ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ: ‘ಪಿಎಸ್‌ಡಿ’ ಅಳವಡಿಕೆ ಆಗ್ರಹಕ್ಕೆ ಮರುಜೀವ

Published 21 ಮಾರ್ಚ್ 2024, 22:39 IST
Last Updated 21 ಮಾರ್ಚ್ 2024, 22:39 IST
ಅಕ್ಷರ ಗಾತ್ರ

ಬೆಂಗಳೂರು: ಅತ್ತಿಗುಪ್ಪೆ ನಿಲ್ದಾಣದಲ್ಲಿ ಗುರುವಾರ ಯುವಕನೊಬ್ಬ ಹಳಿಗೆ ಹಾರಿ ಜೀವ ಕಳೆದುಕೊಂಡ ದುರ್ಘಟನೆಯ ಬೆನ್ನಲ್ಲೇ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮೆಟ್ರೊ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್‌ ಸ್ಕ್ರೀನ್‌ ಡೋರ್‌ (ಪಿಎಸ್‌ಡಿ) ವ್ಯವಸ್ಥೆ ಅಳವಡಿಸಬೇಕು ಎಂಬ ಒತ್ತಾಯಕ್ಕೆ ಮತ್ತೆ ಜೀವ ಬಂದಿದೆ.

ಇದೇ ವರ್ಷ ಜನವರಿಯಲ್ಲಿ ಇಂದಿರಾನಗರ ಮೆಟ್ರೊ ನಿಲ್ದಾಣದಲ್ಲಿ ಕೆಳಗೆ ಬಿದ್ದ ಮೊಬೈಲ್‌ ಎತ್ತಿಕೊಳ್ಳಲು ಮಹಿಳೆಯೊಬ್ಬರು ಹಳಿಗೆ ಹಾರಿದ್ದರು. ಇದಾದ ಮೂರೇ ದಿನಗಳಲ್ಲಿ ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಕೇರಳದ ಯುವಕನೊಬ್ಬ ರೈಲು ಬರುವಾಗ ಹಳಿ ಮೇಲೆ ಹಾರಿದ್ದ. ಎರಡೂ ಘಟನೆಗಳಲ್ಲಿ ‘ನಮ್ಮ ಮೆಟ್ರೊ‘ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ಘಟನೆಗಳು ಸಂಭವಿಸಿದಾಗ ‘ಮೆಟ್ರೊ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಸಬೇಕು’ ಎಂಬ ಕೂಗು ಎದ್ದಿತ್ತು. ಗುರುವಾರ ಅತ್ತಿಗುಪ್ಪೆಯಲ್ಲಿ ನಡೆದ ಘಟನೆ ನಂತರ ಮತ್ತೆ ‘ಪಿಎಸ್‌ಡಿ‘ ಅಳವಡಿಕೆಯ ಚರ್ಚೆ ಆರಂಭವಾಗಿದೆ.

ಪಿಎಸ್‌ಡಿಗೆ ಒತ್ತಾಯ: ‘ಹಳಿಗೆ ಯಾರೂ ನುಗ್ಗದಂತೆ ಫ್ಲಾಟ್‌ಫಾರ್ಮ್‌ಗಳಲ್ಲಿ ಗ್ಲಾಸ್‌ ಡೋರ್‌ಗಳು ಇರುತ್ತವೆ. ರೈಲು ಬಂದು ನಿಂತ ಮೇಲೆ ಈ ಡೋರ್‌ಗಳು ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತವೆ. ಪ್ರಯಾಣಿಕರು ಇಳಿದು ಹತ್ತುವ ಪ್ರಕ್ರಿಯೆ ಮುಗಿದು ರೈಲಿನ ಬಾಗಿಲು ಮುಚ್ಚಿಕೊಳ್ಳುವ ಹೊತ್ತಿಗೆ ಗ್ಲಾಸ್‌ ಡೋರ್‌ಗಳೂ ಮುಚ್ಚಿಕೊಳ್ಳುತ್ತವೆ. ಪ್ಲಾಟ್‌ಫಾರಂ ಸ್ಕ್ರೀನ್‌ ಡೋರ್‌ ಎಂದು ಕರೆಯುವ ಈ ತಂತ್ರಜ್ಞಾನವು ಜಪಾನ್‌ ಸಹಿತ ಹಲವು ದೇಶಗಳಲ್ಲಿದೆ. ಚೆನ್ನೈ, ದೆಹಲಿ ಮತ್ತು ಮುಂಬೈನ ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ. ‘ನಮ್ಮ ಮೆಟ್ರೊ’ದಲ್ಲೂ ಈ ತಂತ್ರಜ್ಞಾನ ಬಳಸಬೇಕು’ ಎಂದು ಪ್ರಯಾಣಿಕ, ವಕೀಲ ರಘು ಕುಮಾರ್ ಆಗ್ರಹಿಸಿದರು.

‘ಪಿಎಸ್‌ಡಿ ತಂತ್ರಜ್ಞಾವನ್ನು ಆಯ್ದ ಮೆಟ್ರೊ ನಿಲ್ದಾಣಗಳಿಗೆ ಅಳವಡಿಸು ವುದರಿಂದ ಸಮಸ್ಯೆ ಬಗೆಹರಿಯು ವುದಿಲ್ಲ. ಎಲ್ಲ ನಿಲ್ದಾಣಗಳಲ್ಲೂ ಇದನ್ನು ಅನುಷ್ಠಾನಗೊಳಿಸಬೇಕು’ ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಸ್ಥಾಪಕ ರಾಜಕುಮಾರ್‌ ದುಗರ್ ಒತ್ತಾಯಿಸಿದರು.

2ನೇ ಪ್ರಕರಣ

ಅತ್ತಿಗುಪ್ಪೆಯಲ್ಲಿ ಗುರುವಾರ ವಿದ್ಯಾರ್ಥಿ ಧ್ರುವ್ ಠಕ್ಕರ್ (19) ಮೆಟ್ರೊ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಮೆಟ್ರೊ ಹಳಿಗೆ ಹಾರಿ ಜೀವ ಕಳೆದು ಕೊಂಡ ಎರಡನೇ ಪ್ರಕರಣವಾಗಿದೆ.

2012ರಲ್ಲಿ ಸೇಂಟ್ ಜೋಸೆಫ್‌ ಪಿಯು ಕಾಲೇಜಿನ ವಿದ್ಯಾರ್ಥಿ ವಿಷ್ಣು ಶರಣ್‌ (17) ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಲ್ಲಿ ರೈಲಿನಡಿಗೆ ಹಾರಿ ಜೀವ ಕಳೆದುಕೊಂಡಿದ್ದ. ಆಗ ‘ನಮ್ಮ ಮೆಟ್ರೊ’ ನೇರಳೆ ಮಾರ್ಗದ ಸೇವೆ ಆರಂಭವಾಗಿ ನಾಲ್ಕೂವರೆ ತಿಂಗಳಷ್ಟೇ ಆಗಿತ್ತು.

ಹೊಸದಾಗಿ ನಿರ್ಮಾಣವಾಗುವ ಭೂಗತ ನಿಲ್ದಾಣಗಳಲ್ಲಿ ಪಿಎಸ್‌ಡಿ

ನಿರ್ಮಾಣಗೊಳ್ಳುತ್ತಿರುವ ‘ನಮ್ಮ ಮೆಟ್ರೊ’ ಹಳದಿ ಮಾರ್ಗದ ಭೂಗತ ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹಳದಿ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ಬಳಿಯ ಕೋನಪ್ಪನ ಅಗ್ರಹಾರ ಬಳಿ ನಿರ್ಮಾಣಗೊಳ್ಳುತ್ತಿರುವ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌  ಸ್ಕ್ರೀನ್‌ ಡೋರ್‌ ಅಳವಡಿಸಲು ಮೊದಲು ನಿರ್ಧರಿಸಲಾಗಿತ್ತು. ಬಳಿಕ ಎಲ್ಲ ಭೂಗತ ನಿಲ್ದಾಣಗಳಿಗೆ ವಿಸ್ತರಿಸುವ ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.

ಈಗಾಗಲೇ ಕಾರ್ಯಾಚರಣೆಯಲ್ಲಿ ಇರುವ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಪಿಎಸ್‌ಡಿ ಅಳವಡಿಸುವುದು ಕಷ್ಟ. ಆದರೂ ಈ ಬಗ್ಗೆಯೂ ಮುಂದೆ ಚರ್ಚೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಸಂಚಾರ ಸ್ಥಗಿತ; ವಾಹನ ದಟ್ಟಣೆ

ಅತ್ತಿಗುಪ್ಪೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆಕೊಂಡಿದ್ದರಿಂದ ಮೆಟ್ರೊ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಇದರಿಂದ ದೀಪಾಂಜಲಿ ನಗರದಿಂದ ವಿಜಯನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ಒಮ್ಮೆಲೇ ವಾಹನದಟ್ಟಣೆ ಉಂಟಾಯಿತು.

ಮಧ್ಯಾಹ್ನ 2.10 ರಿಂದ 4 ಗಂಟೆಯವರೆಗೆ ವೈಟ್‌ಫೀಲ್ಡ್‌ನಿಂದ ಮಾಗಡಿ ರಸ್ತೆ ಮಾರ್ಗದಲ್ಲಿ (ನೇರಳೆ) ಮಾತ್ರ ರೈಲುಗಳು ಸಂಚರಿಸಿದವು. ಮಾಗಡಿ ರಸ್ತೆಯಿಂದ ಚಲ್ಲಘಟ್ಟದವರೆಗೆ ಈ ಸಮಯದಲ್ಲಿ ಮೆಟ್ರೊ ರೈಲು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಪರ್ಯಾಯ ವಾಹನಗಳನ್ನು ಅವಲಂಬಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT