದಿವ್ಯಾ ಹಗಲು ವೇಳೆ ಒಬ್ಬರೇ ಇರುವುದನ್ನು ಗಮನಿಸಿದ್ದಳು. ಮನೆಯಲ್ಲಿ ಚಿನ್ನಾಭರಣವಿರುವ ಮಾಹಿತಿ ತಿಳಿದು ಕೊಲೆಗೆ ಸಂಚು ರೂಪಿಸಿದ್ದಳು’ ಎಂದು ಪೊಲೀಸರು ಹೇಳಿದರು.

‘ಮೇ 10ರಂದು ದಿವ್ಯಾ ತನ್ನ ಮಗುವಿನ ಜೊತೆಗೆ ಇರುವುದನ್ನು ಗಮನಿಸಿ, ಆರೋಪಿ ಮೋನಿಕಾ ಹಿಂಬಾಗಿಲಿನಿಂದ ಮನೆಯೊಳಗೆ ಬಂದಿದ್ದಳು. ದಿವ್ಯಾ ಕತ್ತು ಹಿಸುಕಿ ಕೊಲೆ ಮಾಡಿ, ಅವರ ಮೈಮೇಲಿದ್ದ 36 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಳು. ಬಳಿಕ ತನ್ನ ಬಾಡಿಗೆಯ ಮನೆಗೆ ತೆರಳಿ ಸಹಜವಾಗಿಯೇ ಇದ್ದಳು. ಅನುಮಾನಗೊಂಡ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬಾಯ್ಬಿಟ್ಟಿದ್ದಾಳೆ’ ಎಂದು ಮೂಲಗಳು ಹೇಳಿವೆ.

‘ಶೋಕಿ ಜೀವನಕ್ಕಾಗಿ ಮನೆಯ ಮಾಲಕಿಯನ್ನು ಕೊಂದಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT