ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಂತರ್ಜಾಲದ ಯುಗದಲ್ಲಿ ಮನುಷ್ಯ ಒಂಟಿ: ಲೇಖಕಿ ನೇಮಿಚಂದ್ರ

Published 3 ಫೆಬ್ರುವರಿ 2024, 16:05 IST
Last Updated 3 ಫೆಬ್ರುವರಿ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ಇಡೀ ಜಗತ್ತು ಅಂತರ್ಜಾಲದಿಂದ ಆವೃತವಾಗಿದ್ದರೂ ಮನುಷ್ಯ ಒಂಟಿಯಾಗಿದ್ದಾನೆ. ಸಾಮಾಜಿಕ ಜಾಲತಾಣದ ಅತಿ ಬಳಕೆಯಿಂದ ಮನುಷ್ಯ ಸಂಬಂಧಗಳನ್ನೇ ಕಳೆದುಕೊಳ್ಳುತ್ತಿದ್ದಾನೆ’ ಎಂದು ಲೇಖಕಿ ನೇಮಿಚಂದ್ರ ಬೇಸರ ವ್ಯಕ್ತಪಡಿಸಿದರು.

ನವ ಕರ್ನಾಟಕ ಪ್ರಕಾಶನ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಚ್‌.ಎನ್. ಗೀತಾ ಅವರ ‘ದಾರಿ ದೀಪಗಳು’, ‘ಹಾದಿಯ ಹಣತೆಗಳು’ ಹಾಗೂ ಸಂತೋಷ್ ಅನಂತಪುರ ಅವರ ‘ಆಳ ನೀಳ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ಬೆರಳ ತುದಿಯಲ್ಲೇ ಜಗತ್ತಿನ ಮಾಹಿತಿಯನ್ನು ತಂದು ಇರಿಸಲಾಗುತ್ತಿದೆ. ಆದರೆ, ಮಾಹಿತಿ ಅದೆಷ್ಟೇ ಅಗಾಧವಾಗಿದ್ದರೂ ಅದು ಜ್ಞಾನವಾಗುವುದಿಲ್ಲ. ಜ್ಞಾನ ಸಿಕ್ಕಿದರೂ ಅದೊಂದೆ ನಮಗೆ ವಿವೇಕ ಮತ್ತು ವಿವೇಚನೆಯನ್ನು ಕಲಿಸುವುದಿಲ್ಲ. ‌ಅದೆಷ್ಟೇ ಜ್ಞಾನವನ್ನು ಸಂಗ್ರಹಿಸಿದರೂ ಅದರ ಅಲ್ಪ ಭಾಗವನ್ನಾದರೂ ನಾವು ಅಳವಡಿಸಿಕೊಳ್ಳದೆ ಇದ್ದರೆ ಆ ಜ್ಞಾನ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ’ ಎಂದು ಹೇಳಿದರು. 

ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ‘ಆಗಾಗ ಕತ್ತಲು ಕವಿಯುವ ನಮ್ಮ ಸಮಾಜಕ್ಕೆ ಸಾಹಿತ್ಯದ ದೀಪಗಳು ಬೇಕಾಗುತ್ತವೆ. ನಮ್ಮ ಕಾಲದ ಸಂದಿಗ್ಧಗಳನ್ನು ವ್ಯಕ್ತಿ ನೆಲೆಯಲ್ಲಿ, ಸಮಷ್ಟಿ ನೆಲೆಯಲ್ಲಿ ಹೇಗೆ ವಿವರಿಸಬೇಕೆಂಬ ಸವಾಲು ಲೇಖಕರಿಗೆ ಇದೆ. ಅಂಕಣ, ಕತೆ, ಕಾವ್ಯ, ಲೇಖನವೇ ಬೇರೆ, ಪ್ರಬಂಧವೇ ಬೇರೆ. ಪ್ರಬಂಧಕಾರ ಕತೆಗಾರನಾಗುವ ಅಪಾಯದಿಂದ ತಪ್ಪಿಸಬೇಕು. ಹಾಗೆಯೇ, ಲೇಖನ ಪ್ರಬಂಧವಾಗದಂತೆ ನೋಡಿಕೊಳ್ಳಬೇಕು’ ಎಂದರು. 

ನವ ಕರ್ನಾಟಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕ ಸಿದ್ದನಗೌಡ ಪಾಟೀಲ, ‘ಮೌಲ್ಯಗಳು ಪಲ್ಲಟಗೊಳ್ಳುತ್ತಿವೆ. ಒಂದು ಕಾಲದಲ್ಲಿ ಯಾವುದು ಕ್ರೌರ್ಯವೆಂದು ಕರೆಸಿಕೊಳ್ಳುತ್ತಿತ್ತೋ ಅದನ್ನು ಈಗ ಶೌರ್ಯವೆಂದು ಕರೆಯಲಾಗುತ್ತಿದೆ. ಯಾವುದನ್ನು ವಂಚನೆಯೆಂದು ಕರೆಯುತ್ತಿದ್ದೆವೋ ಅದನ್ನು ಚಾಣಾಕ್ಷತನವೆಂದು ಬಿಂಬಿಸಲಾಗುತ್ತಿದೆ. ವಿಜ್ಞಾನ– ತಂತ್ರಜ್ಞಾನವು ನಮ್ಮಲ್ಲಿ ವೈಚಾರಿಕತೆಯನ್ನು ತರಬೇಕಿತ್ತು. ಆದರೆ, ಇವುಗಳ ಮೂಲಕವೇ ಮೌಢ್ಯಗಳನ್ನು ತುಂಬಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. 

ಪತ್ರಕರ್ತ ಜಿ.ಎನ್. ಮೋಹನ್ ಅವರು ಕೃತಿಗಳ ಬಗ್ಗೆ ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT