ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರ ಕೊಲೆ ಪ್ರಕರಣ: ಉನ್ನತಮಟ್ಟದ ತನಿಖೆ ಆಗ್ರಹ

Published 26 ಮಾರ್ಚ್ 2024, 16:12 IST
Last Updated 26 ಮಾರ್ಚ್ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ‘ತುಮಕೂರು ಜಿಲ್ಲೆಯ ಕುಚ್ಚಂಗಿ ಕೆರೆ ಅಂಗಳದಲ್ಲಿ ಕಾರು ಸಹಿತ ಮೂವರನ್ನು ಸುಟ್ಟು ಹಾಕಿರುವ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಉನ್ನತಮಟ್ಟದ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಮಂಗಳೂರು ಮುಸ್ಲಿಂ ಯೂತ್‌ ಕೌನ್ಸಿಲ್‌ ಆಗ್ರಹಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೌನ್ಸಿಲ್‌ ಅಧ್ಯಕ್ಷ ಎಚ್‌.ಅಬೂಬಕ್ಕರ್, ‘ತುಮಕೂರಿನ ಶೀರಾಗೇಟ್‌ ನಿವಾಸಿ, ಆರೋಪಿ ಪಾತರಾಜು (ರಾಜಗುರು) ಎಂಬಾತ ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಶಾಹುಲ್‌ ಹಮೀದ್, ಇಸಾಕ್, ಸಿದ್ದೀಕ್‌ ಅವರಿಗೆ ನಿಧಿ ಮತ್ತು ಚಿನ್ನದ ಆಸೆ ತೋರಿಸಿ ₹6 ಲಕ್ಷ ಹಣ ಪಡೆದುಕೊಂಡಿದ್ದ. ಅದನ್ನು ವಾಪಸ್‌ ಕೇಳಿದ್ದಕ್ಕೆ ಕೊಲೆ ಮಾಡಲಾಗಿದೆ. ಇದರಿಂದ, ಮೃತರ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಕೂಡಲೇ ಈ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಈ ಕೊಲೆ ಸಂಚು ರೂಪಿಸಿದ್ದ ನಗರದ ಸಿ ಪಾತರಾಜು ಹಾಗೂ ಸತ್ಯಮಂಗಲದ ಗಂಗರಾಜು (35) ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ, ಆರೋಪಿಗಳಾದ ತುಮಕೂರಿನ ಪುಟ್ಟಸ್ವಾಮಯ್ಯನ ಪಾಳ್ಯದ ಮಧುಸೂಧನ್ (24), ಸಂತೆಪೇಟೆಯ ನವೀನ್ (24), ವೆಂಕಟೇಶಪುರದ ಕೃಷ್ಣ (22), ಹೊಂಬಯ್ಯನಪಾಳ್ಯದ ಗಣೇಶ (19), ನಾಗಣ್ಣನಪಾಳ್ಯದ ಕಿರಣ್ (23), ಕಾಳಿದಾಸ ನಗರದ ಸೈಮನ್ (18) ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ತುಮಕೂರು ಭಾಗದಲ್ಲಿ ಹತ್ತು ವರ್ಷಗಳಿಂದ ನಿಧಿ ಹುಡುಕಿಕೊಡುವುದಾಗಿ ಹೇಳಿ ಮೋಸ ಮಾಡುವ ಜಾಲವೊಂದು ಸಕ್ರಿಯವಾಗಿದೆ. ಅಮಾಯಕರನ್ನು ಗುರಿಯಾಗಿಸಿ ಹಣ ದೋಚಿ, ಕೊಲೆ ಮಾಡುವ ಪ್ರಕರಣಗಳು ನಡೆಯುತ್ತಿವೆ. ಈ ಜಾಲದ ಹಿಂದಿರುವ ಎಲ್ಲ ವ್ಯಕ್ತಿಗಳನ್ನು ಬಂಧಿಸಬೇಕು. ಜೊತೆಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು’ ಎಂದು ಹೇಳಿದರು.

ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಜುನೈದ್, ಸಲೀಂ ಸಿ.ಎಂ., ಸಮದ್ ಮದ್ದಡ್ಕ, ಬಶೀರ್ ಪುಣಚ, ಉಬೈದುಲ್ಲಾ, ಶಬ್ಬೀರ್ ಉಜಿರೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT