ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸೂರು ತನಕ ಮೆಟ್ರೊ ರೈಲು: ಸರ್ಕಾರದ ಅನುಮೋದನೆ

ಬೊಮ್ಮಸಂದ್ರದಿಂದ ಹೊಸೂರಿಗೆ ಅಂದಾಜು 20.5 ಕಿಲೋ ಮೀಟರ್ ಉದ್ದದ ಮೆಟ್ರೊ ರೈಲು ಮಾರ್ಗ
Last Updated 9 ಜೂನ್ 2022, 16:25 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಮೆಟ್ರೊ 2ನೇ ಹಂತದ ಆರ್.ವಿ.ರಸ್ತೆ–ಬೊಮ್ಮಸಂದ್ರ(ರೀಚ್– 5) ಮಾರ್ಗವನ್ನು ಹೊಸೂರು ತನಕ ವಿಸ್ತರಿಸುವ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ.

‘ಬೊಮ್ಮಸಂದ್ರದಿಂದ ಹೊಸೂರು ನಡುವಿನ ಮೆಟ್ರೊ ರೈಲು ಮಾರ್ಗ ವಿಸ್ತರಿಸುವ ಸಂಬಂಧ ತಮಿಳುನಾಡು ಸರ್ಕಾರ ಅಧ್ಯಯನ ನಡೆಸಬಹುದು’ ಎಂದು ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ. ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವ ವಿಷಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮದ(ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗೆ ಮೇ 23ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದ್ದು, ಈ ಸಂಬಂಧ ತಮಿಳುನಾಡು ಸರ್ಕಾರದ ಜತೆ ಮಾತನಾಡುತ್ತೇನೆ’ ಎಂದು ತಮಿಳುನಾಡಿನ ಕೃಷ್ಣಗಿರಿ ಸಂಸದ ಡಾ. ಎ.ಚೆಲ್ಲಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೊಮ್ಮಸಂದ್ರದಿಂದ ಹೊಸೂರಿಗೆ 20.5 ಕಿಲೋ ಮೀಟರ್ ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣ ಆಗಬೇಕು ಎಂದು ಅಂದಾಜಿಸಲಾಗಿದೆ. ಅದರಲ್ಲಿ ಕರ್ನಾಟಕದ ವ್ಯಾಪ್ತಿಯಲ್ಲಿ 11.7 ಕಿಲೋ ಮೀಟರ್ ಇ‌ದೆ. ಉಳಿದ 8.8 ಕಿಲೋ ಮೀಟರ್‌ ಮಾರ್ಗರಾಜ್ಯದ ಗಡಿ ದಾಟಿ ನಿರ್ಮಾಣ ಆಗಬೇಕಿದೆ. 2017ರ ಮೆಟ್ರೊ ರೈಲು ನೀತಿ ಪ್ರಕಾರ ನೆರೆಯ ರಾಜ್ಯ ಅಧ್ಯಯನ ಕೈಗೊಳ್ಳುವುದು ಸೂಕ್ತ’ ಎಂದು ಅಂಜುಂ ಪರ್ವೇಜ್‌ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಯೋಜನೆಗೆ ತಗಲುವ ವೆಚ್ಚವನ್ನು ಎರಡೂ ಸರ್ಕಾರಗಳು ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಕಾರ್ಯಾಚರಣೆ ಸಂದರ್ಭದಲ್ಲೂ ಸಮನ್ವಯದ ಅಗತ್ಯವಿದೆ’ ಎಂದು ಅವರು ಹೇಳಿದ್ದಾರೆ.

‘ಚೆನ್ನೈ ಮೆಟ್ರೊ ರೈಲು ನಿಗಮದ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಬಿಎಂಆರ್‌ಸಿಎಲ್‌ ಮೂಲಕವೇ ಅಧ್ಯಯನ ನಡೆಸುವುದು ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬಿಎಂಆರ್‌ಸಿಎಲ್ ಮೂಲಕವೇ ಅಧ್ಯಯನ ನಡೆಸುವಂತೆ ಕೋರಿ ಕರ್ನಾಟಕದ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ಯೋಜನೆಗೆ ಅಗತ್ಯ ಮಂಜೂರಾತಿ ದೊರೆತ ಬಳಿಕ ಹಣಕಾಸಿನ ಸಮಸ್ಯೆಯೂ ಬಗೆಹರಿಯಲಿದೆ’ ಎಂದು ಚೆಲ್ಲಕುಮಾರ್ ಸ್ಪಷ್ಟಪಡಿಸಿದರು.

ಮೊದಲ ಹಂತದಲ್ಲಿ ಹೀಲಳಿಗೆ ತನಕ ಗುರುತಿಸಿರುವ ಉಪನಗರ ರೈಲು ಯೋಜನೆಯನ್ನು ಹೊಸೂರು ತನಕ ವಿಸ್ತರಿಸುವ ಉದ್ದೇಶವನ್ನೂ ಉಪನಗರ ರೈಲು ಯೋಜನೆ ಹೊಂದಿತ್ತು. ‘ಎರಡೂ ಯೋಜನೆ ಅನುಷ್ಠಾನಗೊಂಡರೆ ತೊಂದರೆ ಏನೂ ಇಲ್ಲ. ಚೆನ್ನೈನಲ್ಲಿ ರೈಲು ಮತ್ತು ಮೆಟ್ರೊ ರೈಲು ಮಾರ್ಗಗಳು ಒಟ್ಟಿಗೇ ಇವೆ. ಎರಡು ಮಾರ್ಗಗಳೂ ಜನರಿಗೆ ಮುಖ್ಯ ಆಗಲಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT