ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಮಾನಸಿಕ ಕಿರಿಕಿರಿಗೆ ನಿಮ್ಹಾನ್ಸ್‌ನ ತಜ್ಞ ಡಾ.ಬಿ.ವಿನಯ್‌ರಿಂದ ಪರಿಹಾರ

ಫೋನ್‌ ಇನ್ ವಿಡಿಯೊ ಸುದ್ದಿ
Last Updated 8 ಏಪ್ರಿಲ್ 2020, 8:48 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರು: ಕೊರೊನಾ ವೈರಸ್ ಸೋಂಕು (ಕೋವಿಡ್–19) ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಜಾರಿಯಲ್ಲಿರುವ 21 ದಿನಗಳ ಲಾಕ್‌ಡೌನ್ ಅನೇಕ ಮಂದಿಯಲ್ಲಿ ಮಾನಸಿಕ ಸಮಸ್ಯೆಗೆ ಕಾರಣವಾಗಿದೆ. ಒತ್ತಡ, ಖಿನ್ನತೆಯಿಂದ ಬಳಲುವವರ ಮತ್ತು ದುಶ್ಚಟಗಳಿಂದ ದೂರವಿರಲಾಗದೆ, ಲಾಕ್‌ಡೌನ್‌ನಿಂದಾಗಿ ಮದ್ಯ, ಸಿಗರೇಟು, ತಂಬಾಕು ಸಿಗದೇ ಚಡಪಡಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಭವಿಷ್ಯ, ಆರ್ಥಿಕತೆಯನ್ನು ನೆನೆದು ಅನೇಕರು ಮಾನಸಿಕ ಆಘಾತ, ಒತ್ತಡಕ್ಕೆ ಒಳಗಾಗಿದ್ದಾರೆ.

ಇವುಗಳನ್ನು ಗಮನದಲ್ಲಿಟ್ಟುಕೊಂಡು ‘ಪ್ರಜಾವಾಣಿ’ ಹಮ್ಮಿಕೊಂಡ ಫೋನ್‌ ಇನ್ ಕಾರ್ಯಕ್ರಮದಲ್ಲಿ ಹತ್ತಾರು ಮಂದಿಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ನಿಮ್ಹಾನ್ಸ್‌ನ ಮನೋತಜ್ಞ ಡಾ.ಬಿ.ವಿನಯ್. ಫೇಸ್‌ಬುಕ್‌ ಲೈವ್‌ನಲ್ಲಿ ಓದುಗರು ಕೇಳಿದ ಪ್ರಶ್ನೆಗಳಿಗೂ ಸೂಕ್ತ ಉತ್ತರ ನೀಡಿದ್ದಾರೆ.

ಮಾನಸಿಕ ನೆಮ್ಮದಿಗೆ ತಜ್ಞ ವೈದ್ಯರು ನೀಡಿದ ಪ್ರಮುಖ ಸಲಹೆಗಳು...

* ನಿಮ್ಮ ಮನೆಯಲ್ಲೇ ನೀವಿರಿ. ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ ಎಂಬುದು ನೆನಪಿರಲಿ. ಮನೆಯಲ್ಲಿ ಇದ್ದುಕೊಂಡು ನಮ್ಮ ಆರೋಗ್ಯ ಹೇಗೆ ಕಾಪಾಡಬಹುದು ಎಂಬುದನ್ನು ಯೋಚಿಸಿ.

* ದೇಶದ, ವಿಶ್ವದ ವಿದ್ಯಮಾನಗಳ ಬಗ್ಗೆ ಅನಗತ್ಯ ಚಿಂತೆ ಮಾಡಬೇಡಿ. ಅವುಗಳನ್ನು ನಿಭಾಯಿಸಲು ಸಂಬಂಧಪಟ್ಟವರು ಪ್ರಯತ್ನಿಸುತ್ತಾರೆ. ನಾವೀಗ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬಹುದು ಎಂಬುದರ ಬಗ್ಗೆ ಯೋಚಿಸಿ. ದುಶ್ಚಟಗಳಿಂದ ದೂರವಿದ್ದು ಸಕಾರಾತ್ಮಕ ಭಾವನೆ ಬೆಳಸಿಕೊಳ್ಳಿ. ಹಿಂದೆ ಏನಾಗಿತ್ತು ಅಥವಾ ನಾಳೆ ಏನಾಗಲಿದೆಯೋ ಎಂಬ ಚಿಂತೆ ಬಿಡಿ. ಈಗಿನ ಪರಿಸ್ಥಿತಿಯಲ್ಲಿ, ಸನ್ನಿವೇಶದಲ್ಲಿ ಜೀವಿಸಿ. ಈಗ ಏನಾಗಬೇಕೋ ಅದರ ಬಗ್ಗೆ ಮಾತ್ರ ಯೋಚಿಸಿ, ಕಾರ್ಯಪ್ರವೃತ್ತರಾಗಿ. ಈಗ ಹಿಂದಿನ ಕಾಲದಂತಲ್ಲ. ಮನೆಯೊಳಗೇ ಇದ್ದರೂ ಸ್ನೇಹಿತರ, ಸಂಬಂಧಿಕರ ಜತೆ ಆನ್‌ಲೈನ್ ಮೂಲಕ ಬೆರೆಯಬಹುದು. ದೈಹಿಕವಾಗಿ ದೂರವಿದ್ದರೂ ಮಾನಸಿಕವಾಗಿ ಹತ್ತಿರವಾಗಬಹುದು. ಅದರ ಬಗ್ಗೆ ಗಮನವಹಿಸಿ. ನಿಮ್ಮವರಿಗೆ ಸಮಯಕೊಡಿ. ನೀವೂ ಖುಷಿಯಾಗಿರಿ.

* ಪತಿ–ಪತ್ನಿ ನಡುವೆ ಸಾಮರಸ್ಯ ಕಾಪಾಡಿಕೊಳ್ಳಲು ಪ್ರಯತ್ನಿಸುವುದೂ ಅತೀ ಅಗತ್ಯ. ಇಬ್ಬರೂ ಪರಸ್ಪರ ಸಮಯ ಕೊಡುವುದು ಅಗತ್ಯ. ಹೊಂದಾಣಿಕೆಯಿಂದ ಬಾಳಿರಿ.

* ಕೊರನಾ ವೈರಸ್ ಸೋಂಕಿನ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮವೇ. ಆದರೆ ಅದುವೇ ಅತಿಯಾಗದಂತೆ ನೋಡಿಕೊಳ್ಳಿ. ಎಷ್ಟು ಜನ ಮೃತಪಟ್ಟರು ಎಂಬುದನ್ನೇ ಪದೇಪದೇ ನೋಡುವುದು ಮತ್ತು ತಿಳಿಯುವುದನ್ನು ಬಿಟ್ಟುಬಿಡಿ. ಚೆನ್ನಾಗಿ ನಿದ್ದೆ ಮಾಡಿ. ಜಂಕ್ ಫುಡ್‌ ಸೇವಿಸಬೇಡಿ. ಮಿತವಾಗಿ, ಹಿತವಾಗಿ ಮತ್ತು ಸರಿಯಾಗಿ ಆಹಾರ ಸೇವನೆ ಮಾಡಿ.

* ಏನೇ ಆರೋಗ್ಯ ಸಮಸ್ಯೆಯಾದರೂ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ. ಸಂಬಂಧಪಟ್ಟ ವೈದ್ಯರು ಅಥವಾ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳಿ, ಸಲಹೆ/ಚಿಕಿತ್ಸೆ ಪಡೆಯಿರಿ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ ಎಂಬುದು ನೆನಪಿರಲಿ.

ಸಹಾಯವಾಣಿ ಸಂಖ್ಯೆಗಳು

ನಿಮ್ಹಾನ್ಸ್ – 080 46110007
ದುಶ್ಚಟಗಳ ಕುರಿತ ಪ್ರಶ್ನೆಗಳಿಗೆ – 1800112356, 01122901701

ಪ್ರಮುಖ ಪ್ರಶ್ನೆಗಳು ಮತ್ತು ಉತ್ತರಗಳನ್ನು ಇಲ್ಲಿ ನೀಡಲಾಗಿದೆ:

ಪ್ರಶ್ನೆ: ಸರ್ ಈ ಲಾಕ್‌ಡೌನ್‌ನಿಂದ ಹೆಚ್ಚು ಸೊಮಾರಿಗಳಾಗುತ್ತಾಇದ್ದೇವೆ ಅನಿಸುತ್ತಿದೆ,ಆದ್ದರಿಂದ ನಮ್ಮನ್ನು ನಾವು ಹೇಗೆ ಕ್ರಿಯಶೀಲರಾಗಿ ಇಟ್ಟುಕೊಳ್ಳಬಹುದು?
– ಪ್ರದೀಪ್ ನಾಗರಾಜ್

ಉತ್ತರ: ಈ ಸಮಯವನ್ನು ನಾವು ಸದುಪಯೋಗಪಡಿಸಿಕೊಳ್ಳಬೇಕು. ಕ್ರಿಯಾಶೀಲ ಕೆಲಸಗಳಿಗೆ ಈ ಸಮಯ ಬಳಸಿಕೊಳ್ಳಬೇಕು. ಮನೆಯಲ್ಲಿರುವ ವೇಳೆ ಅಡುಗೆ ಮಾಡುವುದು, ಇತರ ಮನೆಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ನಮ್ಮ ವಿಲ್‌ ಪವರ್‌ ಬಗ್ಗೆ ಫೋಕಸ್ ಮಾಡಬೇಕು.

ಪ್ರಶ್ನೆ: ರಾತ್ರಿ ನಿದ್ದೆ ಬರುತ್ತಿಲ್ಲ. 8 ತಿಂಗಳುಗಳಿಂದ ಔಷಧತೆಗೊಳ್ತಾ ಇದ್ದೇನೆ. ಇದಕ್ಕೇನು ಪರಿಹಾರ
– ಮನೋಜ್, ಚಿಕ್ಕಮಗಳೂರು

ಉತ್ತರ: ಈಗ ತೆಗೆದುಕೊಳ್ಳುತ್ತಿರುವ ಔಷಧ ಮುಂದುವರಿಸಿ. ಹಿಂದಿನಿಂದಲೇ ಮಾನಸಿಕ ಸಮಸ್ಯೆ ಇರುವವರಿಗೆ ಈಗಿನ ಸ್ಥಿತಿಯಲ್ಲಿ ಅದು ಹೆಚ್ಚಾಗುವುದು ಸಾಮಾನ್ಯ. ಇದರ ಪರಿಹಾರಕ್ಕೆ ನಿರ್ದಿಷ್ಟ ಸಮಯದಲ್ಲಿ ರಾತ್ರಿ ನಿದ್ದೆಗೆ ತೆರಳುವ ಅಭ್ಯಾಸ ಮಾಡಿಕೊಳ್ಳಬೇಕು. ಹಗಲು ಹೊತ್ತು ಮಲಗಲೇ ಬಾರದು. ಸಂಜ ವೇಳೆ ಲಘು ಆಹಾರ ಸೇವನೆ ಉತ್ತಮ. ಪ್ರತಿಯೊಂದು ಕೆಲಸಕ್ಕೂ ಸಮಯ ನಿಗದಿಪಡಿಸಿ

ಪ್ರಶ್ನೆ: ಸಂಗಿತ ಕೇಳುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆಯೇ?
– ಸಂತೋಷ ಜಾಬೀನ್ ಸುಲೇಪೇಟ

ಉತ್ತರ: ಸಂಗೀತ ಕೇಳುವುದು ಉತ್ತಮ. ನಿಮ್ಮ ಮನಸಿಗೆ ಯಾವುದು ಇಷ್ಟ ಕೊಡುತ್ತದೆಯೋ ಅಂತಹ ಸಂಗೀತ ಕೇಳಿ. ಅವರವರ ಭಾವಕ್ಕೆ ತಕ್ಕಂತೆ ಅದನ್ನು ಆರಿಸಿಕೊಳ್ಳಬಹುದು

ಪ್ರಶ್ನೆ: ಮಕ್ಕಳು ಬರೀ ಮೊಬೈಲ್ ಮತ್ತು ಟಿವಿ ಕೇಳುತ್ತಾರೆ. ಅವರಿಗೆ ಆಟ ಆಡೋಕೆ ಹೊರಗೆ ಕಳಿಸುವುದಕ್ಕೂ ಆಗಲ್ಲ. ಬೇರೆ ಏನು ಮಾಡಬಹುದು ಸರ್?
– ಬಸವರಾಜ್ ಬಂದಿಹಾಳ್

ಉತ್ತರ: ಮಕ್ಕಳಿಗೆ ನಿರ್ದಿಷ್ಟವಾದ ಸಮಯ ಕೊಡಬೇಕು. ಮಕ್ಕಳ ಜತೆ ಕುಳಿತು ಮಾತನಾಡಿ ಅವರ ಅಭಿರುಚಿಗಳನ್ನು ತಿಳಿದುಕೊಳ್ಳಿ. ದೂರವಾಣಿ, ವಿಡಿಯೊ ಕಾಲ್ ಮೂಲಕ ಸ್ನೇಹಿತರ ಜತೆ ಬೆರೆಯಲು ಅವಕಾಶ ಮಾಡಿಕೊಡಿ. ಮನೆ ಕೆಲಸಗಳ ಬಗ್ಗೆ ತಿಳಿವಳಿಕೆ ಮೂಡಿಸಿ. ಅವರ ವಯಸ್ಸಿಗೆ ತಕ್ಕಂತೆ ಅವರಿಗೆ ಮಾಹಿತಿ ನೀಡಬೇಕು. ನಿಮ್ಮ ಮನಸ್ಸಿನ ಮೇಲಿನ ಭಾರವನ್ನು ಮಕ್ಕಳ ಮನಸ್ಸಿನ ಮೇಲೆ ಹೇರಬಾರದು.

ಪ್ರಶ್ನೆ: ಈವರೆಗೆ ಈ ರೀತಿ ಮನೆಯಲ್ಲಿ ಕುಳಿತುಕೊಂಡಿಲ್ಲ. ಏನು ಮಾಡಬೇಕು ಎಂದು ತೋಚುತ್ತಿಲ್ಲ. ವೇತನ ಬರುತ್ತೆ, ಆದರೂ ಸುಮ್ಮನೆ ಕುಳಿತುಕೊಳ್ಳುವ ಬಗ್ಗೆ ತಪ್ಪಿತಸ್ಥ ಭಾವನೆ ಬರುತ್ತೆ. ಏನು ಮಾಡಲಿ?
– ಐಟಿ ಉದ್ಯೋಗಿ

ಉತ್ತರ: ಕೆಲಸದಲ್ಲಿ ವ್ಯಸ್ತರಾಗಿದ್ದಾಗ ಮಾಡಲಾಗದ ಕೆಲಸಗಳ ಕಡೆ ಗಮನಕೊಡಿ. ಮನೆಮಂದಿಯೊಂದಿಗೆ ಬೆರೆಯಿರಿ. ನೆಂಟರಿಗೆ, ಸ್ನೇಹಿತರಿಗೆ ದೂರವಾಣಿ ಕರೆ, ವಿಡಿಯೊ ಕಾಲ್ ಮಾಡಿ ಮಾತನಾಡಿ.ಮನಸ್ಸು ಹಗುರಗೊಳಿಸಿ.

ಪ್ರಶ್ನೆ: ಕುಡಿತದ ಅಭ್ಯಾಸ ಇತ್ತು. ಈಗ ಸಿಗುತ್ತಾ ಇಲ್ಲ. ರಾತ್ರಿ ನಿದ್ದೆಯೇ ಬರುತ್ತಿಲ್ಲ. ಪ್ರತಿ ದಿನ 180 ಎಂ.ಎಲ್‌ನಷ್ಟು ಕುಡಿಯುತ್ತಿದ್ದೆ.
– ರಾಜಶೇಖರ್, ಬೆಂಗಳೂರು

ಉತ್ತರ: ಈ ಲಾಕ್‌ಡೌನ್ ಅವಧಿಯನ್ನು ಕುಡಿತ ಬಿಡುವುದಕ್ಕೆ ಸುಸಮಯ ಅಂತ ನೀವು ಅಂದುಕೊಂಡಿರುವುದು ಒಳ್ಳೆಯ ಬೆಳವಣಿಗೆ. ತುಂಬಾ ಸಮಯದಿಂದ ಕುಡಿತದ ಅಭ್ಯಾಸ ಇದ್ದವರಿಗೆ ನಿದ್ದೆ ಬಾರದಿರುವುದು, ಕೈ–ಕಾಲು ನಡುಗುವುದು ಇತ್ಯಾದಿ ಲಕ್ಷಣಗಳು ಇರುತ್ತವೆ. ಆದರೆ ಇವು ಶಾಶ್ವತ ಅಲ್ಲ. ಕೆಲವು ದಿನಗಳ ಬಳಿಕ ಕಡಿಮೆಯಾಗುತ್ತದೆ. ಹಾಗೂ ಒಂದು ವೇಳೆ ಕಡಿಮೆ ಆಗದಿದ್ದರೆ 104 ಸಹಾಯವಾಣಿಗೆ ಕರೆ ಮಾಡಿ ಬಿಬಿಎಂಪಿ ವೈದ್ಯರನ್ನು ಭೇಟಿಯಾಗಬಹುದು. ಅವರು ಇದಕ್ಕೆ ಪರಿಹಾರ ಸೂಚಿಸುತ್ತಾರೆ. ವೈದ್ಯರು ಪರ್ಯಾಯ ಔಷಧ ಕೊಟ್ಟು ನೆರವಾಗುತ್ತಾರೆ.

ಪ್ರಶ್ನೆ: ಮದ್ಯ, ತಂಬಾಕು ಇಲ್ಲದೆ ಜೀವನ ಕಷ್ಟವಾಗಿದೆ. ಇವುಗಳನ್ನು ಬಿಟ್ಟು ಜೀವಿಸುವುದು ಹೇಗೆ?
– ಶಿವಾನಂದ್, ಶಿವಮೊಗ್ಗ

ಉತ್ತರ: ಈ ಚಟ ಅನ್ನುವುದು ಹಲವು ಹಂತಗಳಲ್ಲಿರುತ್ತವೆ. ಅಪರೂಪಕ್ಕೆ ಕುಡಿತ, ತಂಬಾಕು ಸೇವನೆ ಮಾಡುವವರಿಗೆ ಇತರ ಹವ್ಯಾಸಗಳ ಕಡೆ ಗಮನಕೊಟ್ಟರೆ ಅದರಿಂದ ಹೊರಬರಬಹುದು. ದಿನಾ ಸೇವನೆ ಮಾಡುವ ಅಭ್ಯಾಸ ಇರುವವರು ಸ್ವಲ್ಪ ಹೆಚ್ಚು ಶ್ರಮಪಡಬೇಕಾಗುತ್ತದೆ. ಇದರಿಂದಲೂ ನಿಯಂತ್ರಣಕ್ಕೆ ಬಾರದಿದ್ದರೆ ವೈದ್ಯರ ನೆರವು ಅಗತ್ಯ. ಅತಿಯಾಗಿ ಕುಡಿತ, ತಂಬಾಕು ಸೇವನೆಯಲ್ಲಿ ತೊಡಗಿಸಿಕೊಂಡಿರುವವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅನಿವಾರ್ಯ.

ಪ್ರಶ್ನೆ: 38 ವರ್ಷಗಳಿಂದ ಉದ್ಯೋಗದಲ್ಲಿದ್ದೇನೆ. ಈಗ ದಿಢೀರ್ ಆಗಿ ಮನೆಯಲ್ಲಿ ಕುಳಿತು ಬೇಸರವಾಗಿದೆ. ಯಾವುದರಲ್ಲೂ ಮನಸು ಕೇಂದ್ರೀಕರಿಸಲಾಗುತ್ತಿಲ್ಲ. ಹಗಲು ಮಲಗಿದರೆ ರಾತ್ರಿ ನಿದ್ದೆಯೇ ಬರಲ್ಲ
– ಶಶಿಕುಮಾರ್, ಜಾಲಹಳ್ಳಿ

ಉತ್ತರ: ಮನಸ್ಸಿನ ಯೋಚನಾ ಲಹರಿಯನ್ನೇ ನಾವು ಬದಲಾಯಿಸಿಕೊಳ್ಳಬೇಕು. ಈ ಸೋಂಕು ನನಗೆ ಮಾತ್ರವಲ್ಲ ಇತರರಿಗೂ ಬಾರದಂತೆ ಮಾಡಲು ನೆರವಾಗುತ್ತೇನೆ ಅಂತ ನಿರ್ಧರಿಸಿಕೊಳ್ಳಬೇಕು. ಬೆಳಿಗ್ಗೆ ಹೊತ್ತು ಮಲಗಬಾರದು. ಮಕ್ಕಳು–ಮೊಮ್ಮಕ್ಕಳ ಜತೆ ಹೇಗೆ ಬೆರೆಯಬಹುದು, ಅವರಿಗೆ ಹೇಗೆ ನೆರವಾಗಬಹುದು ಎಂಬ ಬಗ್ಗೆ ಯೋಚಿಸಿ. ನೆರೆಯವರಿಗೆ ಹೇಗೆ ನೆರವಾಗಬಹುದು ಎಂಬುದನ್ನು ಯೋಚಿಸಿ. ಜವಾಬ್ದಾರಿಗಳನ್ನು ತೆಗೆದುಕೊಂಡಾಗ ತನ್ನಿಂತಾನೆ ಮನಸಿನ ಬೇಸರ ಇಲ್ಲವಾಗುತ್ತದೆ.

ಪ್ರಶ್ನೆ: 2–3 ವರ್ಷದಿಂದ ಖಿನ್ನತೆಯಿಂದ ಬಳಲುತ್ತಿದ್ದೇನೆ. 3 ವರ್ಷದಿಂದ ಔಷಧ ತೆಗೆದುಕೊಳ್ಳುತ್ತಾ ಇದ್ದೇನೆ
–ಬಸವರಾಜ್, ಬಾಗಲಕೋಟೆ

ಉತ್ತರ: ನಿಮ್ಮ ಸಮಸ್ಯೆಗೆ ಈಗಾಗಲೇ ಚಿಕಿತ್ಸೆ ನೀಡುವ ವೈದ್ಯರ ಸಲಹೆ ಪಡೆಯುವುದು ಸೂಕ್ತ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರು ನಿಮಗೆ ಚಿಕಿತ್ಸೆ ನಿಡುವ ವೈದ್ಯರ ಸಲಹೆ ಪಡೆಯುವುದೇ ಸೂಕ್ತ. ಅವರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೆ ದೂರವಾಣಿ ಮೂಲಕವಾದರೂ ಸಲಹೆ ಕೇಳಬಹುದು. ಅದೂ ಆಗದಿದ್ದರೆ ಸಹಾಯವಾಣಿಗಳಿಗೆ ಕರೆ ಮಾಡಿ ನೆರವು ಪಡೆಯಬಹುದು

ಪ್ರಶ್ನೆ: ಸ್ನೇಹಿತ ತಿಪ್ಪೇಶ್ ಅವರಿಗೆ ಕುಡಿತದ ಚಟ ಅತಿಯಾಗಿದೆ. ಸ್ವಲ್ಪ ದಿನ ಬಿಟ್ಟಿದ್ರು. ಆದರೆ ಈಗ ಆಗುತ್ತಿಲ್ಲ
– ವಿನಯ್, ಬಳ್ಳಾರಿ

ಉತ್ತರ: ಮೊದಲನೆಯದಾಗಿ ಕುಡಿತ ಬಿಡಬೇಕು ಎಂಬುದು ಅವರಿಗೇ ಮನಸ್ಸಿಗೆ ಬರಬೇಕು. ಅವರ ಜತೆ ಕುಳಿತು ಮಾತನಾಡಿ. ನೇರವಾಗಿ ಕುಡಿತ ಬಿಡುವಂತೆ ಸೂಚಿಸಬೇಡಿ. ಬದಲಿಗೆ ಅದರ ದುಷ್ಪರಿಣಾಮ, ಬಿಟ್ಟರೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಸಿ, ಪ್ರೋತ್ಸಾಹಿಸಿ. ಸಹಾಯವಾಣಿ ಅಥವಾ ಮನೋತಜ್ಞರ ನೆರವು ಪಡೆಯಿರಿ.

ಪ್ರಶ್ನೆ: ಮನೆ ಬಿಟ್ಟು ಎಲ್ಲಿಯೂ ಹೋಗಲು ಸಾದ್ಯವಾಗುತ್ತಿಲ್ಲ. ಟಿವಿ ನೋಡಿ ಬೇಜಾರಾಗಿದೆ. ಸುದ್ದಿಗಳನ್ನು ಹೆಚ್ಚು ನೋಡುತ್ತಿದ್ದೇನೆ.
– ಕೃಷ್ಣಪ್ಪ, ಬೆಂಗಳೂರು

ಉತ್ತರ: ನಾವು ಕಡ್ಡಾಯವಾಗಿ ಮನೆಯಲ್ಲಿ ಕುಳಿತಿದ್ದೇವೆ ಅಂತ ಅಂದುಕೊಳ್ಳಬಾರದು. ಇದು ನಿಮಗಷ್ಟೇ ಅಲ್ಲ, ಎಲ್ಲರ ಆರೋಗ್ಯ ಗಮನದಲ್ಲಿಟ್ಟುಕೊಂಡು ಕೈಗೊಂಡ ನಿರ್ಧಾರ. ಸದಾ ಟಿವಿ, ಸುದ್ದಿ ನೋಡುವುದನ್ನು ಬಿಟ್ಟುಬಿಡಿ. ಮಾಹಿತಿ ತಿಳಿಯುವುದಕ್ಕಷ್ಟೇ ಟಿವಿ ನೋಡಿ. ತುಂಬಾ ಹೊತ್ತು ನೋಡುವುದರಿಂದ ಸಮಸ್ಯೆಗಳು ಹಲವು. ಟಿವಿ ನೋಡುವುದಿದ್ದರೂ ಬೇರೆ ಬೇರೆ ಕಾರ್ಯಕ್ರಮಗಳನ್ನು ನೋಡಿ. ಇತರ ಚಟುವಟಿಕೆಗಳ ಬಗ್ಗೆ ಗಮನಕೊಡಿ. ಮನೆಕೆಲಸ, ಬಟ್ಟೆ ತೊಳೆಯುವುದು ಇಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಕ್ರಿಯಾಶೀಲರಾಗಿರಲು ಪ್ರಯತ್ನಿಸಿ

ಪ್ರಶ್ನೆ: ಸ್ವ ಉದ್ಯೋಗಿ. ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆದಾಯಕ್ಕೆ ಏನು ಮಾಡುವುದು?
– ರೀನಾ, ಉಪ್ಪುಂದ

ಉತ್ತರ: ಸರ್ಕಾರ ಕ್ರಮಕಗಳನ್ನು ಕೈಗೊಳ್ತಿದೆ. ಸದ್ಯಕ್ಕೆ ನಿಮ್ಮ ನಿಯಂತ್ರಣದಲ್ಲಿ ಏನಿದೆ ಎಂಬುದರ ಬಗ್ಗೆ ಯೋಚನೆ ಮಾಡಿ. ಇದು ಸದ್ಯದ ಪರಿಸ್ಥಿತಿಯಷ್ಟೆ. ಮೂರ್ನಾಲ್ಕು ವಾರ ಹೋಗುತ್ತಿದ್ದಂತೆ ಎಲ್ಲ ಸರಿಹೋಗುತ್ತೆ

ಪ್ರಶ್ನೆ: ತುಂಬಾ ವರ್ಷಗಳ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದೆ. ಇತ್ತೀಚೆಗೆ ಸ್ವಲ್ಪ ಸರಿಯಾಗಿತ್ತು. ಈಗ 15 ದಿನಗಳಿಂದ ಮತ್ತೆ ಆರಂಭವಾಗಿದೆ. 73 ವರ್ಷ ವಯಸ್ಸು. ಮಾನಸಿಕವಾಗಿ ಬೇಜಾರಾಗಿದೆ. ನಿದ್ದೆ ಸಮಸ್ಯೆ ಇದೆ.
– ತ್ಯಗರಾಜ್, ಕೋರಮಂಗಲ

ಉತ್ತರ: ಸರಿಯಾಗಿ ಚಟುವಟಿಕೆಯಲ್ಲಿ ನಿರತರಾಗಿರದಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ. ಮನೆಯೊಳಗೇ ಸ್ವಲ್ಪ ನಡೆದಾಡುವುದು, ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ನಿರಂತರ ಯೋಚನೆಯಲ್ಲಿ ಮುಳುಗಿರುವುದನ್ನು ಬಿಡಿ. ಮನೆಯಲ್ಲೇ ಎಲ್ಲರೂ ಇದ್ದಾರೆ. ಮಕ್ಕಳ ಜತೆ ಆಟವಾಡಿ ಚಟುವಟಿಕೆಯಿಂದ ಇರಲು ಪ್ರಯತ್ನಿಸಿ. ನಿದ್ದೆಗೆ ಸರಿಯಾದ ಸಮಯ ನಿಗದಿಪಡಿಸಿಕೊಳ್ಳಿ. ಸಂಜೆ ವೇಳೆ ಅತಿಯಾದ ಆಹಾರ ಸೇವನೆ ಬೇಡ. ಇಷ್ಟೆಲ್ಲ ಪ್ರಯತ್ನ ಮಾಡಿಯೂ ನಿಯಂತ್ರಣಕ್ಕೆ ಬಾರದಿದ್ದರೆ ವೈದ್ಯರನ್ನು ಸಂಪರ್ಕಿಸಬಹುದು. ಅಥವಾ ನಿಮ್ಹಾನ್ಸ್ ಸಹಾಯವಾಣಿಗೆ ಕರೆ ಮಾಡಬಹುದು.

ಪ್ರಶ್ನೆ: ಮಕ್ಕಳು ಮೊಬೈಲ್, ಇಂಟರ್ನೆಟ್ ಇವುಗಳಲ್ಲೇ ಮುಳುಗಿರುತ್ತಾರೆ. ಪರೀಕ್ಷೆ ಬಗ್ಗೆಯೂ ಅನಿಶ್ಚಿತತೆ ಇದೆ.
– ಬಿ.ಎಂ.ಸುರೇಶ್, ಬಂಗಾರಪೇಟೆ

ಉತ್ತರ: ಈಗ ಸಿಕ್ಕಿರುವ ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕು. ಈ ಸಮಯವನ್ನು ಮುಂದಿನ ಓದಿಗೆ ಹೇಗೆ ತಯಾರಿ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿವಳಿಕೆ ಹೇಳಿ. ಟಿವಿ ನೋಡಲು, ಇಂಟರ್ನೆಟ್ ಬಳಕೆ, ಗೇಮ್ಸ್‌ಗಳಿಗೆ ಇಂತಿಷ್ಟು ಎಂದು ಸಮಯ ನಿಗದಿಪಡಿಸಿ. ಇಂಟರ್ನೆಟ್‌ನಲ್ಲಿ ಅವರಿಗೆ ಪೂರಕವಾಗಿರುವ ಅಂಶಗಳನ್ನು ಬಳಸಲು ಮಾರ್ಗದರ್ಶನ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT