ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ | ಮೇ 31ರೊಳಗೆ ಎಲ್ಲ ಚರಂಡಿ ಸ್ವಚ್ಛ: ತುಷಾರ್‌ ಗಿರಿನಾಥ್‌

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿಕೆ
Published 19 ಮೇ 2024, 0:30 IST
Last Updated 19 ಮೇ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಗಾಲವನ್ನು ಎದುರಿಸಲು ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೇ 31ರ ಒಳಗೆ ಎಲ್ಲ ರಸ್ತೆಗಳ ಚರಂಡಿ ಸ್ವಚ್ಛಗೊಳ್ಳಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಶನಿವಾರ ತಿಳಿಸಿದರು.

ಪ್ಲಾಸ್ಟಿಕ್‌, ಮನೆ ಕಸಗಳೆಲ್ಲ ಚರಂಡಿ ಸೇರಿ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿರುವುದನ್ನು ಸರಿಪಡಿಸಲಾಗುತ್ತಿದೆ. ಇದೇ ರೀತಿ ರಾಜಕಾಲುವೆಯಲ್ಲಿ ಕೂಡ ಘನತ್ಯಾಜ್ಯಗಳು ಅಲ್ಲಲ್ಲಿ ನಿಂತಿದ್ದು, ಅದನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಈಗಾಗಲೇ 300ಕ್ಕೂ ಅಧಿಕ ಮರಗಳನ್ನು, 800ಕ್ಕೂ ಅಧಿಕ ರೆಂಬೆಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಎಲ್ಲಿಯಾದರೂ ಅಪಾಯಕಾರಿ ಸ್ಥಿತಿಯಲ್ಲಿ ಮರ ಇರುವ ಬಗ್ಗೆ ಸಾರ್ವಜನಿಕರು ಸಹಾಯವಾಣಿಗೆ ಮಾಹಿತಿ ನೀಡಿದರೆ ತಕ್ಷಣ ತೆರವುಗೊಳಿಸಲಾಗುವುದು ಎಂದು ಹೇಳಿದರು.

‘ಜಲಮಂಡಳಿ, ಬೆಸ್ಕಾಂ ಜೊತೆಗೆ ಸಮನ್ವಯ ಸಾಧಿಸಿ ತಂಡ ರಚಿಸಲಾಗಿದೆ. ನೀರು ನಿಲ್ಲುವ, ಮನೆಗಳಿಗೆ ನೀರು ನುಗ್ಗುವ ಪ್ರದೇಶಗಳಲ್ಲಿ ಶಾಶ್ವತವಾಗಿ ಪರಿಹಾರ ಕೈಗೊಳ್ಳಲು ಸಾಧ್ಯವಾಗದ ಕಡೆಗಳಲ್ಲಿ ಮೋಟರ್ ಪಂಪ್‌ ಅಳವಡಿಸಿ, ಪೈಪ್‌ ಮೂಲಕ ನೀರು ಹೊರ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಜನರು ಯಾವುದೇ ರೀತಿಯಲ್ಲಿ ಭಯಪಡುವ ಅಗತ್ಯವಿಲ್ಲ’ ಎಂದು ವಿವರಿಸಿದರು.

ಕೊಳವೆಬಾವಿ: ಅಂತರ್ಜಲ ಮಟ್ಟ ಕುಸಿತದಿಂದ ಅಗತ್ಯ ಇರುವ ಕಡೆಗೆ ಕೊಳವೆಬಾವಿ ಕೊರೆಯಲು ಕ್ರಮ ಕೈಗೊಳ್ಳಲಾಗಿತ್ತು. ಮುಂಗಾರುಪೂರ್ವ ಮಳೆ ಬಿದ್ದಿದ್ದರೂ ಅಂತರ್ಜಲ ಹೆಚ್ಚಾಗಿಲ್ಲ. ಹಾಗಾಗಿ ಮೇ 31ರ ವರೆಗೂ ಅಗತ್ಯ ಬಿದ್ದಲ್ಲಿ, ಕೊಳವೆಬಾವಿ ಕೊರೆಯುವ ಕೆಲಸಗಳು ಮುಂದುವರಿಯಲಿದೆ. ಬಳಿಕ ಸ್ಥಗಿತಗೊಳಿಸಲಾಗುವುದು ಎಂದರು.

Cut-off box - ‘ತೆರಿಗೆ ‍ಪಾವತಿಸಿ’ ‘ಪ್ರತಿ ವರ್ಷ ಏಪ್ರಿಲ್‌ ಒಳಗೆ ಬಡ್ಡಿರಹಿತವಾಗಿ ತೆರಿಗೆ ಪಾವತಿಸಬಹುದಿತ್ತು. ಒಂದು ತಿಂಗಳು ಹೆಚ್ಚುವರಿಯಾಗಿ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ವರ್ಷ ಜುಲೈ ಅಂತ್ಯದವರೆಗೆ ಬಡ್ಡಿರಹಿತವಾಗಿ ತೆರಿಗೆ ಪಾವತಿಗೆ ಅವಕಾಶ ನೀಡಿರುವುದರಿಂದ ಜನರು ನಿಧಾನಗತಿಯಲ್ಲಿ ಪಾವತಿಸುತ್ತಿದ್ದಾರೆ. ಜುಲೈ ಅಂತ್ಯದವರೆಗೆ ಕಾಯದೇ ಮೊದಲೇ ಪಾವತಿಸಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಮನವಿ ಮಾಡಿದರು. ‘ತೆರಿಗೆ ನೀತಿಗೆ ಸರ್ಕಾರವು ತಿದ್ದುಪಡಿ ಮಾಡಿರುವುದರಿಂದ ತೆರಿಗೆ ವಸೂಲಿಗೆ ಕಠಿಣ ಕ್ರಮ ವಹಿಸಲು ನಮಗೆ ಅವಕಾಶ ಸಿಕ್ಕಿದೆ. ಹಲವು ವರ್ಷಗಳಿಂದ ಕಂದಾಯ ಕಟ್ಟದವರಿಂದ ವಸೂಲಿ ಮಾಡಲಾಗುತ್ತಿದೆ. ಈ ಬಾರಿ  ತೆರಿಗೆ ಸಂಗ್ರಹ ಹೆಚ್ಚಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT