ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ: ಒಡೆಯರ್ ಸ್ಮರಣೆ, ಕೊಡುಗೆ ಬಗ್ಗೆ ಗುಣಗಾನ

ಕಸಾಪ ಸೇರಿ ವಿವಿಧ ಸಂಘ–ಸಂಸ್ಥೆಗಳಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ
Published 4 ಜೂನ್ 2024, 15:29 IST
Last Updated 4 ಜೂನ್ 2024, 15:29 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 140ನೇ ಜಯಂತಿಯನ್ನು ಆಚರಿಸಿ, ಅವರು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಲಾಯಿತು. 

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ), ಉದಯಭಾನು ಕಲಾಸಂಘ, ಸಮತಾ ಸೈನಿಕ ದಳ ಸೇರಿ ವಿವಿಧ ಸಂಘ–ಸಂಸ್ಥೆಗಳು ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಿದವು.

ಕಸಾಪ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿದ ಲೇಖಕ ಟಿ.ಆರ್. ಅನಂತರಾಮು, ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗಾಂಧೀಜಿಯಿಂದಲೇ ‘ರಾಜರ್ಷಿ’ ಎಂಬ ಗೌರವ ಪಡೆದಿದ್ದರು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಗಣನೀಯ ಪ್ರಗತಿ ಸಾಧಿಸಿದ ಮೈಸೂರು ಸಂಸ್ಥಾನವು ನಾಲ್ವಡಿ ಅವರ ಅವಧಿಯಲ್ಲಿ ತಾಂತ್ರಿಕವಾಗಿಯೂ ಬೆಳವಣಿಗೆ ಕಂಡಿತು. ವಿದ್ಯುತ್ ತಂದಿದ್ದು ಅವರ ದೊಡ್ಡ ಕೊಡುಗೆ’ ಎಂದು ಹೇಳಿದರು.

ನಾಲ್ವಡಿಯವರ ಕೊಡುಗೆಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸಾಮಾಜಿಕ ಇತಿಹಾಸಕಾರ ಧರ್ಮೇಂದ್ರ ಕುಮಾರ್, ‘ನಾಲ್ವಡಿಯವರ ಜೀವನ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಪ್ರತಿ ಕ್ಷಣವೂ ಅವರು ಸವಾಲುಗಳನ್ನು ಎದುರಿಸಿ, ಬೆಂಕಿಯಲ್ಲಿ ಅರಳಿದ ಹೂವಾಗಿ ಹೊರಹೊಮ್ಮಿದರು. ತಮ್ಮನ್ನೇ ಗಂಧದ ಹಾಗೆ ತೇಯ್ದುಕೊಂಡು, ನಾಡಿನ ಭವಿಷ್ಯವನ್ನು ಉಜ್ವಲವಾಗಿಸಿದರು’ ಎಂದು ತಿಳಿಸಿದರು. ‌‌

ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಸಾಮಾಜಿಕ ಬದಲಾವಣೆಗೆ, ದೇಶದ ಸಂಪತ್ತಿಗೆ ವಿದ್ಯೆಯು ಮೂಲ ಎಂದು ಅರಿತ ನಾಲ್ವಡಿ ಅವರು, 1915ರಲ್ಲಿ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಉಚಿತವಾಗಿಸಿದರು. ಶಿಕ್ಷಣವನ್ನು ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿದರು. ಮಹಿಳೆಯರ ವಿದ್ಯಾಭ್ಯಾಸಕ್ಕೂ ಪ್ರೋತ್ಸಾಹಿಸಿದರು. 1916ರಲ್ಲಿ ಮೈಸೂರು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದರಿಂದ ನಾಡಿನಲ್ಲಿ ಹೊಸಶಕೆ ಆರಂಭವಾದಂತಾಯಿತು. ಭಾರಿ ಆಸ್ಪತ್ರೆಗಳು ಅವರ ಕಾಲದಲ್ಲಿ ನಿರ್ಮಾಣಗೊಂಡವು’ ಎಂದು ಹೇಳಿದರು. 

ಹೆಬ್ಬಾಳದ ಪಶುವೈದ್ಯಕೀಯ ಮಹಾವಿದ್ಯಾಲಯವು ‘ನಾಲ್ವಡಿಯವರ ಮಾದರಿ ಆಡಳಿತ’ ಕುರಿತು ಉಪನ್ಯಾಸ ಹಮ್ಮಿಕೊಂಡಿತ್ತು. ಉದಯಭಾನು ಕಲಾಸಂಘದಲ್ಲಿ ರಾಜರ್ಷಿ ಕೃಷ್ಣರಾಜ ಒಡೆಯರ್ ಸ್ಮರಣೆ ಕಾರ್ಯಕ್ರಮ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT