ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮರಾಜ ರಸ್ತೆ: ಏಪ್ರಿಲ್‌ನಲ್ಲಿ ಸಂಚಾರಕ್ಕೆ ಭಾಗಶಃ ಮುಕ್ತ

Published 9 ಫೆಬ್ರುವರಿ 2024, 15:20 IST
Last Updated 9 ಫೆಬ್ರುವರಿ 2024, 15:20 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ಕಾಮಗಾರಿಗಾಗಿ ಐದು ವರ್ಷಗಳಿಂದ ಮುಚ್ಚಲಾಗಿರುವ ಕಾಮರಾಜ ರಸ್ತೆಯು ಏಪ್ರಿಲ್‌ನಲ್ಲಿ ವಾಹನ ಸಂಚಾರಕ್ಕೆ ಭಾಗಶಃ ಮುಕ್ತಗೊಳ್ಳಲಿದೆ.

ನಾಗವಾರ–ಕಾಳೇನ ಅಗ್ರಹಾರ ಮೆಟ್ರೊ ಗುಲಾಬಿ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ ಇಂಟರ್‌ಚೇಂಜ್ ಎಂ.ಜಿ. ರಸ್ತೆ ಮೆಟ್ರೊ ಭೂಗತ ನಿಲ್ದಾಣವನ್ನು ನಿರ್ಮಿಸಲು 2019ರಲ್ಲಿ ಕಾಮರಾಜ ರಸ್ತೆಯನ್ನು ಮುಚ್ಚಲಾಗಿತ್ತು. ಇದರಿಂದ ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಇತರ ಸ್ಥಳಗಳನ್ನು ತಲುಪಲು ವಾಹನ ಬಳಕೆದಾರರು ಸುತ್ತು ಹಾಕಿಕೊಂಡು ಬರಬೇಕಿತ್ತು. ಕಾಮರಾಜ ರಸ್ತೆ ಸಂಚಾರಕ್ಕೆ ತೆರೆದುಕೊಂಡರೆ ಈ ಸಮಸ್ಯೆ ತಪ್ಪಲಿದೆ. ಈಗ ಏಪ್ರಿಲ್‌ನಲ್ಲಿ ಈ ರಸ್ತೆಯ ಒಂದು ಬದಿಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.

ಸುರಂಗ ಮಾರ್ಗದ ಯಂತ್ರೋಪಕರಣಗಳ ಸಾಗಾಟಕ್ಕಾಗಿ ಇನ್ನೊಂದು ಬದಿಯ ರಸ್ತೆ ಅಗತ್ಯ ಇರುವುದರಿಂದ ಕಾಮರಾಜ ರಸ್ತೆ ಪೂರ್ಣವಾಗಿ ಮುಕ್ತವಾಗಲು ಮತ್ತಷ್ಟು ಸಮಯ ಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೂಗತ ನಿಲ್ದಾಣವು 4 ಪ್ರವೇಶ/ನಿರ್ಗಮನ ದ್ವಾರಗಳನ್ನು ಹೊಂದಿರುತ್ತದೆ. ಇದರಲ್ಲಿ ಒಂದು ಪ್ರವೇಶ/ನಿರ್ಗಮನ ದ್ವಾರವನ್ನು ಎಂ.ಜಿ. ರಸ್ತೆಯಲ್ಲಿ ಈಗಾಗಲೇ ಇರುವ ಎತ್ತರಿಸಿದ ನಿಲ್ದಾಣದೊಂದಿಗೆ ಸಂಪರ್ಕಿಸಲಾಗುತ್ತಿದೆ.‌

ಇದೇ ಮಾರ್ಗದಲ್ಲಿ ಜಯದೇವ ಆಸ್ಪತ್ರೆ ಬಳಿ 3 ಹಂತದ ರಸ್ತೆ ಮತ್ತು 2 ಹಂತಗಳ ಮೆಟ್ರೊ ರೈಲು ಮಾರ್ಗಗಳು, ಐದು ಹಂತದ ಎತ್ತರಿಸಿದ ನಿಲ್ದಾಣವನ್ನು ನಿರ್ಮಿಸಲಾಗಿದೆ.  ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿ ನೆಲದಡಿ ಮೆಟ್ರೊ ನಿಲ್ದಾಣವನ್ನು ನಿರ್ಮಿಸಲಾಗುತ್ತಿದ್ದು, ರೈಲು ನಿಲ್ದಾಣದೊಂದಿಗೆ ಪಾದಚಾರಿ ಮೇಲುಸೇತುವೆಯ ಮೂಲಕ ಸಂಪರ್ಕಿಸಲಾಗುತ್ತದೆ. ನಾಗವಾರದಲ್ಲಿ ಏರ್‌ಪೋರ್ಟ್ ಮೆಟ್ರೊ ಮಾರ್ಗದೊಂದಿಗೆ ಸಂಯೋಜನೆಗೊಳಿಸಲಾಗುತ್ತಿದೆ. 2025ರ ವೇಳೆಗೆ ಈ ಮಾರ್ಗ ಮೆಟ್ರೊ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT