ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಗುಣಮಟ್ಟದ ಸುಧಾರಣೆಗೆ ಕ್ರಮ: ತರಗತಿಗಳಲ್ಲೇ ತೆರೆದ ಪುಸ್ತಕ ಪರೀಕ್ಷೆ

ವಿದ್ಯಾರ್ಥಿಗಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಲು ವಿನೂತನ ಪ್ರಯೋಗ
Published 30 ಮೇ 2024, 23:06 IST
Last Updated 30 ಮೇ 2024, 23:06 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ನಂತರ ಶಿಕ್ಷಣ ಗುಣಮಟ್ಟದ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿರುವ ಶಾಲಾ ಶಿಕ್ಷಣ ಇಲಾಖೆ, ತರಗತಿಯಲ್ಲೇ ತೆರೆದ ಪುಸ್ತಕ ಪರೀಕ್ಷೆ ನಡೆಸುವ ಮೂಲಕ ಮಕ್ಕಳಲ್ಲಿ ಪಠ್ಯ ಪುಸ್ತಕ ಓದುವ ಹವ್ಯಾಸ ಬೆಳೆಸುವಂತೆ ಸೂಚಿಸಿದೆ.

ಶಿಕ್ಷಕರು ಪ್ರತಿ ವಿಷಯದಲ್ಲೂ 25 ಅಂಕಗಳಿಗೆ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಕೊಂಡು, ನಿರ್ದಿಷ್ಟ ಸಮಯ ಮಿತಿಯ ಒಳಗೆ ಕಿರು ಪರೀಕ್ಷೆಗಳನ್ನು ನಡೆಸಬೇಕು. ಉತ್ತರ ಬರೆಯಲು ಪುಸ್ತಕಗಳನ್ನು ನೀಡಬೇಕು. ಮಕ್ಕಳು ಉತ್ತರಕ್ಕಾಗಿ ಪುಸ್ತಕದ ‍ಪುಟಗಳನ್ನು ತಿರುವಿಹಾಕುವುದರಿಂದ ಓದುವ ಹವ್ಯಾಸ ರೂಢಿಯಾಗುತ್ತದೆ. ಪಠ್ಯಪುಸ್ತಕದ ಆವಶ್ಯಕತೆಯ ಅರಿವು ಮೂಡುತ್ತದೆ ಎಂದು 2024–25ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಉಲ್ಲೇಖಿಸಲಾಗಿದೆ.

ಪಾಠ ಮಾಡುವಾಗಲೇ ಶಿಕ್ಷಕರು ಬೋಧನಾ ಅವಧಿಯ ಕೊನೆಯಲ್ಲಿ ಪ್ರಶ್ನೆಗಳನ್ನು ನೀಡಬೇಕು. ಅವುಗಳಿಗೆ ಸ್ಥಳದಲ್ಲೇ ಉತ್ತರ ಬರೆಯಿಸಬೇಕು. ಉತ್ತರದ ಹಾಳೆಗಳನ್ನು ವಿದ್ಯಾರ್ಥಿಗಳೇ ಪರಸ್ಪರ ವಿನಿಮಯ ಮಾಡಿಕೊಂಡು ಮೌಲ್ಯಮಾಪನ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ತಾವು ಮಾಡಿದ ತಪ್ಪುಗಳ ಅರಿವು ಮೂಡುವುದರ ಜತೆಗೆ, ಮೌಲ್ಯಾಂಕನದ ಅನುಭವವೂ ಆಗುತ್ತದೆ ಎಂದು ವಿವರಿಸಲಾಗಿದೆ.

ಇದುವರೆಗೂ ಇಂತಹ ಪ್ರಯೋಗಗಳನ್ನು ವಿಜ್ಞಾನದ ವಿದ್ಯಾರ್ಥಿಗಳಿಗೆ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಮಾತ್ರ ಮಾಡಲಾಗುತ್ತಿತ್ತು. ಈ ವರ್ಷದಿಂದ ಎಂಟು, ಒಂಬತ್ತನೇ ತರಗತಿ ಹಾಗೂ ಎಲ್ಲ ವಿಷಯಗಳಲ್ಲೂ ಅನುಸರಿಸಬೇಕು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದ ಆಧಾರದಲ್ಲಿ ಆರು ಗುಂಪುಗಳಾಗಿ ವಿಂಗಡಿಸಿ, ಕಡಿಮೆ ಕಲಿಕಾ ಸಮರ್ಥ್ಯದ ಮಕ್ಕಳಿಗೆ ಹೆಚ್ಚುವರಿ ಅವಧಿಯ ಬೋಧನೆ, ಪ್ರತ್ಯೇಕ ಕಲಿಕಾ ಕೌಶಲಗಳ ಮೂಲಕ ಅವರನ್ನು ಇತರೆ ವಿದ್ಯಾರ್ಥಿಗಳಿಗೆ ಸರಿಸಮನಾಗಿ ಸಿದ್ಧಗೊಳಿಸಲು ಶಿಕ್ಷಕರು ಶ್ರಮವಹಿಸ ಬೇಕು ಎಂದು ಹೇಳಲಾಗಿದೆ.

ತಾಯಂದಿರ ಜತೆ ಚರ್ಚೆ: ಮಕ್ಕಳ ಕಲಿಕಾ ಸಾಮರ್ಥ್ಯ, ಓದಿನ ಪ್ರಗತಿ ಕುರಿತು ವರ್ಷಕ್ಕೆ ನಾಲ್ಕು ಬಾರಿ ವಿದ್ಯಾರ್ಥಿಗಳ ತಾಯಂದಿರು ಅಥವಾ ಪೋಷಕರ ಜತೆ ಚರ್ಚಿಸಬೇಕು. ಮನೆಯಲ್ಲಿ ಓದಿಗೆ ಪೂರಕವಾದ ವ್ಯವಸ್ಥೆ ಮಾಡಿಕೊಡಬೇಕು. ಮಕ್ಕಳ ಕಲಿಕೆಯ ಮೇಲೆ ನಿತ್ಯವೂ ನಿಗಾ ವಹಿಸಲು ಸಲಹೆ ನೀಡಬೇಕು. ಸಮೀಪದ ಶಾಲೆಯ ಶಿಕ್ಷಕರಿಂದ ಇತರೆ ಶಾಲೆಗಳ ಮಕ್ಕಳಿಗೆ ನಿಯಮಿತವಾಗಿ ವಿಶೇಷ ತರಗತಿಗಳನ್ನು ಆಯೋಜಿಸಬೇಕು. ಮೇಲಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಣದ ಪ್ರಗತಿ ವೀಕ್ಷಿಸಬೇಕು ಎಂದೂ ಸೂಚಿಸಲಾಗಿದೆ. 

ಶಾಲಾ ಪ್ರಾರಂಭೋತ್ಸವ ಇಂದು

ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಶುಕ್ರವಾರ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದ್ದು, ಮಧ್ಯಾಹ್ನದ ಬಿಸಿಯೂಟಕ್ಕೆ ಸಿಹಿ ನೀಡಲಾಗುತ್ತಿದೆ.

ಶಾಲೆಗಳನ್ನು ಬಾಳೆಕಂದು, ತಳಿರು ತೋರಣಗಳಿಂದ ಶೃಂಗರಿಸಲಾಗಿದೆ. ಅಂಗಳದಲ್ಲಿ ರಂಗೋಲಿ ಬಿಡಿಸಿ ಹಬ್ಬದ ವಾತಾವರಣ ನಿರ್ಮಿಸಲಾಗಿದೆ. ಶಾಲೆಗೆ ಬರುವ ಮಕ್ಕಳಿಗೆ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತಿದೆ. ಬಾರದ ಮಕ್ಕಳನ್ನು ಅವರ ಮನೆಗಳಿಗೆ ತೆರಳಿ ಕರೆತರಲು ಶಿಕ್ಷಕರ ತಂಡಗಳು ಸಜ್ಜಾಗಿವೆ.

ಶೂ ಖರೀದಿಗೆ ₹121 ಕೋಟಿ ಬಿಡುಗಡೆ:  ಶೂ ಖರೀದಿಸಲು ₹121 ಕೋಟಿ ಬಿಡುಗಡೆ ಮಾಡಲಾಗಿದೆ. ಪ್ರತಿ ವಿದ್ಯಾರ್ಥಿಗಳಿಗೆ ಒಂದು ಜೊತೆ ಕಪ್ಪು ಬಣ್ಣದ ಶೂ, ಎರಡು ಜೊತೆ ಸಾಕ್ಸ್‌ ನೀಡಲಾಗುತ್ತದೆ. ಆಯಾ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಮುಖ್ಯ ಶಿಕ್ಷಕರನ್ನು ಒಳಗೊಂಡ ಐವರ ಸಮಿತಿಗೆ ಶೂ ಖರೀದಿಯ ಹೊಣೆಯನ್ನು ನೀಡಲಾಗಿದೆ.

ಒಂದರಿಂದ ಐದನೇ ತರಗತಿ ಮಕ್ಕಳಿಗೆ ತಲಾ ₹265, ಆರರಿಂದ ಎಂಟನೇ ತರಗತಿ ₹295 ಹಾಗೂ ಒಂಬತ್ತರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ₹325 ನಿಗದಿ ಮಾಡಲಾಗಿದೆ.

ತೆರೆದ ಪುಸ್ತಕ ಪರೀಕ್ಷೆ ತರಗತಿ ಗಳ ಒಳಗಿನ ಕಿರು ಪರೀಕ್ಷೆಗಳಿಗೆ ಸೀಮಿತ. ಎಸ್‌ಎಸ್‌ಎಲ್‌ಸಿ ಸೇರಿ ಯಾವ ಮುಖ್ಯ ಪರೀಕ್ಷೆಗೂ ಅನ್ವಯವಾಗುವುದಿಲ್ಲ.
ರಿತೇಶ್‌ಕುಮಾರ್ ಸಿಂಗ್ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT