ಕೆರೆ ಬಫರ್‌ ವಲಯದಲ್ಲಿ ವಸತಿ ಸಮುಚ್ಛಯ: ಎನ್‌ಜಿಟಿಯಿಂದ ನೋಟಿಸ್‌

7

ಕೆರೆ ಬಫರ್‌ ವಲಯದಲ್ಲಿ ವಸತಿ ಸಮುಚ್ಛಯ: ಎನ್‌ಜಿಟಿಯಿಂದ ನೋಟಿಸ್‌

Published:
Updated:

ನವದೆಹಲಿ: ಗೋದ್ರೇಜ್‌ ರಿಫ್ಲೆಕ್ಷನ್ಸ್‌ ಕಂಪೆನಿಯು ಬೆಂಗಳೂರಿನ ಕೈಕೊಂಡರಹಳ್ಳಿ ಕೆರೆಯ ಬಫರ್‌ ವಲಯ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ವಸತಿ ಸಮುಚ್ಛಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರು ವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೋಮವಾರ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

ಸ್ಥಳೀಯ ನಿವಾಸಿ ಎಚ್‌.ಪಿ. ರಾಜಣ್ಣ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಘುವೇಂದ್ರ ರಾಥೋಡ ನೇತೃತ್ವದ ಪೀಠವು, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕೆರೆ ಅಭಿವೃದ್ಧಿ ಪ್ರಾಧಿಕಾರ, ಬೆಸ್ಕಾಂ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರಗಳಿಗೂ ಪ್ರತಿಕ್ರಿಯೆ ನೀಡುವಂತೆ ಎರಡು ವಾರಗಳ ಗುಡುವು ವಿಧಿಸಿದೆ.

‘ಫಾರ್ವರ್ಡ್‌ ಫೌಂಡೇಷನ್‌ನ ಅರ್ಜಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಲಾದ ತೀರ್ಪಿನಲ್ಲಿ ಬಫರ್‌ ವಲಯದ ಕುರಿತು ಸ್ಪಷ್ಟಪಡಿಸಲಾಗಿದ್ದರೂ ಕೈಕೊಂಡರಹಳ್ಳಿ ಕೆರೆ ಮತ್ತು ರಾಜ ಕಾಲುವೆಗಳ ಬಫರ್‌ ವಲಯದಲ್ಲೇ 12 ಎಕರೆ ಪ್ರದೇಶದಲ್ಲಿ ವಸತಿ ಸಮುಚ್ಛಯ ನಿರ್ಮಿಸಲು ಅನುಮತಿ ನೀಡಿದ್ದು ಏಕೆ’ ಎಂದು ಹಸಿರುಪೀಠವು ವಿವಿಧ ಪ್ರಾಧಿಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.

ಗೋದ್ರೇಜ್‌ ರಿಫ್ಲೆಕ್ಷನ್ಸ್‌ನ ಅಕ್ರಮ ನಿರ್ಮಾಣ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಈ ಹಿಂದೆಯೇ ನೋಟಿಸ್‌ ಜಾರಿ ಮಾಡಿ ಸೂಚಿಸಿದ್ದರೂ ಕ್ರಮ ಕೈಗೊಳ್ಳದಿರುವುದಕ್ಕೆ ಭಾರಿ ಮೊತ್ತದ ದಂಡ ವಿಧಿಸಲಾಗುವುದು ಎಂದೂ ಪೀಠ ಎಚ್ಚರಿಕೆ ನೀಡಿತು.

ನಿಯಮ ಉಲ್ಲಂಘಿಸಿ 2,500 ಚದರ ಅಡಿ ಪ್ರದೇಶದಲ್ಲಿ ನಿರ್ಮಿಸಲಾ ಗಿರುವ ಎರಡು ಅಂತಸ್ತಿನ ಮಾದರಿ ಕಟ್ಟಡವನ್ನು ಕೆಡವುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಕಂಪೆನಿಗೆ ನೋಟಿಸ್‌ ಜಾರಿ ಮಾಡಿದೆ.

ಯೋಜನೆಗೆ ಅನುಮತಿ ನೀಡದಿದ್ದರೂ ಕಂಪೆನಿಯು ಜಾಹೀರಾತು ನೀಡುತ್ತ ಸಾರ್ವಜನಿಕರಿಂದ ಫ್ಲ್ಯಾಟ್‌ ಕಾದಿರಿಸಲು ಹಣ ಪಡೆಯುತ್ತಿದೆ ಎಂದು ಅರ್ಜಿದಾರರ ಪರ ವಕೀಲರಾದ ಕನ್ನಿಕಾ ಅಗ್ನಿಹೋತ್ರಿ ಹಸಿರುಪೀಠಕ್ಕೆ ತಿಳಿಸಿದರು.

ಬಿಬಿಎಂಪಿ ಕಟ್ಟಡ ನಿರ್ಮಾಣಕ್ಕೆ ಅನುಮತಿಯನ್ನೇ ನೀಡದಿದ್ದರೂ ನೀವು ನಿರಾಕ್ಷೇಪಣಾ ಪತ್ರ ನೀಡಿದ್ದೇಕೆ ಎಂದು ಬಿಡಿಎಯನ್ನು ಪ್ರಶ್ನಿಸಿದ ನ್ಯಾಯಮೂರ್ತಿ ರಾಠೋಡ್‌, ಮಾದರಿ ಕಟ್ಟಡವನ್ನು ನೆಲಸಮಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರಲ್ಲದೆ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್‌ 6ಕ್ಕೆ ನಿಗದಿಗೊಳಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !