ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆ | ಟೆಂಡರ್‌ ತರಾತುರಿಗೆ ತಕರಾರು

ಅಂದಾಜು ₹ 8,005 ಕೋಟಿ ವೆಚ್ಚದ ‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆ
ವಿ.ಎಸ್‌. ಸುಬ್ರಹ್ಮಣ್ಯ
Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ₹8,005 ಕೋಟಿ ವೆಚ್ಚದ ‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆಗೆ ಕರ್ನಾಟಕ ವಿದ್ಯುತ್‌ ನಿಗಮವು (ಕೆಪಿಸಿ) ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ದೊರಕುವ ಮುನ್ನವೇ ತರಾತುರಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಸುತ್ತಿರುವುದು ತಕರಾರಿಗೆ ಕಾರಣವಾಗಿದೆ.

ವಿದ್ಯುತ್‌ ಉತ್ಪಾದನೆಗೆ ಬಳಸಲಾದ ನೀರನ್ನು ಮತ್ತೆ ಮತ್ತೆ ಪಂಪ್‌ಗಳ ಮೂಲಕ ಹಿಂದಕ್ಕೆ ಕೊಂಡೊಯ್ದು, ತಲಾ 250 ಮೆಗಾವಾಟ್‌ ಸಾಮರ್ಥ್ಯದ ಎಂಟು ಜಲ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಬಳಸುವ ಯೋಜನೆ ಇದು. ಒಟ್ಟು 2,000 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆಗೆ ಯೋಜನೆ ರೂಪಿಸಲಾಗಿದೆ. ದೇಶದ ಅತಿದೊಡ್ಡ ‘ಪಂಪ್ಡ್‌ ಸ್ಟೋರೇಜ್‌’ ವಿದ್ಯುತ್‌ ಉತ್ಪಾದನಾ ಘಟಕವಾಗಲಿರುವ ಈ ಯೋಜನೆಗೆ ಕೇವಲ 21 ದಿನಗಳ ಅಲ್ಪಾವಧಿಯ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ.

ಇದು ಬೃಹತ್‌ ಪ್ರಮಾಣದ ಸಿವಿಲ್‌ ಮತ್ತು ಎಲೆಕ್ಟ್ರಿಕಲ್‌ ಕಾಮಗಾರಿಗಳನ್ನು ಒಳಗೊಂಡಿರುವ ಯೋಜನೆ. ಇದೇ ಮಾದರಿಯ ಯೋಜನೆಗಳ ಟೆಂಡರ್‌ ಪ್ರಕ್ರಿಯೆಗಳಿಗೆ ದೇಶದ ಬೇರೆ ರಾಜ್ಯಗಳಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು 100ರಿಂದ 200 ದಿನಗಳಿಗೂ ಹೆಚ್ಚು ಕಾಲಾವಕಾಶ ನೀಡಿದ ಉದಾಹರಣೆಗಳಿವೆ. ₹2 ಕೋಟಿಗಿಂತ ಹೆಚ್ಚು ವೆಚ್ಚದ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆಗಳಲ್ಲಿ ಬಿಡ್‌ ಸಲ್ಲಿಕೆಗೆ ಕನಿಷ್ಠ 30 ದಿನ ಕಾಲಾವಕಾಶ ನೀಡಬೇಕು ಎಂಬುದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳ ಸೆಕ್ಷನ್‌ 17ರಲ್ಲಿದೆ.

ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರದ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ₹4,862.89 ಕೋಟಿ ವೆಚ್ಚದ ‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆಯ ಪ್ರಸ್ತಾವವನ್ನು ಸಿದ್ಧಪಡಿಸಲಾಗಿತ್ತು. 2019ರ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಒಪ್ಪಿಗೆ ನೀಡಲಾಗಿತ್ತು.

ನಾಲ್ಕೂವರೆ ವರ್ಷ ನನೆಗುದಿಗೆ ಬಿದ್ದಿದ್ದ ಯೋಜನೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪುನಃ ಚುರುಕು ಪಡೆದಿದೆ. ಮೂಲ ಡಿಪಿಆರ್‌ಗೆ ಹೋಲಿಸಿದರೆ, ಈಗ ಈ ಕಾಮಗಾರಿಯ ಯೋಜನಾ ವೆಚ್ಚ ದುಪ್ಪಟ್ಟಿಗೆ
ಹತ್ತಿರವಾ‌ಗುವಂತೆ ಆಗಿದೆ.

ಪಶ್ಚಿಮ ಘಟ್ಟ ಮತ್ತು ಶರಾವತಿ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಹಾಗೂ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಇಲ್ಲದೆ ಕಾಮಗಾರಿ ಆರಂಭಿಸಲಾಗದು. ಯೋಜನೆಗೆ ಅಗತ್ಯವಿರುವ ಜಮೀನುಗಳ ಸ್ವಾಧೀನ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ. ಕಡ್ಡಾಯವಾಗಿ ಬೇಕಿರುವ ಅನುಮತಿ ಮತ್ತು ಭೂಸ್ವಾಧೀನದ ಕೊರತೆಯ ಮಧ್ಯೆಯೇ ಟೆಂಡರ್‌ ಪ್ರಕ್ರಿಯೆಯು ಶರವೇಗದಲ್ಲಿ ನಡೆಯುತ್ತಿದೆ.

ಅಸಲಿಗೆ ಸಿಕ್ಕಿದ್ದು ನಾಲ್ಕೇ ದಿನ: ‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆ ಕಾಮಗಾರಿಗಳಿಗೆ ಗುತ್ತಿಗೆದಾರರಿಂದ ಬಿಡ್‌ ಆಹ್ವಾನಿಸಿ ಫೆಬ್ರುವರಿ 2ರಂದು ಟೆಂಡರ್‌ ಪ್ರಕಟಿಸಲಾಗಿದೆ. ಆಸಕ್ತ ಗುತ್ತಿಗೆದಾರರು, ಯೋಜನೆಗೆ ಸಂಬಂಧಿಸಿದ ಸ್ಪಷ್ಟನೆಗಳನ್ನು ಕೇಳಲು ಫೆ. 9ರವರೆಗೂ ಅವಧಿ ಇತ್ತು. ಸ್ಪಷ್ಟನೆ ಬಯಸಿ 250ಕ್ಕೂ ಕೋರಿಕೆಗಳು ಸಲ್ಲಿಕೆಯಾಗಿದ್ದವು. ಫೆ.17ರಂದು ಕೆಪಿಸಿ ಸ್ಪಷ್ಟನೆಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು.

ಫೆ.21ರಂದು ಬಿಡ್‌ ಸಲ್ಲಿಕೆಗೆ ಕೊನೆಯ ದಿನ. ಕೆಪಿಸಿಯು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆಗಳನ್ನು ಪ್ರಕಟಿಸುವವರೆಗೂ ಗುತ್ತಿಗೆದಾರರು ಬಿಡ್‌ ಸಲ್ಲಿಕೆಯ ನಿರ್ಧಾರಕ್ಕೆ ಬರಲು ಅಸಾಧ್ಯವಾಗಿತ್ತು. ಇದರಿಂದಾಗಿ ಕೊನೆಯ ನಾಲ್ಕು ದಿನಗಳಷ್ಟೇ ಬಿಡ್‌ ಸಲ್ಲಿಕೆಗೆ ಸಿಕ್ಕಿದೆ.

ತರಾತುರಿಯಲ್ಲಿ ಟೆಂಡರ್‌ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯೆ ಪಡೆಯಲು ಇಂಧನ ಸಚಿವ ಕೆ.ಜೆ. ಜಾರ್ಜ್‌ ಸಂಪರ್ಕಕ್ಕೆ ಲಭ್ಯವಾಗಲಿಲ್ಲ. ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ ಅವರು, ದೂರವಾಣಿ ಕರೆಗಳಿಗೆ ಉತ್ತರಿಸಲಿಲ್ಲ. ವಾಟ್ಸ್‌ ಆ್ಯಪ್‌ ಮೂಲಕ ಕಳುಹಿಸಿದ ಪ್ರಶ್ನೆಗಳಿಗೂ ಉತ್ತರ ನೀಡಲಿಲ್ಲ.

ಬಿಡ್‌ ತೆರೆಯದಂತೆ ಮಧ್ಯಂತರ ಆದೇಶ

‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆಯ ಟೆಂಡರ್‌ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸುತ್ತಿ
ರುವುದನ್ನು ಪ್ರಶ್ನಿಸಿ ನಿರ್ಮಾಣ ಕಾಮಗಾರಿಗಳಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ಎಲ್‌ ಆ್ಯಂಡ್‌ ಟಿ ಕಂಪನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮುಂದಿನ ನಿರ್ದೇಶನದ
ವರೆಗೆ ಬಿಡ್‌ ದಾಖಲೆ ತೆರೆಯದಂತೆ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

ಯೋಜನೆಯಲ್ಲಿ ಏನಿದೆ?

‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆಯು ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿರುವ ಶಿವಮೊಗ್ಗ ಜಿಲ್ಲೆಯ ತಲಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳ ಮಧ್ಯ ಭಾಗದಲ್ಲಿ ಅನುಷ್ಠಾನಕ್ಕೆ ತರುವ ಪ್ರಸ್ತಾವವಿದೆ. ಇದಕ್ಕಾಗಿ ಭೂಗರ್ಭದೊಳಗೆ ಹಲವು ಕಿ.ಮೀ. ಉದ್ದದ ಸುರಂಗ ಕೊರೆದು 250 ಮೆಗಾವಾಟ್‌ ಸಾಮರ್ಥ್ಯದ ಎಂಟು ವಿದ್ಯುತ್‌ ಉತ್ಪಾದನಾ ಘಟಕಗಳನ್ನು ನಿರ್ಮಿಸಲಾಗುತ್ತದೆ.

ಶೇ 95ರಷ್ಟು ನಿರ್ಮಾಣ ಕಾಮಗಾರಿಗಳು ರಕ್ಷಿತಾರಣ್ಯ ವ್ಯಾಪ್ತಿಯ ಭೂಗರ್ಭದಲ್ಲಿ ನಡೆಯಲಿವೆ. ವಿನ್ಯಾಸ, ಎಂಜಿನಿಯರಿಂಗ್‌, ನೀರು ಪಂಪಿಂಗ್‌ ವ್ಯವಸ್ಥೆ, ವಿದ್ಯುತ್‌ ಉತ್ಪಾದನಾ ಸ್ಥಾವರಗಳ ನಿರ್ಮಾಣ ಸೇರಿ ಎಲ್ಲ ಕಾಮಗಾರಿಗಳಿಗೂ ಒಂದೇ ಟೆಂಡರ್‌ ಆಹ್ವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT