ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಲಿಬಾರ್‌ನಲ್ಲಿ ಸತ್ತ ರೈತರ ವಿವರ ಇಲಾಖೆಯಲ್ಲೇ ಲಭ್ಯವಿಲ್ಲ

ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದರೆ ಪ್ರತಿ ಪೊಲೀಸ್‌ ಠಾಣೆಯಲ್ಲಿ ಮಾಹಿತಿ ಕೇಳಲು ಸಲಹೆ
Published 3 ಮಾರ್ಚ್ 2024, 19:42 IST
Last Updated 3 ಮಾರ್ಚ್ 2024, 19:42 IST
ಅಕ್ಷರ ಗಾತ್ರ

ಬೆಂಗಳೂರು: ಗೋಲಿಬಾರ್‌ನಿಂದ ಎಷ್ಟು ರೈತರು ಮೃತಪಟ್ಟಿದ್ದಾರೆ ಎಂಬ ಮಾಹಿತಿಯೇ ಪೊಲೀಸ್‌ ಇಲಾಖೆಯಲ್ಲಿ ಇಲ್ಲ. ರೈತ ಹೋರಾಟಗಾರರು ಮಾಹಿತಿ ಹಕ್ಕು ನಿಯಮದ ಅಡಿ ಅರ್ಜಿ ಸಲ್ಲಿಸಿದಾಗ ಈ ವಿಚಾರ ಬಹಿರಂಗಗೊಂಡಿದೆ.

ರಾಜ್ಯದಲ್ಲಿ ಈವರೆಗೆ ಪೊಲೀಸ್ ಗೋಲಿಬಾರ್‌ನಿಂದ ಮಡಿದ ರೈತರ ವಿವರವನ್ನು ಕಬ್ಬು ಬೆಲೆ ಮಂಡಳಿ ಮಾಜಿ ಸದಸ್ಯ ತೇಜಸ್ವಿ ವಿ. ಪಟೇಲ್‌ ಕೇಳಿದ್ದರು. ಯಾವ ಪೊಲೀಸ್ ಠಾಣೆ ವ್ಯಾಪ್ತಿ? ಯಾವ ವರ್ಷ? ರೈತನ ಹೆಸರು ಮತ್ತು ವಿಳಾಸ, ಬೀದಿಗಿಳಿದ ಕಾರಣ, ಸರ್ಕಾರ ಪರಿಹಾರ ನೀಡಿದೆಯೇ? ನೀಡಿದ್ದರೆ ಎಷ್ಟು ಎಂಬ ಮಾಹಿತಿಗಳನ್ನು ಕೇಳಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದ್ದರು.

ನಿಯಮಾನುಸಾರ ಕ್ರಮ ಕೈಗೊಳ್ಳಲು ಅಲ್ಲಿಂದ ಕಾನೂನು ಮತ್ತು ಸುವ್ಯವಸ್ಥೆ ಶಾಖೆಗೆ ಅರ್ಜಿ ವರ್ಗಾಯಿಸಲಾಗಿತ್ತು. ‘ನೀವು ಕೋರಿರುವ ಮಾಹಿತಿ ಲಭ್ಯ ಇರುವುದಿಲ್ಲ. ಸಂಬಂಧಪಟ್ಟ ಘಟಕಗಳಿಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದು’ ಎಂದು ಕಾನೂನು ಸುವ್ಯವಸ್ಥೆ ಶಾಖೆಯ ಸಹಾಯಕ ಆಡಳಿತಾಧಿಕಾರಿಯು ಅರ್ಜಿದಾರರಿಗೆ ಉತ್ತರಿಸಿದ್ದಾರೆ.

‘ಘಟಕಗಳಲ್ಲಿ ಮಾಹಿತಿ ಕೇಳುವುದು ಅಂದರೆ ಪ್ರತಿ ಪೊಲೀಸ್‌ ಠಾಣೆಗೂ ತೆರಳಿ ಅರ್ಜಿ ಸಲ್ಲಿಸಬೇಕು. ಅದು ಸುಲಭದ ಕೆಲಸವಲ್ಲ. ನ್ಯಾಯಬೆಲೆ ಅಂಗಡಿಗಳಲ್ಲಿ ಎಷ್ಟು ಪಡಿತರ ವಿತರಣೆಯಾಗಿದೆ ಎಂಬ ಮಾಹಿತಿ ಆಹಾರ ಇಲಾಖೆಯಲ್ಲಿ ಇರುತ್ತದೆ. ಅದೇ ರೀತಿ ಗೋಲಿಬಾರ್‌ ಸಹಿತ ಎಲ್ಲ ಮಾಹಿತಿ ಪೊಲೀಸ್ ಇಲಾಖೆಯಲ್ಲಿ ಇರಬೇಕು’ ಎಂದು ತೇಜಸ್ವಿ ವಿ. ಪಟೇಲ್ ಪ್ರತಿಕ್ರಿಯಿಸಿದ್ದಾರೆ.

‘ನೀರಿನ ತೆರಿಗೆಗೆ ಸಂಬಂಧಿಸಿದಂತೆ ನರಗುಂದ– ನವಲಗುಂದದಲ್ಲಿ 1980ರಲ್ಲಿ ರೈತರು ಪ್ರತಿಭಟನೆ ನಡೆಸಿದಾಗ ಪೊಲೀಸರು ಗೋಲಿಬಾರ್‌ ನಡೆಸಿದ್ದರು. ರೈತರಾದ ಈರಪ್ಪ ಕಡ್ಲಿಕೊಪ್ಪ, ಬಸಪ್ಪ ಲಕ್ಕುಂಡಿ ಅಗಳವಾಡಿ ಮೃತಪಟ್ಟಿದ್ದರು. ಗೊಬ್ಬರ ವಿತರಣೆ ವಿಳಂಬ ಆಗಿರುವುದನ್ನು ವಿರೋಧಿಸಿ ಬಾಡದಲ್ಲಿ ರೈತರು 1992 ರಲ್ಲಿ ಪ್ರತಿಭಟನೆ ನಡೆಸಿದಾಗ ಪೊಲೀಸರು ಗೋಲಿಬಾರ್‌ ಮಾಡಿದ್ದರಿಂದ ಕರಿಲಿಂಗಪ್ಪ, ನಾಗಲಿಂಗಾಚಾರ್‌ ಎಂಬ ರೈತರು ಮೃತಪಟ್ಟಿದ್ದರು. 1998ರಲ್ಲಿ ಶಿರಾ ಎಪಿಎಂಸಿಯಲ್ಲಿ ನಡೆದ ಶೇಂಗಾ ಹಗರಣಕ್ಕೆ ಸಂಬಂಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗುಂಡು ಹಾರಿಸಲಾಗಿತ್ತು. ಆರು ರೈತರು ಸಾವಿಗೀಡಾಗಿದ್ದರು. 2008 ರಲ್ಲಿ ಗೊಬ್ಬರ ಮತ್ತು ಬಿತ್ತನೆ ಬೀಜಕ್ಕಾಗಿ ರೈತರು ಪ್ರತಿಭಟನೆ ನಡೆಸಿದಾಗ ರೈತರ ಮೇಲೆ ಗೋಲಿಬಾರ್‌ ಮಾಡಲಾಗಿತ್ತು. ರೈತ ಸಿದ್ದಲಿಂಗಪ್ಪ ಅಸುನೀಗಿದ್ದರು. ಇವು ನೆನಪಿನಲ್ಲಿ ಇರುವಂಥದ್ದು. ಇದೇ ರೀತಿ ಇನ್ನೆಷ್ಟು ರೈತರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ ಎಂಬುದು ಗೊತ್ತಿಲ್ಲ. ಇಲಾಖೆಯಲ್ಲಿಯೂ ಮಾಹಿತಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‌‘ಗಲಭೆಯಲ್ಲಿ ಸತ್ತರೆ ₹ 25 ಲಕ್ಷ !; ರೈತರಿಗಿಲ್ಲ’

ಕೋಮುಗಲಭೆಯಲ್ಲಿ ಶಿವಮೊಗ್ಗ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ಮೃತಪಟ್ಟವರಿಗೆ ಹಿಂದಿನ ಸರ್ಕಾರ ತಲಾ ₹ 25 ಲಕ್ಷ ಪರಿಹಾರ ನೀಡಿತ್ತು. ಆ ಸರ್ಕಾರ ಪರಿಹಾರ ನೀಡದೇ ಬಿಟ್ಟಿದ್ದವರಿಗೆ ಈಗಿನ ಸರ್ಕಾರ ನೀಡಿತ್ತು. ಆದರೆ ಹೋರಾಟದಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ನೀಡಬೇಕಿದ್ದರೆ ಸರ್ಕಾರಗಳು ಹಿಂದೆ ಮುಂದೆ ನೋಡುತ್ತವೆ. ನ್ಯಾಯಾಂಗ ತನಿಖೆ ಸಹಿತ ಅನೇಕ ಕಾರಣಗಳನ್ನು ಒಡ್ಡುತ್ತಾ ಮುಂದಕ್ಕೆ ಹಾಕುತ್ತವೆ. ಗುಂಡಿಗೆ ಬಲಿಯಾದ ರೈತರ ಕುಟುಂಬಗಳ ಈಗಿನ ಸ್ಥಿತಿ ಹೇಗಿದೆ? ಅವರಿಗೆ ಪರಿಹಾರ ಎಷ್ಟು ಸಿಕ್ಕಿದೆ ಎಂದು ತಿಳಿಯಲು ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದ್ದೆ. ರೈತರ ಕುಟುಂಬಗಳ ವಿಳಾಸ ಸಿಕ್ಕಿದ್ದರೆ ಆ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಉದ್ದೇಶ ಕೂಡ ಇತ್ತು. ಆದರೆ ಮಾಹಿತಿ ಇಲ್ಲ ಎಂದು ಪೊಲೀಸ್‌ ಇಲಾಖೆ ಕೈತೊಳೆದುಕೊಂಡಿದೆ ಎಂದು ರೈತ ಹೋರಾಟಗಾರರೂ ಆಗಿರುವ ತೇಜಸ್ವಿ ವಿ. ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT