ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಂದು ಮತವೂ ಉತ್ತಮ ಪ್ರಜಾಪ್ರಭುತ್ವದ ಉಜ್ವಲ ಭವಿಷ್ಯ: ರಮೇಶ್‌ ಅರವಿಂದ್‌

ನಮ್ಮ ನಡೆ ಮತಗಟ್ಟೆಯ ಕಡೆ
Published 15 ಏಪ್ರಿಲ್ 2024, 15:58 IST
Last Updated 15 ಏಪ್ರಿಲ್ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ‘ಒಂದು ಇಟ್ಟಿಗೆಯಿಂದ ಕಟ್ಟಡ ಕಟ್ಟಲು ಸಾಧ್ಯವಿಲ್ಲ. ಸಾವಿರಾರು ಇಟ್ಟಿಗೆಗಳು ಸೇರಿ ಕಟ್ಟಡವಾಗುತ್ತದೆ. ಅದೇ ರೀತಿ ಪ್ರತಿಯೊಬ್ಬ ಮತದಾರನೂ ಒಂದೊಂದು‌ ಇಟ್ಟಿಗೆಯ ಹಾಗೆ. ಎಲ್ಲರೂ ಒಟ್ಟಾಗಿ ಸೇರಿದರೆ ಮಾತ್ರ ಉತ್ತಮ ಪ್ರಜಾಪ್ರಭುತ್ವವನ್ನು ನಿರ್ಮಿಸಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ’ ಎಂದು ಚುನಾವಣಾ ರಾಯಭಾರಿ, ನಟ ರಮೇಶ್ ಅರವಿಂದ್ ಹೇಳಿದರು.

ಚುನಾವಣಾ ಆಯೋಗ, ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ‘ನಮ್ಮ ನಡೆ ಮತಗಟ್ಟೆಯ ಕಡೆ’ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ಅವರು ಮಾತನಾಡಿದರು.

‘ನಿಮ್ಮಲ್ಲರ ಕನಸು ಈಡೇರಬೇಕಾದರೆ ಮತದಾನ ದಿನವಾದ ಏಪ್ರಿಲ್ 26ರಂದು ನೀವೆಲ್ಲರೂ ಒಟ್ಟಾಗಿ ಸೇರಿ, ನಿಮ್ಮ ‘ಡ್ರೀಮ್ ಟೀಮ್’ ಕಟ್ಟಬಹುದು. ಆದ್ದರಿಂದ ನಿಮ್ಮ ಸ್ವವಿವೇಚನೆಯಿಂದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ’ ಎಂದು ಕರೆ ನೀಡಿದರು.

‘ನೀವು ಮಾಡುವ ಆಯ್ಕೆ ಸರಿಯಾಗಿದ್ದರೆ ಯಶಸ್ಸು ತಾನಾಗಿಯೇ ಬರಲಿದೆ. ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿ ಅಲ್ಲ, ನಿಮ್ಮ ಒಂದು ಬೆರಳಲ್ಲಿದ್ದು, ಎಲ್ಲರೂ ಮತದಾನ ಮಾಡಬೇಕು’ ಎಂದು ಪ್ರೇರೇಪಿಸಿದರು.

‘ಪ್ರತಿ ಬಾರಿಯ ಚುನಾವಣೆಯಲ್ಲೂ ಕಡಿಮೆ ಮತದಾನವಾಗುತ್ತದೆ. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ವ್ಯವಸ್ಥೆಗಳು ಇರಲಿದ್ದು, ಈ ಬಾರಿ ಹೆಚ್ಚು ಮತದಾನವಾಗಬೇಕು. ಎಲ್ಲರೂ ಒಟ್ಟಾಗಿ, ಇತರರನ್ನೂ ಪ್ರೇರೇಪಿಸಿ ತಪ್ಪದೆ ಮತ ಚಲಾಯಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಹೇಳಿದರು.

‘ನಿಮ್ಮ ಅಭ್ಯರ್ಥಿಯನ್ನು ತಿಳಿದುಕೊಳ್ಳಿ(KYC-ECI)’ ಎಂಬ ತಂತ್ರಾಂಶದಲ್ಲಿ‌ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲಾ ಅಭ್ಯರ್ಥಿಗಳ‌ ಮಾಹಿತಿ ಲಭ್ಯ. ತಾವೆಲ್ಲರೂ ತಂತ್ರಾಂಶವನ್ನು ಡೌನ್ ಲೋಡ್ ಮಾಡಿಕೊಂಡು, ಮಾಹಿತಿ ಅರಿತು ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು’ ಎಂದರು.

2000ಕ್ಕೂ ವಿದ್ಯಾರ್ಥಿಗಳು ಭಾಗಿ: ‘ನಮ್ಮ ನಡೆ ಮತಗಟ್ಟೆಯ ಕಡೆ ಜಾಗೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯ, ಮಹಾರಾಣಿ ಕಾಲೇಜು, ನೃಪತುಂಗಾ ವಿಶ್ವವಿದ್ಯಾನಿಲಯ, ಆರ್.ವಿ ಕಾಲೇಜು, ಎಸ್.ಜೆ.ಆರ್.ಸಿ ಕಾಲೇಜುಗಳಿಂದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ವೇಳೆ ಎಲ್ಲಾ ವಿದ್ಯಾರ್ಥಿಗಳು ಮತದಾನ ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗೆ ಚುನಾವಣಾ ಅಧಿಕಾರಿಗಳು ಉತ್ತರಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಕಾಂತರಾಜು, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲಿಂಗರಾಜು ಗಾಂಧಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್, ಜಿಲ್ಲಾ ಸ್ವೀಪ್‌ ಸಮಿತಿ‌ ನೋಡಲ್ ಅಧಿಕಾರಿ ಪ್ರತಿಭಾ, ಬೆಂಗಳೂರು‌ ಕೇಂದ್ರ ಸ್ವೀಪ್ ನೋಡಲ್ ಅಧಿಕಾರಿ ರಮಾಮಣಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಪ್ರಶ್ನೆಗಳು ಹೀಗಿದ್ದವು.... * ಎಲ್ಲರಿಗೂ ಮತದಾನ ಕಡ್ಡಾಯವೆಂದು ಯಾಕೆ ಮಾಡಿಲ್ಲ ? * ಉತ್ತಮ ಅಭ್ಯರ್ಥಿ ಎಂದರೆ ಯಾರು ನಾವು ಹೇಗೆ ಆಯ್ಕೆ‌ ಮಾಡಬೇಕು ? * ಗುಮಾಸ್ತನಾಗಬೇಕಾದರೂ ವಿದ್ಯಾರ್ಹತೆಯ ಅಗತ್ಯವಿರುತ್ತದೆ. ಆದರೆ ರಾಜಕೀಯ ಪ್ರತಿನಿಧಿಗಳಿಗೆ ಯಾಕೆ ಆ ನಿಯಮವಿಲ್ಲ ? * ನೋಟಾದಿಂದ ಏನು ಪ್ರಯೋಜನವಿದೆ ? * ಇವಿಎಂ ಯಂತ್ರವನ್ನು ನಾವು ಎಷ್ಟು ಬಾರಿ ಒತ್ತಬಹುದು ? * ಮತದಾರರ ಗುರುತಿನ ಚೀಟಿಯಲ್ಲಿ ಬರುವ ತಪ್ಪುಗಳನ್ನು ತಿದ್ದಿಕೊಳ್ಳುವುದು ಹೇಗೆ ? * ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಗುರುತಿನ ಚೀಟಿ ಇಲ್ಲದಿದ್ದಲ್ಲಿ ಬೇರೆ ದಾಖಲಾತಿಗಳ‌ ಮೂಲಕವೂ ಮತದಾನ ಚಲಾಯಿಸಬಹುದೇ ? * ಮತದಾನದ ದಿನ ಪ್ರವಾಸಿ ತಾಣಗಳು ಮಾಲ್‌ಗಳನ್ನು ಬಂದ್ ಮಾಡಲು ಸಾಧ್ಯವಿಲ್ಲವೇ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT