ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರ್ತಪೇಟೆ ಗಲಾಟೆ ಪ್ರಕರಣ | ಬೃಹತ್‌ ಪ್ರತಿಭಟನೆ, ಬಿಗುವಿನ ವಾತಾವರಣ

ಪೊಲೀಸರು– ಪ್ರತಿಭಟನಕಾರರ ನಡುವೆ ವಾಗ್ವಾದ, ತಳ್ಳಾಟ
Published 19 ಮಾರ್ಚ್ 2024, 15:51 IST
Last Updated 19 ಮಾರ್ಚ್ 2024, 15:51 IST
ಅಕ್ಷರ ಗಾತ್ರ

ಬೆಂಗಳೂರು: ‘ಹನುಮಾನ್‌ ಚಾಲೀಸಾ ಹಾಕಿದ್ದ ವಿಚಾರವಾಗಿ ಮೊಬೈಲ್‌ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದ ಘಟನೆ ಖಂಡಿಸಿ’ ನಗರ್ತಪೇಟೆಯಲ್ಲಿ ಮಂಗಳವಾರ ಬಿಜೆಪಿ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಜರಂಗದಳದ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.

ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರತಿಭಟನಕಾರರು ಹಾಗೂ ಪೊಲೀಸರು ನಡುವೆ ವಾಗ್ವಾದ ಹಾಗೂ ತಳ್ಳಾಟ ನಡೆಯಿತು. ಕೇಸರಿ ಶಾಲು ಹಾಗೂ ಭಗವಾಧ್ವಜ ಹಿಡಿದು ಬಂದಿದ್ದ ಕಾರ್ಯಕರ್ತರು, ಜೈಶ್ರೀರಾಮ್‌ ಘೋಷಣೆ ಕೂಗುತ್ತಾ ರ್‍ಯಾಲಿ ನಡೆಸಿದರು. ಇದರಿಂದ ಸ್ಥಳದಲ್ಲಿ ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

‘ಭಾನುವಾರ ಸಂಜೆ 6.30ರ ಸುಮಾರಿಗೆ ಕಬ್ಬನ್‌ಪೇಟೆಯ ಸಿದ್ದಣ್ಣಗಲ್ಲಿಯ ಕೃಷ್ಣ ಟೆಲಿಕಾಮ್‌ನ ಮಾಲೀಕ ಮುಖೇಶ್‌(26) ಎಂಬುವವರು ಸಂಜೆ ಹನುಮಾನ್‌ ಚಾಲೀಸಾ ಹಾಕಿಕೊಂಡಿದ್ದರು. ಅದೇ ಸಂದರ್ಭದಲ್ಲಿ ಅಂಗಡಿಗೆ ಬಂದಿದ್ದ ಆರೋಪಿಗಳು ಭಜನೆ ಹಾಕಿದ್ದಕ್ಕೆ ಕುಪಿತಗೊಂಡು ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ, ಆರೋಪಿಗಳನ್ನು ರಕ್ಷಣೆ ಮಾಡಲಾಗುತ್ತಿದೆ’ ಎಂದು ಪ್ರತಿಭಟನಕಾರರು ಕಿಡಿಕಾರಿದರು.

ಕೇಂದ್ರ ಸಚಿವೆ ಶೋಬಾ ಕರಂದ್ಲಾಜೆ, ಶಾಸಕ ಎಸ್‌.ಸುರೇಶ್‌ಕುಮಾರ್‌, ಸಂಸದ ತೇಜಸ್ವಿ ಸೂರ್ಯ ಅವರು ಸ್ಥಳಕ್ಕೆ ಬಂದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಆಗ ಪ್ರತಿಭಟನಕಾರರು ರ್‍ಯಾಲಿ ನಡೆಸಲು ಮುಂದಾದರು. ಪೊಲೀಸರ ಮನವಿಗೂ ಜಗ್ಗದೇ ಮುನ್ನುಗ್ಗಲು ಪ್ರಯತ್ನಿಸಿದರು.

ಮುಖೇಶ್‌ ಅವರಿಂದ ಸುರೇಶ್‌ಕುಮಾರ್ ಅವರು ಮಾಹಿತಿ ಪಡೆದುಕೊಳ್ಳುತ್ತಿದ್ದ ವೇಳೆ ಜೋರಾಗಿ ತಳ್ಳಾಟ ನಡೆಯಿತು. ಕೆಲವರು ಕೆಳಕ್ಕೆ ಬಿದ್ದರು. ಪೊಲೀಸರ ವಿರುದ್ಧ ಆಕ್ರೋಶ ಹೆಚ್ಚುತ್ತಿದ್ದಂತೆಯೇ ಸ್ಥಳಕ್ಕೆ ವಿವಿಧ ವಿಭಾಗಗಳಿಂದ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ಕರೆಸಿಕೊಂಡು ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಲಾಯಿತು. ಅದೂ ವಿಫಲವಾಯಿತು.

ಉಳಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈಬಿಡಲಾಯಿತು.

ಗೃಹ ಸಚಿವರ ರಾಜೀನಾಮೆಗೆ ಆಗ್ರಹ:‌

‘ವಿಧಾನಸೌಧ ಆವರಣಕ್ಕೆ ಯಾರೋ ಬಂದು ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗುತ್ತಾರೆ. ಮತ್ತೊಬ್ಬರು ಹೆಣ್ಣುಮಕ್ಕಳ ಮೇಲೆ ಆ್ಯಸಿಡ್‌ ದಾಳಿ ನಡೆಸುತ್ತಾರೆ. ಸ್ವಂತ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಸಿ.ಡಿ. ಹಾಕಿದ್ದಕ್ಕೆ ಯುವಕನ ಮೇಲೆ ಇನ್ನೊಂದು ಗುಂಪು ಹಲ್ಲೆ ನಡೆಸುತ್ತದೆ. ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಏನು ಮಾಡುತ್ತಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಗೃಹ ಸಚಿವ ಜಿ.ಪರಮೇಶ್ವರ ಅವರು ರಾಜೀನಾಮೆ ನೀಡಬೇಕು’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

‘ನಗರದಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿವೆ. ಪೊಲೀಸರು ಯಾರ ಒತ್ತಡಕ್ಕೂ ಮಣಿಯದೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕ ಎಸ್‌.ಸುರೇಶ್‌ಕುಮಾರ್‌ ಆಗ್ರಹಿಸಿದರು.

‘ಪೊಲೀಸರು ಹೆಚ್ಚು ಕಾರ್ಯಪ್ರವೃತ್ತರಾಗಬೇಕು. ಸಮಾಜದ ಜೊತೆಗೆ ನಾವಿದ್ದೇವೆ ಎಂದು ಭರವಸೆ ತುಂಬಬೇಕು’ ಎಂದು ಮನವಿ ಮಾಡಿದರು.

ತೇಜಸ್ವಿ ಸೂರ್ಯ ಮಾತನಾಡಿ, ‘5 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಜಮಾಯಿಸಿ ಹಲ್ಲೆಗೆ ಒಳಗಾದ ಯುವಕನಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಒತ್ತಡಕ್ಕೆ ಒಳಗಾಗಿ ಎಫ್‌ಐಆರ್‌ನಲ್ಲಿ ಸತ್ಯಾಂಶ ನಮೂದಿಸಿರಲಿಲ್ಲ. ಆಕ್ರೋಶ ಹೆಚ್ಚಾದ ಮೇಲೆ ಮುಖೇಶ್‌ ಅವರಿಂದ ಮರುಹೇಳಿಕೆ ಪಡೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಬ್ರ್ಯಾಂಡ್ ಬೆಂಗಳೂರು ಮಾಡಲು ಕಾನೂನು ಸುವ್ಯವಸ್ಥೆ ಉತ್ತಮವಾಗಿರಬೇಕು. ಆದರೆ, ಕಾನೂನು ಸುವ್ಯವಸ್ಥೆ ಪಾಲನೆ ಆಗುತ್ತಿಲ್ಲ’ ಎಂದು ದೂರಿದರು.

‘ಎಲ್ಲ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ನಡೆಸಲಾಗುತ್ತದೆ’ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರಾಮಮೂರ್ತಿ ಎಚ್ಚರಿಕೆ ನೀಡಿದರು. 

ನಗರ್ತಪೇಟೆಯಲ್ಲಿ ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದರು
ನಗರ್ತಪೇಟೆಯಲ್ಲಿ ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದರು
ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್‌ ಜೀಪಿಗೆ ಪ್ರತಿಭಟನಕಾರರು ಮುತ್ತಿಗೆ ಹಾಕಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್‌ ಜೀಪಿಗೆ ಪ್ರತಿಭಟನಕಾರರು ಮುತ್ತಿಗೆ ಹಾಕಿದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಸಮಾಜದ ವಿರೋಧಿ ಧೋರಣೆ ಮುಂದುವರಿಸಿರುವುದಕ್ಕೆ ನಗರ್ತಪೇಟೆಯ ಘಟನೆ ಉದಾಹರಣೆ. ಕೇಂದ್ರ ಸಚಿವೆಯಾಗಿರುವ ನನ್ನನ್ನು ಪೊಲೀಸರು ಅಮಾನುಷವಾಗಿ ಎಳೆದುಕೊಂಡು ಬಂದು ವಶಕ್ಕೆ ಪಡೆದುಕೊಂಡರು.
–ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ
ಯುವಕ ತನ್ನ ನಂಬಿಕೆ ಪ್ರಕಾರ ಅಂಗಡಿಯಲ್ಲಿ ಹನುಮಾನ್‌ ಚಾಲೀಸಾ ಹಾಕಿಕೊಂಡಿದ್ದರೆ ಅದನ್ನು ವಿರೋಧಿಸಿ ಹಲ್ಲೆ ನಡೆಸಲಾಗಿದೆ. ಅಸಹನೆ ಎಂಬುದು ಈ ಮಟ್ಟಕ್ಕೆ ಹೋಗಬಾರದು. ಘಟನೆ ಶಾಂತಿ ಕದಡುವ ಪ್ರಯತ್ನವಾಗಿದೆ.
–ಎಸ್‌.ಸುರೇಶ್‌ ಕುಮಾರ್ ಶಾಸಕ

ಕೇಂದ್ರ ಸಚಿವೆ ವಶಕ್ಕೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಇತರರು ರಸ್ತೆಯಲ್ಲಿ ಕುಳಿತು ಹನುಮಾನ್‌ ಚಾಲೀಸಾ ಪಠಣ ಮಾಡಲು ಮುಂದಾದರು. ಸ್ಥಳದಲ್ಲಿದ್ದ ಪೊಲೀಸರು ‘ನಗರದ ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ಬೇರೆ ಯಾವುದೇ ಜಾಗದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ. ಪ್ರತಿಭಟನೆ ಕೈಬಿಟ್ಟು ಸ್ಥಳದಿಂದ ಹೊರಟುಹೋಗಿ‘ ಎಂದು ಕೋರಿದರು. ಇದಕ್ಕೆ ಒಪ್ಪದ ಶೋಭಾ ಹಾಗೂ ಇತರರು ಪ್ರತಿಭಟನೆ ಮುಂದುವರಿಸಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದರು. ನಗರ್ತಪೇಟೆಯ ಮುಖ್ಯರಸ್ತೆಯಲ್ಲಿ ಬಹುತೇಕ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಅಕ್ಕಪಕ್ಕದ ರಸ್ತೆಗಳಲ್ಲೂ ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು. ಘಟನೆ ನಡೆದ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜುಮ್ಮಾ ಮಸೀದಿ ರಸ್ತೆಯಲ್ಲಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT