ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರ್ತಪೇಟೆ ಪ್ರಕರಣ: ಮುಖೇಶ್‌ ವಿರುದ್ಧವೂ ಎಫ್‌ಐಆರ್‌

Published 5 ಏಪ್ರಿಲ್ 2024, 15:27 IST
Last Updated 5 ಏಪ್ರಿಲ್ 2024, 15:27 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ನಗರ್ತಪೇಟೆಯ ಜುಮ್ಮಾ ಮಸೀದಿ ರಸ್ತೆಯಲ್ಲಿ ಆಜಾನ್ ವೇಳೆ ಹನುಮಾ‌ನ್‌ ಚಾಲೀಸಾ ಹಾಕಿದ್ದಕ್ಕೆ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಮೊಬೈಲ್ ಮಳಿಗೆ ಮಾಲೀಕ ಮುಖೇಶ್‌ (26) ವಿರುದ್ಧವೂ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆಜಾನ್ ವೇಳೆ ಹನುಮಾ‌ನ್‌ ಚಾಲೀಸಾ ಹಾಕಿದ್ದಕ್ಕೆ ಆಕ್ಷೇಪಿಸಿದ್ದ ಆರೋಪಿಗಳು, ಮಳಿಗೆಗೆ ನುಗ್ಗಿ ಗಲಾಟೆ ಮಾಡಿದ್ದರು. ನನ್ನ ಕೊಲೆಗೂ ಯತ್ನಿಸಿದ್ದರು’ ಎಂದು ಆರೋಪಿಸಿ ಮುಖೇಶ್ ದೂರು ನೀಡಿದ್ದರು. ಇದರ ಬೆನ್ನಲ್ಲೇ ಆರೋಪಿಗಳಾದ ಸುಲೇಮಾನ್, ಶಹನವಾಜ್, ರೋಹಿತ್‌, ತರುಣ್‌ನನ್ನು ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಪ್ರಕರಣದ ಸಂಬಂಧ ಆರೋಪಿ ಸುಲೇಮಾನ್ ಅವರ ತಾಯಿ ಜಬೀನಾ ಸಹ ದೂರು ನೀಡಿದ್ದರು. ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸೂಚಿಸಿದೆ. ಹೀಗಾಗಿ, ಆರೋಪಿ ಮುಖೇಶ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಆರೋಪಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.

ದೂರಿನ ವಿವರ: ‘ಕೃಷ್ಣ ಟೆಲಿಕಾಂ ಮಳಿಗೆ ಮಾಲೀಕ ಮುಖೇಶ್, 3 – 4 ದಿನಗಳಿಂದ ಧ್ವನಿವರ್ಧಕದಲ್ಲಿ ಜೋರಾಗಿ ಹಾಡು ಹಾಕುತ್ತಿದ್ದ. ಅದನ್ನು ಗಮನಿಸಿದ್ದ ನನ್ನ ಮಗ ಸುಲೇಮಾನ್ ಹಾಗೂ ಸ್ನೇಹಿತರಾದ ಶಹನವಾಜ್, ರೋಹಿತ್, ದಡಿಯಾ ಅಲಿಯಾಸ್ ತರುಣ್, ಮೊಬೈಲ್ ಮಳಿಗೆ ಬಳಿ ಹೋಗಿದ್ದರು’ ಎಂದು ತಾಯಿ ಜಬೀನಾ ದೂರಿನಲ್ಲಿ ತಿಳಿಸಿದ್ದಾರೆ.

‘ಧ್ವನಿವರ್ಧಕ ಶಬ್ದ ಕಡಿಮೆ ಮಾಡುವಂತೆ ಮಗ ಹಾಗೂ ಇತರರು ಮುಖೇಶ್‌ನನ್ನು ಕೋರಿದ್ದರು. ‘ರಂಜಾನ್ ಹಬ್ಬವಿದೆ. ಧ್ವನಿವರ್ಧಕದ ಶಬ್ದ ಜೋರಾಗಿದ್ದರೆ, 3,000 ಜನರಿಗೆ ಪ್ರಾರ್ಥನೆ ಸಲ್ಲಿಸಲು ತೊಂದರೆ ಆಗುತ್ತದೆ’ ಎಂದೂ ಸುಲೇಮಾನ್ ಹೇಳಿದ್ದ. ಅಷ್ಟಕ್ಕೆ ಮುಖೇಶ್, ಮಗ ಹಾಗೂ ಇತರರ ಮೇಲೆ ಹಲ್ಲೆ ಮಾಡಿದ್ದಾನೆ’ ಎಂದು ಜಬೀನಾ ದೂರಿನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT