ಸೋಮವಾರ, ಫೆಬ್ರವರಿ 17, 2020
17 °C
ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಎದುರು ನಿತ್ಯವೂ ಸರದಿ ಸಾಲು * ಪ್ರಯಾಣಿಕರು ಕಂಗಾಲು

ಪ್ರಯಾಣಕ್ಕಿಂತ ಕಾಯುವುದೇ ಹೆಚ್ಚು!

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ರೈಲಿನ ಪ್ರಯಾಣದ ಅವಧಿ ಕಡಿಮೆ ಎಂದುಕೊಂಡು ನೀವು ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಬೆಳಿಗ್ಗೆ 9ರಿಂದ 10ರ ನಡುವೆ ಹೋದರೆ, ನಿಮ್ಮ ಯೋಜನೆಗಳೆಲ್ಲ ತಲೆಕೆಳಗಾಗಬಹುದು.

ಏಕೆಂದರೆ, ನಿಲ್ದಾಣದ ಪ್ರವೇಶದ್ವಾರದಿಂದ ಫ್ಲ್ಯಾಟ್‌ಫಾರಂ ತಲುಪಲು ಅರ್ಧ ತಾಸಿಗೂ ಹೆಚ್ಚು ಸಮಯ ಬೇಕಾಗುತ್ತದೆ. ನಂತರ ಬೈಯಪ್ಪನಹಳ್ಳಿ ನಿಲ್ದಾಣದಿಂದ ಮೈಸೂರು ರಸ್ತೆ ನಿಲ್ದಾಣದ ನಡುವಿನ 18 ಕಿ.ಮೀ ದೂರವನ್ನು ಕೇವಲ 36 ನಿಮಿಷಗಳಲ್ಲೇ ತಲುಪಬಹುದು.

‘ಬೆಳಿಗ್ಗೆ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಬಸ್‌ ಮತ್ತು ಬೈಕ್‌ಗಳಲ್ಲಿ ಹೋದರೆ ತಡವಾಗುತ್ತದೆ ಎಂಬ ಕಾರಣಕ್ಕೆ ಮೆಟ್ರೊ ರೈಲು ಅವಲಂಬಿಸುತ್ತೇವೆ. ಆದರೆ, ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 40 ನಿಮಿಷಕ್ಕೂ ಹೆಚ್ಚು ಕಾಲ ಕಾಯಬೇಕಾಗುತ್ತದೆ. ಕಚೇರಿ ಸಮಯದಲ್ಲಿ ತುಂಬಾ ತೊಂದರೆಯಾಗುತ್ತದೆ’ ಎಂದು ಪ್ರಯಾಣಿಕ ಸಂತೋಷ್‌ ಕುಮಾರ್‌ ಅಳಲು ತೋಡಿಕೊಂಡರು. 

‘ಈ ನಿಲ್ದಾಣದಲ್ಲಿ ಸ್ಕ್ಯಾನಿಂಗ್‌ ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸ್ವಯಂಚಾಲಿತ ಶುಲ್ಕ ಸಂಗ್ರಹ (ಎಎಫ್‌ಸಿ) ಗೇಟ್‌ಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು. ಪ್ರಯಾಣಿಕರು ಇಷ್ಟೊಂದು ತೊಂದರೆ ಅನುಭವಿಸುತ್ತಿದ್ದರೂ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದೆ. ಸಮಸ್ಯೆ ನಿವಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರಯಾಣಿಕರ ಸಂಖ್ಯೆ ಹೆಚ್ಚಿದಂತೆ ಸೌಲಭ್ಯಗಳನ್ನು ಹೆಚ್ಚಿಸಬೇಕಾಗಿರುವುದು ನಿಗಮದ ಜವಾಬ್ದಾರಿ. ಆದರೆ, ಏಕಕಾಲದಲ್ಲಿ ಹೆಚ್ಚು ಜನರ ತಪಾಸಣೆಗೆ ವ್ಯವಸ್ಥೆ ಕಲ್ಪಿಸದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ’ ಎಂದು ಶ್ರೀನಿವಾಸ ಭಟ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ. 

ಭವಿಷ್ಯದಲ್ಲಿ ಇನ್ನೂ ಸಂಕಷ್ಟ!: ಪ್ರಯಾಣಿಕರು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಸರದಿ ಸಾಲಿನಲ್ಲಿ ಕಾಯಬೇಕಾಗಿರುವುದರಿಂದ ಮೆಟ್ರೊ ರೈಲಿನ ಬದಲು ಆಟೊ, ಕ್ಯಾಬ್‌ ಮತ್ತು ಬೈಕ್‌ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ, ಬೆಳಿಗ್ಗೆ 9ರಿಂದ 10ರ ನಡುವೆ ಈ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯೂ ಹೆಚ್ಚುತ್ತದೆ. 

ಮುಂಬರುವ ವರ್ಷಗಳಲ್ಲಿ ಕೆ.ಆರ್. ಪುರದಲ್ಲಿ ಹೊಸ ಟರ್ಮಿನಲ್‌ ನಿರ್ಮಾಣವಾಗಲಿದೆ.

ವೈಟ್‌ಫೀಲ್ಡ್‌ವರೆಗೂ ಜನ ಮೆಟ್ರೊ ಬಳಸುತ್ತಾರೆ. ಆಗ, ಜನದಟ್ಟಣೆ ಸಹಜವಾಗಿ ಹೆಚ್ಚಲಿದ್ದು, ಕಾಯುವ ಸಮಯವೂ ಹೆಚ್ಚಾಗಲಿದೆ ಎಂದು ಪ್ರಯಾಣಿಕರು ಹೇಳುತ್ತಾರೆ.

45 ನಿಮಿಷದಲ್ಲಿ 8 ಸಾವಿರ ಜನ!

ನಿತ್ಯ 9.05ರಿಂದ 9.50ರ ಸಮಯದಲ್ಲಿ ನಾಲ್ಕು ಪ್ಯಾಸೆಂಜರ್‌ ರೈಲುಗಳು ಬೈಯಪ್ಪನಹಳ್ಳಿ ರೈಲು ನಿಲ್ದಾಣಕ್ಕೆ ಬರುತ್ತವೆ. ಈ ನಾಲ್ಕು ರೈಲುಗಳಿಂದ 45 ನಿಮಿಷಗಳಲ್ಲಿ 7,858ಕ್ಕೂ ಹೆಚ್ಚು ಜನ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣಕ್ಕೆ ಬರುತ್ತಾರೆ. ಈ ಅವಧಿಯಲ್ಲಿ ಮೆಟ್ರೊ ಬಳಸುವವರ ಸಂಖ್ಯೆಯೂ ಹೆಚ್ಚಾಗುವುದರಿಂದ ನಿಲ್ದಾಣದಲ್ಲಿ ಸರದಿ ಸಾಲು ಸಾಮಾನ್ಯವಾಗಿರುತ್ತದೆ.

ಹೆಚ್ಚು ಸ್ಕ್ಯಾನರ್‌, ತಪಾಸಣಾ ಸಿಬ್ಬಂದಿ ನಿಯೋಜನೆ

‘ಬೈಯಪ್ಪನಹಳ್ಳಿಯಲ್ಲಿ ನಿತ್ಯ ಬೆಳಿಗ್ಗೆ ಪ್ರಯಾಣಿಕರು ಹೆಚ್ಚು ಹೊತ್ತು ಸರದಿಯಲ್ಲಿ ನಿಲ್ಲಬೇಕಾದ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ರೈಲು ಪ್ರಯಾಣಿಕರು ಹೆಚ್ಚು ಜನ ಒಮ್ಮೆಗೆ ಬರುವುದರಿಂದ ಈ ಸಮಸ್ಯೆ ಇದೆ. ಇದನ್ನು ಪರಿಹರಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ತಿಳಿಸಿದರು.

‘ಕಳೆದ ಜ.28ರಂದು ಹೆಚ್ಚುವರಿಯಾಗಿ ಒಂದು ಸ್ಕ್ಯಾನರ್‌ ಅಳವಡಿಸಲಾಗಿದೆ. ಸದ್ಯ, ಮೂರು ಸ್ಕ್ಯಾನರ್‌ಗಳು, ಮೂರು ಲೋಹಶೋಧಕ (ಡಿಎಫ್‌ಎಂಡಿಎಸ್‌), ಆರು ತಪಾಸಣಾ ಸಿಬ್ಬಂದಿಯನ್ನು (ನಾಲ್ವರು ಪುರುಷರು, ಇಬ್ಬರು ಮಹಿಳೆಯರು) ನಿಯೋಜಿಸಲಾಗಿದೆ’ ಎಂದರು.

‘ಇನ್ನು ಮೂರು ದಿನಗಳಲ್ಲಿ ಮೂರು ಎಎಫ್‌ಸಿ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಸಹಾಯಕ್ಕಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗುವುದು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು