ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ!

7

ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ!

Published:
Updated:

ಬೆಂಗಳೂರು: ತಮ್ಮೊಂದಿಗೆ ವಾಗ್ವಾದಕ್ಕಿಳಿದ ನೆರೆಮನೆಯವರನ್ನು ಬೆದರಿಸಲು ಮಹಡಿಯಲ್ಲಿ ನಿಂತು ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ 17 ವರ್ಷದ ಬಾಲಕ ಹಾಗೂ ಮಾಜಿ ಸೈನಿಕ ಲಕ್ಷ್ಮಣ್ ಖಂಡೇಕರ್ ಎಂಬುವರನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಸುಬ್ರಹ್ಮಣ್ಯಪುರ ಸಮೀಪದ ಬಿಡಿಎ ಲೇಔಟ್ 1ನೇ ಅಡ್ಡರಸ್ತೆಯಲ್ಲಿ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊದಲು ಸೇನೆಯಲ್ಲಿದ್ದ ಲಕ್ಷ್ಮಣ್, ಎಂಟು ವರ್ಷಗಳ ಹಿಂದೆ ಸ್ವಯಂ ನಿವೃತ್ತಿ ಪಡೆದಿದ್ದರು. ರಾತ್ರಿ ಮನೆಯಲ್ಲೇ ಪಾನಮತ್ತರಾಗಿದ್ದ ಅವರು, ಆಚೆ ಬಂದು ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದರು.

ಈ ವೇಳೆ ನೆರೆಮನೆಯ ಮಹೇಶ್‌ಕುಮಾರ್, ‘ಎಲ್ಲರೂ ಮಲಗಿದ್ದಾರೆ. ಇಷ್ಟೊಂದು ಜೋರಾಗಿ ಮಾತನಾಡಿದರೆ ತೊಂದರೆ ಆಗುವುದಿಲ್ಲವೇ’ ಎಂದಿದ್ದರು. ಇದರಿಂದ ಕೆರಳಿದ ಲಕ್ಷ್ಮಣ್, ‘ನನಗೆ ಬುದ್ಧಿ ಹೇಳಲು ನೀನ್ಯಾರು’ ಎಂದು ಗಲಾಟೆ ಶುರು ಮಾಡಿದ್ದರು. ಕ್ರಮೇಣ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಎರಡೂ ಕುಟುಂಬಗಳು ಬೀದಿಗಿಳಿದು ಜಗಳ ಪ್ರಾರಂಭಿಸಿದ್ದವು.

ಈ ಹಂತದಲ್ಲಿ ಮನೆಯಿಂದ ರಿವಾಲ್ವರ್ ತೆಗೆದುಕೊಂಡು ಬಂದು ಮಹಡಿಗೆ ತೆರಳಿದ ಲಕ್ಷ್ಮಣ್ ಅವರ ಅಕ್ಕನ ಮಗ, ಅಲ್ಲಿಂದಲೇ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ‘ನಮ್ಮನ್ನು ಎದುರು ಹಾಕಿಕೊಂಡರೆ ಸುಟ್ಟು ಬಿಡುತ್ತೇನೆ’ ಎಂದು ಬೆದರಿಸಿದ್ದಾನೆ. ಆಗ ಪರಿಸ್ಥಿತಿ ತಣ್ಣಗಾಗಿದೆ. ಗುಂಡಿನ ಸದ್ದು ಕೇಳಿ ಮನೆಗಳಿಂದ ಹೊರಬಂದ ಸ್ಥಳೀಯರು, ಪೊಲೀಸ್ ನಿಯಂತ್ರಣ ಕೊಠಡಿಗೆ (100) ವಿಷಯ ತಿಳಿಸಿದ್ದಾರೆ.

ಲೈಸನ್ಸ್ ಅವಧಿ ಮುಗಿದಿದೆ: ‘ಮನೆಯಲ್ಲಿ ರಿವಾಲ್ವರ್ ಇರುವ ವಿಚಾರ ಅಕ್ಕನ ಮಗನಿಗೆ ಗೊತ್ತಿರಲಿಲ್ಲ. ಶನಿವಾರ ಮನೆಯಲ್ಲಿ ಪೂಜೆ ಇತ್ತು. ಹೀಗಾಗಿ, ಪೂಜೆಗೆ ಇಡಲೆಂದು ಗುರುವಾರ ರಿವಾಲ್ವರ್‌ ಸ್ವಚ್ಛಗೊಳಿಸಿ ಅಲ್ಮೆರಾದಲ್ಲಿ ಇಟ್ಟಿದ್ದೆವು. ಅದನ್ನು ನೋಡಿದ್ದ ಆತ, ಕೋಪದಲ್ಲಿ ರಿವಾಲ್ವರ್ ತಂದು ಗುಂಡು ಹಾರಿಸಿದ್ದಾನೆ’ ಎಂದು ಲಕ್ಷ್ಮಣ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಹೇಳಿದರು.

‘ಪರವಾನಗಿ ಪಡೆದು ಆ ರಿವಾಲ್ವರ್ ಇಟ್ಟುಕೊಂಡಿರುವ ಲಕ್ಷ್ಮಣ್, ಪರವಾನಗಿ ಅವಧಿ ಮುಗಿದು ಎರಡು ವರ್ಷ ಕಳೆದರೂ ನವೀಕರಣ ಮಾಡಿಸಿಲ್ಲ. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ರಿವಾಲ್ವರ್ ಜಪ್ತಿ ಮಾಡಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !